ದೇಶದ ಮೊದಲ ಉಗ್ರ ವಿರೋಧಿ ನೀತಿ ಪ್ರಹಾರ್‌ ಬಿಡುಗಡೆ

Kannadaprabha News   | Kannada Prabha
Published : Feb 24, 2026, 04:43 AM IST
Prahaar

ಸಾರಾಂಶ

ಕೇಂದ್ರ ಗೃಹ ಸಚಿವಾಲಯ ಪ್ರಹಾರ್‌ ಹೆಸರಿನ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿ ಬಿಡುಗಡೆ ಮಾಡಿದ್ದು, ಇದರಲ್ಲಿ ಉಗ್ರವಾದಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಗಡಿಯಾಚೆಗಿನ ಭಯೋತ್ಪಾದನೆಯಿಂದ ಹಿಡಿದು, ಸೈಬರ್‌ ದಾಳಿಯ ವರೆಗೆ ಎಲ್ಲಾ ಕುಕೃತ್ಯಗಳನ್ನು ಭಯೋತ್ಪಾದನೆ ಎಂದು ಪರಿಗಣಿಸಲಾಗುತ್ತದೆ.

ನವದೆಹಲಿ : ಕೇಂದ್ರ ಗೃಹ ಸಚಿವಾಲಯವು ಪ್ರಹಾರ್‌ ಹೆಸರಿನ ದೇಶದ ಮೊದಲ ಭಯೋತ್ಪಾದನಾ ವಿರೋಧಿ ನೀತಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಉಗ್ರವಾದಕ್ಕೆ ಹೊಸ ವ್ಯಾಖ್ಯಾನ ನೀಡಿದೆ. ಇದರಡಿಯಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯಿಂದ ಹಿಡಿದು, ಸೈಬರ್‌ ದಾಳಿಯ ವರೆಗೆ ಎಲ್ಲಾ ಕುಕೃತ್ಯಗಳನ್ನು ಭಯೋತ್ಪಾದನೆ ಎಂದು ಪರಿಗಣಿಸಲಾಗುತ್ತದೆ. ಭೂಮಿ, ಜಲ, ವಾಯು ಮಾರ್ಗಗಳಲ್ಲಿ ನಡೆಯುವ ಉಗ್ರವಾದದ ಜತೆಗೆ ಸೈಬರ್‌ ದಾಳಿಗಳಂತಹ ಕೃತ್ಯಗಳೂ ಹೆಚ್ಚಿರುವ ಹೊತ್ತಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೀತಿಯನ್ನು ಬಹಿರಂಗಪಡಿಸಲಾಗಿದೆ, ಅದರಲ್ಲಿ, ‘ಭಯೋತ್ಪಾದನೆಗೆ ನಿರ್ದಿಷ್ಟ ಧರ್ಮ, ಜನಾಂಗ, ರಾಷ್ಟ್ರೀಯತೆ ಅಥವಾ ನಾಗರಿಕತೆ ಜತೆ ನಂಟಿದೆ ಎಂದು ಭಾರತ ಪರಿಗಣಿಸಲಾಗುವುದಿಲ್ಲ. ಜಿಹಾದಿ ಉಗ್ರಸಂಘಟನೆಗಳು ಮತ್ತು ಅವುಗಳ ಅಂಗಸಂಸ್ಥೆಗಳ ಪ್ರಾಯೋಜಿತ ಭಯೋತ್ಪಾದನೆಯಿಂದ ದೇಶ ಬಹುಕಾಲದಿಂದ ನರಳಿದೆ. ಅಲ್‌-ಖೈದಾ, ಐಎಸ್‌ಐಎಸ್‌ನಂತಹ ಜಾಗತಿಕ ಉಗ್ರ ಸಂಘಟನೆಗಳು ಸ್ಪೀಲರ್‌ ಸೆಲ್‌ ಬಳಸಿಕೊಂಡು ಭಾರತದಲ್ಲಿ ವಿಧ್ವಂಸ ಸೃಷ್ಟಿಸಲು ಯತ್ನಿಸುತ್ತಿವೆ. ಇದಕ್ಕಾಗಿ ನೇಮಕಾತಿಯನ್ನೂ ಹೆಚ್ಚು ಮಾಡಿದೆ. ಸಾಲದ್ದಕ್ಕೆ, ವಿದೇಶದಲ್ಲಿ ಕುಳಿತು ಪಂಜಾಬ್‌, ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಡ್ರೋನ್‌ಗಳನ್ನೂ ಬಳಸುತ್ತಿವೆ’ ಎಂದು ತಿಳಿಸಲಾಗಿದೆ.

ಅತ್ತ ಇದಕ್ಕೆ ತಂತ್ರಜ್ಞಾನದ ಬಳಕೆಯೂ ಸೇರಿಕೊಂಡಿದ್ದು, ಉಗ್ರ ಮನಃಸ್ಥಿತಿಯನ್ನು ಹರಡಲು, ಪ್ರಚೋದಿಸಲು ಮತ್ತು ನಿಧಿ ಸಂಗ್ರಹಿಸಲು ಸಾಮಾಜಿಕ ಮಾಧ್ಯಮ, ಎನ್‌ಕ್ರಿಪ್ಷನ್‌ ಟೂಲ್‌, ಡಾರ್ಕ್‌ವೆಬ್‌, ಕ್ರಿಪ್ಟೋ ವ್ಯಾಲಟ್‌ ಇತ್ಯಾದಿಗಳ ಮೊರೆಹೋಗಿವೆ. ಇವುಗಳನ್ನು ತಡೆಯುವುದು ಅಥವಾ ಭೇದಿಸುವುದು ಉಗ್ರನಿಗ್ರಹ ಸಂಸ್ಥೆಗಳಿಗೆ ಸವಾಲಿನ ಕೆಲಸ ಎನ್ನಲಾಗಿದೆ.

ಎಲ್ಲ ವಲಯದ ರಕ್ಷಣೆಗೆ ಕಟಿಬದ್ಧ

ಕಡತದಲ್ಲಿ ಇಂಧನ, ರೈಲ್ವೆ, ವಿಮಾನಯಾನ, ಬಂದರು, ಸೇನೆ, ಬಾಹ್ಯಾಕಾಶ, ಅಣುಶಕ್ತಿ ಸೇರಿದಂತೆ ಎಲ್ಲಾ ವಲಯಗಳಿಗೆ ರಕ್ಷಣೆ ಒದಗಿಸುವ ಭರವಸೆ ನೀಡಲಾಗಿದ್ದು, ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದ ಕ್ರಮಗಳಿಗೆ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಸಹಕಾರವೂ ಸಿಗುವುದು ಅಗತ್ಯ ಎಂದು ಹೇಳಲಾಗಿದೆ.

ಕೆಂಪುಕೋಟೆ, ದಿಲ್ಲಿ ಅಸೆಂಬ್ಲಿ, ಸೇರಿ ಹಲವೆಡೆ ಬಾಂಬ್‌ ಬೆದರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹುಸಿ ಬಾಂಬ್ ಬೆದರಿಕೆಗಳ ಸರಣಿ ಮುಂದುವರೆದಿದೆ. ಕೆಂಪುಕೋಟೆ, ದೆಹಲಿ ಸಚಿವಾಲಯ, ವಿಧಾನಸಭೆ, ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ತಪಾಸಣೆ ಬಳಿಕ ಇದು ಹುಸಿ ಎಂದು ಸಾಬೀತಾಗಿದೆ.ದೆಹಲಿಯ ವಿಧಾನಸಭೆ ಮತ್ತು ಸ್ಪೀಕರ್‌ ಅವರ ಅಧಿಕೃತ ಇಮೇಲ್‌ಗೆ ಖಲಿಸ್ತಾನ ರಾಷ್ಟ್ರೀಯ ಸೇನೆ ಹೆಸರಿನಲ್ಲಿ ಸಂದೇಶ ಬಂದಿದ್ದು, ದಿಲ್ಲಿಯನ್ನು ಖಲಿಸ್ತಾನ ಮಾಡಲಿದ್ದೇವೆ ಎನ್ನುವ ಬೆದರಿಕೆ ಹಾಕಿದ್ದಾರೆ. ಜತೆಗೆ ಮುಂದಿನ ಮೂರು ದಿನಗಳಲ್ಲಿ ಸೈನಿಕ ಶಾಲೆ, ಕೆಂಪುಕೋಟೆ, ಮೆಟ್ರೋ ನಿಲ್ದಾಣಗಳಲ್ಲಿ ಸ್ಫೋಟಿಸಲಿದ್ದೇವೆ ಎನ್ನುವ ಬೆದರಿಕೆ ಹಾಕಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ದೆಹಲಿ ಪೊಲೀಸರು, ಬಾಂಬ್‌ ನಿಷ್ಕ್ರೀಯದಳ, ಶ್ವಾನದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವೇಳೆ ಯಾವುದೇಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಮೋದಿಜಿ ನಿಮಗೆ ನಾಚಿಕೆ ಆಗ್ಬೇಕು: ಎಪ್‌ಸ್ಟೀನ್‌ ಫೈಲ್‌, ಟ್ರೇಡ್‌ ಡೀಲ್‌ ಪ್ರಶ್ನಿಸಿ ರಾಗಾ ತಿರುಗೇಟು
ರಾಷ್ಟ್ರಪತಿ ಭವನದ ಲೂಟನ್ಸ್‌ ಮೂರ್ತಿಯ ಜಾಗಕ್ಕೆ ರಾಜಾಜಿ