
ಮುಂಬೈ(ಜೂ.25): ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ವಿರುದ್ಧ ಹೋರಾಟ ನಡೆಸಲು ಸಿದ್ಧವಾಗಿದ್ದೇನೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ಘೋಷಿಸಿದ್ದಾರೆ.
ಬಂಡಾಯ ನಾಯಕ ಏಕನಾಥ ಶಿಂಧೆಯನ್ನು ತರಾಟೆಗೆ ತೆಗೆದುಕೊಂಡ ಉದ್ಧವ್, ‘ನಿಮ್ಮ ಪುತ್ರ (ಶ್ರೀಕಾಂತ್ ಶಿಂಧೆ) ಲೋಕಸಭಾ ಸಂಸದನಾಗಿರುವಾಗ ನನ್ನ ಪುತ್ರ ಆದಿತ್ಯ ರಾಜಕೀಯದಲ್ಲಿ ಬೆಳೆಯಬಾರದೇ?’ ಎಂದು ಪ್ರಶ್ನಿಸಿದ್ದಾರೆ.
ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ವಚ್ರ್ಯುವಲ್ ಆಗಿ ಮಾತನಾಡಿದ ಠಾಕ್ರೆ, ‘ಸಿಎಂ ಅಧಿಕೃತ ನಿವಾಸ ತೆರವುಗೊಳಿಸಿ ಅಧಿಕಾರದ ಪ್ರಲೋಭನೆಯನ್ನು ತ್ಯಜಿಸಿದ್ದೇನೆ, ಆದರೆ ಹೋರಾಡುವ ಸಂಕಲ್ಪವನ್ನಲ್ಲ. ಶಾಸಕರು ಬಂಡಾಯಗಾರರೊಂದಿಗೆ ಸೇರಲು ಬಯಸಿದ್ದರೆ ನಾವು ಅವರನ್ನು ತಡೆಯುವುದಿಲ್ಲ’ ಎಂದರು.
‘ಪಕ್ಷದ ಶಾಸಕರ ಬಂಡಾಯದ ಬಗ್ಗೆ ತಾವು ತಲೆಕೆಡಿಸಿಕೊಳ್ಳುವುದಿಲ್ಲ. ಮರದ ಹಣ್ಣು, ಹೂವುಗಳನ್ನು ನೀವು ಕಿತ್ತುಕೊಳ್ಳಬಹುದು, ಆದರೆ ಬೇರು ಇನ್ನು ಸ್ಥಿರವಾಗಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಬಂಡಾಯ ಶಾಸಕರು ರೋಗದಿಂದ ಕೊಳೆತ ಎಲೆಗಳಂತಿದ್ದು, ಅದನ್ನು ಕಿತ್ತೆಸೆಯುವುದೇ ಉತ್ತಮ’ ಎಂದರು.
‘ಸಾಮಾನ್ಯವಾಗಿ ಮುಖ್ಯಮಂತ್ರಿ ನಿಭಾಯಿಸುವ ಪ್ರಮುಖ ನಗರಾಭಿವೃದ್ಧಿ ಖಾತೆಯನ್ನು ನೀಡಿದರೂ ಬಂಡಾಯವೆದ್ದಿದ್ದೀರಾ. ಠಾಕ್ರೆ ಹೆಸರನ್ನು ಬಳಸದೇ ನೀವು ರಾಜಕೀಯದಲ್ಲಿ ಉಳಿಯಬಹುದೇ?’ ಎಂದು ಶಿಂಧೆಗೆ ಸವಾಲೆಸೆದರು. ಶಿವಸೇನೆಯಿಂದ ಠಾಕ್ರೆಯರನ್ನು ಎಂದಿಗೂ ಬೇರೆ ಮಾಡಲು ಸಾಧ್ಯವಿಲ್ಲ ಎಂದರು.
‘ಕಳೆದ ದೀಪಾವಳಿ ಬಳಿಕ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ನನಗೆ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಕಣ್ಣೂ ಸರಿಯಾಗಿ ಕಾಣುತ್ತಿರಲಿಲ್ಲ. ನಾನು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ವಿರೋಧಿಗಳು ನನ್ನನ್ನು ಬೀಳಿಸಲು ಇದೇ ಸುಸಮಯ ಎಂದು ದಾಳಿ ನಡೆಸಿದ್ದಾರೆ. ಬಿಜೆಪಿ ಶಿವಸೇನೆಯಲ್ಲಿ ಒಡಕು ತಂದು ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಪಟ್ಟನನಗೆ ಅಪ್ರಸ್ತುತವಾಗಿದೆ. ಶಿವಸೇನೆ ನಡೆಸಲು ನಾನು ಅರ್ಹನಲ್ಲ ಎಂದು ಶಿವಸೈನಿಕರಿಗೆ ಅನಿಸಿದರೆ ನಾನು ಪಕ್ಷದ ಅಧ್ಯಕ್ಷ ಸ್ಥಾನವನ್ನು ಬಿಡಲು ಸಿದ್ಧನಿದ್ದೇನೆ’ ಎಂದರು. ಈ ವೇಳೆ ಪಕ್ಷದ ಕಾರ್ಯಕರ್ತರು ಉದ್ಧವ್ ಪರವಾಗಿ ಘೋಷಣೆ ಕೂಗಿ ಬೆಂಬಲ ಸೂಚಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ