21 ದಿನದ ಲಾಕ್‌ಔಟ್‌ ನಂತರ ಮುಂದೇನು? ಮೋದಿ ಮುಂದಿನ ಅಸ್ತ್ರವೇನು?

By Kannadaprabha NewsFirst Published Apr 3, 2020, 12:39 PM IST
Highlights

ಲಾಕ್‌ಡೌನ್‌ಗಿಂತ ಮೊದಲು ರಾತ್ರಿ 1 ಗಂಟೆಗೆ ಇಬ್ಬರು ಸಚಿವರು ಮತ್ತು ಇಬ್ಬರು ಕಾರ್ಯದರ್ಶಿಗಳಿಗೆ ಸ್ವತಃ ಮೋದಿ ಫೋನ್‌ ಮಾಡಿ, ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸರಿಯಾಗಿ ಥರ್ಮಲ್  ಸ್ಕ್ರೀನಿಂಗ್‌ ತಪಾಸಣೆ ನಡೆಸುತ್ತಿಲ್ಲ ಎಂದು ಝಾಡಿಸಿದರಂತೆ. ಕೂಡಲೇ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯ ತರಿಸಿಕೊಂಡು ಸ್ವತಃ ನೋಡಿ ಕೆಲವೊಂದಿಷ್ಟುನಿರ್ದೇಶನ ಕೊಟ್ಟನಂತರವೇ ಮಲಗಲು ಹೋದರಂತೆ.

ಇದು ಈಗಿನ ಪರಿಸ್ಥಿತಿಯಲ್ಲಿ ಪ್ರಾಯಶಃ ಸರ್ಕಾರ ಸಮೇತವಾಗಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ. ಏ.14ಕ್ಕೆ ಲಾಕ್‌ಡೌನ್‌ ನಿಜವಾಗಿಯೂ ಮುಗಿಯುತ್ತಾ? ಸ್ವಲ್ಪಮಟ್ಟಿಗಿನ ಸಡಿಲಿಕೆಗೆ ಪ್ರಧಾನಿ ಮೋದಿ ಮುಂದಾಗುವ ಲಕ್ಷಣಗಳು ಇತ್ತಾದರೂ ಈಗ ತಬ್ಲೀಘಿ ಜಮಾತ್‌ ಮಾಡಿರುವ ಅನಾಹುತದ ನಂತರ ಮುಂದೇನು ಮಾಡೋದು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಬಂದಿಲ್ಲ.

ಪ್ರಧಾನಿಗೆ ಸಲಹೆ ನೀಡುವ ನೀತಿ ಆಯೋಗದ ಆರೋಗ್ಯ ಪರಿಣತರು ಲಾಕ್‌ಡೌನ್‌ ಮುಂದುವರಿಕೆ ಅನಿವಾರ್ಯ ಎಂಬ ಅಭಿಪ್ರಾಯ ಹೊಂದಿದ್ದರೆ, ಅರ್ಥಶಾಸ್ತ್ರಜ್ಞರು ಹೀಗೇ ಬಂದ್‌ ಮುಂದುವರೆದರೆ ಸರ್ಕಾರದ ಬಳಿ ಸಂಬಳ ಬಟವಾಡೆಗೂ ಹಣ ಇರುವುದಿಲ್ಲ ಎಂದು ಅಭಿಪ್ರಾಯ ಹೇಳಿದ್ದಾರೆ. ಆದರೆ ಅಂತಿಮವಾಗಿ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದು ಪ್ರಧಾನಿ ಮೋದಿ ಮತ್ತವರ ಟೀಮ್‌ ಮಾತ್ರ. ಆ ಕಡೆ, ಈ ಕಡೆ ಸ್ವಲ್ಪ ಹೆಚ್ಚುಕಡಿಮೆ ಆದರೂ ತಮ್ಮ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆ ಎರಡೂ ಸ್ಥಿತ್ಯಂತರ ಕಾಣಲಿವೆ ಎಂಬುದನ್ನು ಅರಿಯದವರೇನಲ್ಲ ಮೋದಿ.

ದೀಪ ಹಚ್ಚಿ ಏಕತೆಯ ಸಂದೇಶ ಸಾರಲು ಮೋದಿ ಭಾರತೀಯರಿಗೆ ಕರೆ!

ಇಲ್ಲೂ ‘ಬ್ರಿಟನ್‌ ಪ್ರಯೋಗ’ಕ್ಕೆ ಸಲಹೆ!

ಅತ್ತ ದರಿ, ಇತ್ತ ಪುಲಿ ಎಂಬ ಮಾತು ಈಗಿನ ಪರಿಸ್ಥಿತಿಗೆ ಸರಿಯಾಗಿ ಹೊಂದುತ್ತದೆ. ಅರಿಸ್ಟಾಟಲ… ಹೇಳುವ ಪ್ರಕಾರ ರಾಜನಿಗೆ ಪ್ರಜೆಯ ಹಿತ ಕಾಯುವುದೇ ಮೊದಲ ಪ್ರಾತಿನಿಧ್ಯ. ಹೀಗಾಗಿ ವೈರಸ್‌ ಹಬ್ಬಬಾರದು ಎಂದು ಮೊದಲೇ ಲಾಕ್‌ಡೌನ್‌ ಘೋಷಿಸುವ ತೀರ್ಮಾನಕ್ಕೆ ಮೋದಿ ಸಾಹೇಬರು ಬಂದಿದ್ದು. ಏನೇ ಇರಲಿ, ಮೊದಲು ಅಲಕ್ಷಿಸಿ ಈಗ ಅನುಭವಿಸುತ್ತಿರುವ ಇಟಲಿ, ಅಮೆರಿಕ, ಸ್ಪೇನ್‌ಗಳಿಗಿಂತ ಭಾರತದ ಲಾಕ್‌ಡೌನ್‌ ನಿರ್ಧಾರ ಸಮಯೋಚಿತವಾಗಿತ್ತು ಎನ್ನುವುದನ್ನು ಒಪ್ಪಲೇಬೇಕು.

ಆದರೆ ಈಗ ಮೋದಿ ಅವರಿಗೆ ಜನರ ಆರೋಗ್ಯ ಒಂದು ಸವಾಲಾದರೆ, ಬರಿದಾಗುತ್ತಿರುವ ಖಜಾನೆ ಇನ್ನೊಂದು ದೊಡ್ಡ ಸಮಸ್ಯೆ. ಹೀಗಾಗಿ ಲಾಕ್‌ಡೌನ್‌ ವಿರೋಧಿಸುವ ಅರ್ಥತಜ್ಞರು ‘ಹರ್ಡ್‌ ಇಮ್ಯುನಿಟಿ’ ಎನ್ನುವ ಹೊಸ ಶಬ್ದ ಹರಿಯಬಿಟ್ಟಿದ್ದಾರೆ. ಅರ್ಥಾತ್‌ 50 ಪ್ರತಿಶತ ಜನಸಂಖ್ಯೆಗೆ ರೋಗ ಬಂದರೆ, ವೈರಸ್‌ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ನಿರ್ಮಾಣವಾಗಿ ವೈರಸ್‌ ಶಕ್ತಿಹೀನವಾಗುತ್ತದೆ.

ಹೀಗಾಗಬೇಕಾದರೆ ಭಾರತದಲ್ಲಿ ಕನಿಷ್ಠ 70 ಕೋಟಿ ಜನರಿಗೆ ರೋಗ ಕಾಣಿಸಿಕೊಳ್ಳಬೇಕು. ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅರ್ಥಶಾಸ್ತ್ರಜ್ಞರ ಮಾತು ಕೇಳಿ ಲಂಡನ್‌ನಲ್ಲಿ ಈ ಪ್ರಯೋಗ ಮಾಡಲು ಹೋಗಿ ಈಗ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅಮೆರಿಕದ ಡೊನಾಲ್ಡ… ಟ್ರಂಪ್‌ಗೂ ಊರು ಮುಚ್ಚಿ ಆರ್ಥಿಕತೆ ದಿವಾಳಿ ಎಬ್ಬಿಸುವ ಮನಸ್ಸಿಲ್ಲ. ಆದರೆ ನವೆಂಬರ್‌ನಲ್ಲಿ ಚುನಾವಣೆ ಇರುವುದರಿಂದ ಯಾವುದೇ ರಿಸ್ಕ್‌ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಟ್ರಂಪ್‌ ಇಲ್ಲ.

ಇನ್ನು ನೋಟು ರದ್ದತಿ, ಜಿಎಸ್‌ಟಿಯಿಂದ ತತ್ತರಿಸಿ ಹೋಗಿದ್ದ ಭಾರತದ ಆರ್ಥಿಕತೆ ಈಗ ಕೊರೋನಾ ಲಾಕ್‌ಡೌನ್‌ನಿಂದ ಕೋಮಾ ಸ್ಥಿತಿಗೆ ಹೋಗಲಿದ್ದು, ಮೊದಲು ಇದಕ್ಕೆ ವೆಂಟಿಲೇಟರ್‌ ಹಾಕುವುದೋ ಅಥವಾ ವೈರಸ್‌ನಿಂದ ತತ್ತರಿಸಿರುವ ಜನಕ್ಕೆ ವೆಂಟಿಲೇಟರ್‌ ತರುವುದೋ ಎಂಬ ದ್ವಂದ್ವದಲ್ಲಿ ಮೋದಿ ಇದ್ದಾರೆ. ಕೊರೋನಾ ಯುದ್ಧದಲ್ಲಿ ಅವರು ಬಳಸುವ ಅಸ್ತ್ರಗಳ ಬಲದ ಮೇಲೆ ಭಾರತದ ಭವಿಷ್ಯ ನಿಂತಿದೆ. ಅದರೊಳಗೆ ಮೋದಿ ಭವಿಷ್ಯವೂ ಅಡಕವಾಗಿದೆ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಯಿಂದ ಕಂಡ ರಾಜಕಾರಣ 

click me!