* ಛತ್ತೀಸ್‌ಗಢ ಕೋರ್ಟ್‌ನಿಂದ ಕಠಿಣ ಕಾರಾಗೃಹ ಶಿಕ್ಷೆ ಪ್ರಕಟ
* ಉಗ್ರ ನೆರವು: ಮಂಗಳೂರು ದಂಪತಿಗೆ 10 ವರ್ಷ ಜೈಲು
* 2013ರಲ್ಲಿ ಬಿಹಾರ ಪೊಲೀಸರಿಂದ ಅರೆಸ್ಟ್ ಆಗಿದ್ದ ಆಯೇಷಾ
ರಾಯಪುರ(ನ.25): ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ವರ್ಗಾವಣೆ (Channeling Funds for Terror Activities) ಮಾಡಿದ ಆರೋಪದಡಿ ಕರ್ನಾಟಕ (Karnataka) ಕರಾವಳಿಯ ಮಹಾನಗರ ಮಂಗಳೂರಿನ (Mangaluru) ದಂಪತಿ ಸೇರಿ ನಾಲ್ವರಿಗೆ ಛತ್ತೀಸ್‌ಗಢದ ರಾಯಪುರದಲ್ಲಿರುವ ನ್ಯಾಯಾಲಯವೊಂದು ಬುಧವಾರ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ (Rigorous Imprisonment) ವಿಧಿಸಿದೆ. ಮಂಗಳೂರಿನ (Mangalore) ಜುಬೇರ್ ಹುಸೇನ್ (42), ಆತನ ಪತ್ನಿ ಆಯೇಷಾ ಬಾನೋ (39) ಹಾಗೂ ಧೀರಜ್ ಸಾವೋ (21), ಪಪ್ಪು ಮಂಡಲ್ ಶಿಕ್ಷೆಗೊಳಗಾದವರು. ಉಗ್ರ ನಿಗ್ರಹ ಕಾಯ್ದೆಯಾಗಿರುವ ಅಕ್ರಮ ಚಟುವಟಿಕೆ (ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಜಯ್ ಸಿಂಗ್ ರಜಪೂತ್ ಅವರು ಜೈಲು ಶಿಕ್ಷೆ ಪ್ರಕಟಿಸಿದ್ದಾರೆ.
ಏನಿದು ಪ್ರಕರಣ?:
undefined
ಭಯೋತ್ಪಾದಕ ಸಂಘಟನೆಗಳ (Terror Organisations) ತೆ ನಂಟು ಹೊಂದಿದ ಆರೋಪದಡಿ 2013ರ ಡಿಸೆಂಬರ್‌ನಲ್ಲಿ ಧೀರಜ್ ಸಾವೋ ಬಂಧನವಾಗಿತ್ತು. ಈತ ರಾಯಪುರದಲ್ಲಿ (Raipur, Chhattisgarh) ರಸ್ತೆ ಬದಿ ಹೋಟೆಲ್‌ವೊಂದನ್ನು ನಡೆಸುತ್ತಿದ್ದ. ಪಾಕಿಸ್ತಾನದ (Pakistan)ಖಾಲಿದ್ ಎಂಬಾತನಿಂದ ಈತ ಹಣ ಪಡೆದು ಅದನ್ನು ಇಂಡಿಯನ್ ಮುಜಾಹಿದೀನ್/ಸಿಮಿ ಸಂಘಟನೆಗಳ ಜತೆ ನಂಟು ಹೊಂದಿರುವ ವ್ಯಕ್ತಿಗಳ ಖಾತೆಗೆ ರವಾನಿಸುತ್ತಿದ್ದ. ಜುಬೇರ್ ಹುಸೇನ್ ಹಾಗೂ ಆಯೇಷಾ ಬಾನೋ ಬ್ಯಾಂಕ್ ಖಾತೆಗಳಿಗೂ ಈತ ಹಣ ಜಮೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಅವರನ್ನೂ ಬಂಧಿಸಲಾಗಿತ್ತು. ಬಳಿಕ ಬಿಹಾರದಲ್ಲಿ ದಾಖಲಾದ ಇಂಥದ್ದೇ ಒಂದು ಪ್ರಕರಣ ಸಂಬಂಧ ಜುಬೇರ್- ಆಯೇಷಾ ದಂಪತಿಯನ್ನು ಬಿಹಾರ ಪೊಲೀಸರು (Bihar Police) ಮಂಗಳೂರಿನಲ್ಲಿ ಬಂಧಿಸಿ ಕರೆದೊಯ್ದಿದ್ದರು.
ಯಾರು ಈ ಆಯೇಷಾ?:
ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ (Indian Mujahideen) ಉಗ್ರ ಸಂಘಟನೆಗಳ ಜತೆ ನಂಟು ಹೊಂದಿದ್ದ ಆಯೇಷಾ ಬಿಹಾರದ 50 ಬ್ಯಾಂಕ್ ಖಾತೆಗಳನ್ನು ನೆಟ್ ಬ್ಯಾಂಕಿಂಗ್ (Net Banking) ಮೂಲಕ ನಿರ್ವಹಿಸುತ್ತಿದ್ದಳು. 2013ರಲ್ಲಿ ಸಂಭವಿಸಿದ್ದ ಪಟನಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಇಂಡಿಯನ್ ಮುಜಾಹಿದೀನ್ ಸಂಘಟನೆಯ ತೆಹಸೀನ್ ಅಖ್ತರ್‌ಗೆ ಹಣಕಾಸು ಪೂರೈಕೆ ಮಾಡುತ್ತಿದ್ದದ್ದು ಈಕೆಯೇ. ಆಯೇಷಾಗೆ ಪಾಕಿಸ್ತಾನದ ವ್ಯಕ್ತಿಯೊಬ್ಬನಿಂದ ಸೂಚನೆ ಬರುತ್ತಿತ್ತು. ವಿದೇಶಗಳಿಂದ ಅಮಾಯಕ ಜನರ ಖಾತೆಗೆ ಹಣ ವರ್ಗಾಯಿಸಿ ಅದನ್ನು ಆಯೇಷಾ ನಿರ್ವಹಿಸುತ್ತಿದ್ದಳು. ಸುಮಾರು 1 ಕೋಟಿ ರು. ಹಣವನ್ನು ವರ್ಗಾವಣೆ ಮಾಡಿದ್ದಳು. ಆದಾಯ ತೆರಿಗೆ ಇಲಾಖೆ ಕಣ್ತಪ್ಪಿಸಲು 49 ಸಾವಿರ ಅಥವಾ ಅದಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಒಂದು ಬಾರಿಗೆ ಹಣ ಕಳುಹಿಸುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ವರು ಬಿಹಾರದಲ್ಲಿ ಬಂಧನವಾಗುವುದರೊಂದಿಗೆ ಆಯೇಷಾ ವೃತ್ತಾಂತ ಬಯಲಾಗಿತ್ತು. 2013ರಲ್ಲಿ ಈಕೆಯನ್ನು ಬಿಹಾರ ಪೊಲೀಸರು ಮಂಗಳೂರಿಗೇ ಬಂದು ಬಂಧಿಸಿದ್ದರು.