ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ರೂಪುರೇಷೆ

By Kannadaprabha NewsFirst Published Nov 14, 2019, 7:23 AM IST
Highlights

ರಾಮಮಂದಿರ ರೂಪುರೇಷೆ ತಯಾರಿಗೆ ವಿಶ್ವಹಿಂದೂ ಪರಿಷತ್ ಚಿಂತನೆ ನಡೆಸಿದ್ದು ಮಂಗಳೂರಿನಲ್ಲಿ ಡಿಸೆಂಬರ್ ಅಂತ್ಯ ದಲ್ಲಿ ನಡೆಯಲಿರುವ ಪರಿಷತ್‌ನ ಕೇಂದ್ರೀಯ ಮಂಡಳಿ ಬೈಠಕ್‌ನಲ್ಲಿ ಈ ಬಗ್ಗೆ ತೀರ್ಮಾನವಾಗುವ ಸಂಭವ ಇದೆ. 

ಮಂಗಳೂರು [ನ.14]:  ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿಸಿರುವ ಬೆನ್ನಲ್ಲೇ ಮಂದಿರದ ರೂಪುರೇಷೆ ತಯಾರಿಗೆ ವಿಶ್ವಹಿಂದೂ ಪರಿಷತ್(ವಿಹಿಂಪ) ಚಿಂತನೆ ನಡೆಸಿದ್ದು ಮಂಗಳೂರಿನಲ್ಲಿ ಡಿಸೆಂಬರ್ ಅಂತ್ಯ ದಲ್ಲಿ ನಡೆಯಲಿರುವ ಪರಿಷತ್‌ನ ಕೇಂದ್ರೀಯ ಮಂಡಳಿ ಬೈಠಕ್‌ನಲ್ಲಿ ಈ ಬಗ್ಗೆ ತೀರ್ಮಾನವಾಗುವ ಸಂಭವ ಇದೆ. 

ವಿಹಿಂಪದ ಕೇಂದ್ರೀಯ ಮಂಡಳಿ ಬೈಠಕ್ ವರ್ಷಂಪ್ರತಿ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತದೆ. ಈ ಬಾರಿ ಆರು ತಿಂಗಳು ಮೊದಲೇ ಮಂಗಳೂರಿನಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಈಗ ಅಯೋಧ್ಯೆ ತೀರ್ಪು ಮಂದಿರ ನಿರ್ಮಾಣ ಪರವಾಗಿ ಹೊರಬಿದ್ದ ಹಿನ್ನೆಲೆಯಲ್ಲಿ ಈ ಬೈಠಕ್ ಮಹತ್ವ ಪಡೆದುಕೊಂಡಿದೆ. ಡಿ.25ರಿಂದ 30ರವರೆಗೆ ಮಂಗಳೂರಿನ ಸಂಘನಿಕೇತನದಲ್ಲಿ ೫ ದಿನಗಳ ಕಾಲ ವಿಹಿಂಪ ಕೇಂದ್ರೀಯ ಮಂಡಳಿ ಸಭೆ ನಡೆಯಲಿದೆ.  

ನಿಜಾನಾ?: ಅಯೋಧ್ಯೆ ತೀರ್ಪಿಗೆ ಹಿಂದೂ ಮಹಾಸಭಾ ಮೇಲ್ಮನವಿ?...

ಈ ಸಭೆಯಲ್ಲಿ ಆರ್‌ಎಸ್‌ಎಸ್ ಸರಕಾರ್ಯವಾಹ ಭೈಯ್ಯಾಜಿ ಜೋಶಿ ಮಾರ್ಗದರ್ಶನ ಮಾಡಲಿದ್ದು, ಸುಮಾರು 400 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಪ್ರಾಂತೀಯ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳೂ ಭಾಗವಹಿಸಲಿದ್ದಾರೆ.

ಪೇಜಾವರಶ್ರೀ ಉದ್ಘಾಟನೆ: ಡಿ.27ರಂದು ವಿಹಿಂಪ ಅಂತಾರಾಷ್ಟ್ರೀಯ ಮಟ್ಟದ ಬೈಠಕ್ ನಡೆಯಲಿದ್ದು, ಇದನ್ನು ವಿಹಿಂಪ ಮಾರ್ಗದರ್ಶಕ ಮಂಡಳಿ ಸದಸ್ಯರಾದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಬಳಿಕ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಕುರಿತ ಮಹತ್ವಪೂರ್ಣ ಚರ್ಚೆ ನಡೆಯುವ ಸಂಭವ ಇದೆ ಎನ್ನಲಾಗಿದೆ. ರಾಮಮಂದಿರ ನಿರ್ಮಾಣ, ಅದರ ಪೂರ್ವಸಿದ್ಧತೆ, ರೂಪುರೇಷೆ, ಶಿಲಾನ್ಯಾಸ ಸೇರಿದಂತೆ ಪ್ರಮುಖ ನಿರ್ಧಾರಗಳು ಮಂಗಳೂರಿನ ಈ ಬೈಠಕ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವಿಹಿಂಪ ಮೂಲಗಳು ತಿಳಿಸಿವೆ. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ವಿಹಿಂಪ ಕೇಂದ್ರೀಯ ಮಂಡಳಿ ಬೈಠಕ್ ನಡೆಯುತ್ತಿದೆ. 

click me!