ಕೆಮ್ಮು, ನೆಗಡಿ, ಜ್ವರ ಇದ್ದರೆ ತಿರುಪತಿ ಭೇಟಿ ಬೇಡ!

By Kannadaprabha NewsFirst Published Mar 10, 2020, 9:08 AM IST
Highlights

ಕೆಮ್ಮು, ನೆಗಡಿ, ಜ್ವರ ಇದ್ದರೆ ತಿರುಪತಿ ಭೇಟಿ ಬೇಡ| ಭಕ್ತರು ಸ್ಯಾನಿಟೈಸರ್‌, ಮಾಸ್ಕ್‌ ತರಬೇಕು. ಜ್ವರಬಾಧೆ ಇದ್ದರೆ ಆಸ್ಪತ್ರೆಗೆ ಭಕ್ತರ ರವಾನೆ| ಭಕ್ತರು ಪರಸ್ಪರ 3 ಅಡಿ ಅಂತರ ಕಾಯ್ದುಕೊಳ್ಳಬೇಕು, ದೇಗುಲದಲ್ಲಿ 2 ತಾಸಿಗೊಮ್ಮೆ ಸ್ವಚ್ಛತೆ| ಭಕ್ತರಿಗೆ ಟಿಟಿಡಿ ಮನವಿ, ಕೊರೋನಾ ಹರಡುವಿಕೆ ತಡೆಯಲು ಈ ಕ್ರಮ

ತಿರುಪತಿ[ಮಾ.10]: ಕೊರೋನಾ ವೈರಸ್‌ ಹರಡುವಿಕೆ ತಡೆಯುವ ಉದ್ದೇಶದಿಂದ ತಿರುಮಲದ ವೆಂಕಟೇಶ್ವರ ದೇವಸ್ಥಾನ ಮಂಡಳಿ (ಟಿಟಿಡಿ) ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ‘ಕೆಮ್ಮು, ನೆಗಡಿ ಹಾಗೂ ಜ್ವರ ಇದ್ದರೆ ತಿರುಮಲಕ್ಕೆ ಬರಬೇಡಿ’ ಎಂದು ಭಕ್ತರಿಗೆ ಟಿಟಿಡಿ ಮನವಿ ಮಾಡಿಕೊಂಡಿದೆ.

‘ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡರೆ ತಿರುಪತಿಗೆ ಬರುವುದನ್ನು ಭಕ್ತರು ಮುಂದೂಡಬೇಕು ಅಥವಾ ರದ್ದುಗೊಳಿಸಬೇಕು. ತಿರುಮಲದಲ್ಲಿ ಸದಾ ಜನಜಂಗುಳಿ ಇರುವ ಕಾರಣ ಸೋಂಕು ಬೇಗ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಭಕ್ತರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಹೇಳಿದ್ದಾರೆ.

ಈ ನಡುವೆ, ದೇವಾಲಯಕ್ಕೆ ಆಗಮಿಸುವ ಭಕ್ತರ ಥರ್ಮಲ್‌ ಸ್ಕ್ರೀನಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ಜ್ವರ ಬಾಧೆ ಇದ್ದ ಭಕ್ತರನ್ನು ವೆಂಕಟೇಶ್ವರ ವೈದ್ಯ ವಿಜ್ಞಾನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತದೆ ಎಂದು ಟಿಟಿಡಿ ಹೇಳಿಕೆ ಬಿಡುಗಡೆ ಮಾಡಿದೆ.

ಭಕ್ತರು ಮಾಸ್ಕ್‌ಗಳು ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ತರಬೇಕು. ಸೋಂಕು ಹರಡುವಿಕೆ ತಡೆಗೆ ಒಬ್ಬರಿಗೊಬ್ಬರು 3 ಅಡಿ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ದೇವಸ್ಥಾನದ ಶುದ್ಧಿಗೂ ಆದ್ಯತೆ ನೀಡಲಾಗುತ್ತದೆ. ಪ್ರತಿ 2 ತಾಸಿಗೊಮ್ಮೆ ಆವರಣ ಸ್ವಚ್ಛತೆ ಮಾಡಲಾಗುತ್ತದೆ. ಪರಿಸ್ಥಿತಿ ಅವಲೋಕನಕ್ಕೆ ಸಮಿತಿ ರಚಿಸಲಾಗಿದೆ.

ಭಕ್ತಾದಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌ (ಎಸ್‌ವಿಬಿಸಿ) ಹಾಗೂ ರೇಡಿಯೋಗಳಲ್ಲಿ ನಿರಂತರ ಸಂದೇಶಗಳನ್ನು ಪ್ರಸಾರ ಮಾಡಲಾಗುತ್ತಿದೆ.

click me!