ಭಾರತದಲ್ಲಿ 3 ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗಳೂ ಪ್ರಯೋಗದ ವಿವಿಧ ಹಂತದಲ್ಲಿವೆ. ಈ ಪೈಕಿ ಭಾರತ್ ಬಯೋಟೆಕ್ ಮತ್ತು ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಗಳ 2ನೇ ಹಂತದ ಪ್ರಯೋಗ ಬಹುತೇಕ ಮುಕ್ತಾಯಕ್ಕೆ ತಲುಪಿವೆ. ಮೂರನೇ ಹಂತ ಪೂರ್ಣಗೊಳ್ಳಲು ಸಾಮಾನ್ಯವಾಗಿ 6-9 ತಿಂಗಳು ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಈ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬಹುದು ಎನ್ನುವ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಆ.20): ಕೇಂದ್ರ ಸರ್ಕಾರ ಅನುಮತಿ ನೀಡಿದ್ದೇ ಆದಲ್ಲಿ ಕೊರೋನಾ ಚಿಕಿತ್ಸೆಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ 2 ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 28 ಲಕ್ಷ ದಾಟಿ, ನಿತ್ಯವೂ 70,000 ಆಸುಪಾಸಿನ ಹೊಸ ಕೇಸು ದಾಖಲಾಗುತ್ತಿರುವ ಬೆನ್ನಲ್ಲೇ ಹೊರಬಿದ್ದ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಪ್ರಣಬ್, ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ..!
ಐಸಿಎಂಆರ್‌ನ ಪ್ರಧಾನ ನಿರ್ದೇಶಕ ಬಲರಾಂ ಭಾರ್ಗವ ಅವರು ಬುಧವಾರ ಕೇಂದ್ರ ಗೃಹ ವ್ಯವಹಾರಗಳ ಕುರಿತಾದ ಸಂಸದೀಯ ಸ್ಥಾಯಿ ಸಮಿತಿ ಮುಂದೆ ಹಾಜರಾಗಿದ್ದರು. ಈ ವೇಳೆ ಸಮಿತಿಯ ಸದಸ್ಯರೊಬ್ಬರು, ಇನ್ನೂ ಎಷ್ಟು ದಿನ ಜನತೆ ಸಾಂಕ್ರಾಮಿಕ ಪಿಡುಗಿನೊಂದಿಗೆ ಬದುಕಬೇಕು ಎಂಬ ಪ್ರಶ್ನೆ ಹಾಕಿದ್ದರು. ಅದಕ್ಕೆ ಉತ್ತರಿಸಿದ ಭಾರ್ಗವ ‘ಭಾರತದಲ್ಲಿ 3 ಕಂಪನಿಗಳು ಅಭಿವೃದ್ಧಿಪಡಿಸಿರುವ ಲಸಿಕೆಗಳೂ ಪ್ರಯೋಗದ ವಿವಿಧ ಹಂತದಲ್ಲಿವೆ. ಈ ಪೈಕಿ ಭಾರತ್ ಬಯೋಟೆಕ್ ಮತ್ತು ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಗಳ 2ನೇ ಹಂತದ ಪ್ರಯೋಗ ಬಹುತೇಕ ಮುಕ್ತಾಯಕ್ಕೆ ತಲುಪಿವೆ. ಮೂರನೇ ಹಂತ ಪೂರ್ಣಗೊಳ್ಳಲು ಸಾಮಾನ್ಯವಾಗಿ 6-9 ತಿಂಗಳು ಬೇಕಾಗುತ್ತದೆ. ಆದರೆ ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಈ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬಹುದು’ ಎಂದು ಮಾಹಿತಿ ನೀಡಿದ್ದಾರೆ ಎಂದು ಸಭೆಯಲ್ಲಿ ಭಾಗಿಯಾಗಿದ್ದ ಸಂಸದರೊಬ್ಬರು ಮಾಹಿತಿ ನೀಡಿದ್ದಾರೆ.