ಕೊರೋನಾ ವಿರುದ್ಧ ಸೇನೆಯ ಸಮರ, ಎಲ್ಲೆಲ್ಲಿ ಕೇಂದ್ರ?

By Suvarna NewsFirst Published Mar 22, 2020, 4:48 PM IST
Highlights

ಕೊರೋನಾ ವಿರುದ್ಧ ಸೇನೆಯ ಸಮರ| ಜೈಸಲ್ಮೇರ್‌ನಲ್ಲಿ ಭಾರತದ ಅತಿದೊಡ್ಡ ಕ್ವಾರಂಟೈನ್‌ ಕೇಂದ್ರ| ಕೇಂದ್ರವನ್ನು ಇನ್ನಷ್ಟುವಿಸ್ತರಿಸಲು ಸೇನೆ ಸಿದ್ಧತೆ| ಬೆಂಗಳೂರಲ್ಲೂ ವಾಯುಪಡೆ ಕ್ವಾರಂಟೈನ್‌ ಕೇಂದ್ರ ಸನ್ನದ್ಧ ಸ್ಥಿತಿಯಲ್ಲಿ

ನವದೆಹಲಿ(ಮಾ.22): ಕೊರೋನಾ ವೈರಸ್‌ ಹರಡುವಿಕೆ ಹಿನ್ನೆಲೆಯಲ್ಲಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸೇನೆಯು ಭಾರತದ ಅತಿದೊಡ್ಡ ‘ಕ್ವಾರಂಟೈನ್‌’ (ಪ್ರತ್ಯೇಕ ಏಕಾಂತ ವಾಸ) ಕೇಂದ್ರವನ್ನು ತೆರೆದಿದೆ. ಜತೆಗೆ ಈ ಕೇಂದ್ರವನ್ನು ಅದು ಇನ್ನಷ್ಟುವಿಸ್ತರಿಸುವ ಸಾಧ್ಯತೆ ಇದೆ. ಇದೇ ವೇಳೆ, ಇನ್ನೂ 12 ಸೇನಾ ಆಸ್ಪತ್ರೆಗಳು ಹಾಗೂ ಕ್ವಾರಂಟೈನ್‌ ಕೇಂದ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ.

ಕೋಲ್ಕತಾ ಹಾಗೂ ಚೆನ್ನೈ (ಸೇನೆ), ಕೊಚ್ಚಿ (ನೌಕಾಪಡೆ), ಬೆಂಗಳೂರು, ಹೈದರಾಬಾದ್‌ನ ದುಂಡಿಗಲ್‌, ಕಾನ್ಪುರ, ಅಸ್ಸಾಂನ ಜೋರ್ಹಾಟ್‌ (ಐಎಎಫ್‌) ನಗರಗಳಲ್ಲಿ ಕೂಡ ಕ್ವಾರಂಟೈನ್‌ ಕೇಂದ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಒಂದು ವೇಳೆ ಅಗತ್ಯಬಿದ್ದರೆ ಇಡೀ ಸೇನಾಪಡೆಯ ಈ ಸವಲತ್ತುಗಳನ್ನು ಕೊರೋನಾ ವೈರಸ್‌ ಚಿಕಿತ್ಸೆಗಾಗಿ ಬಳಸಿಕೊಳ್ಳಬಹುದಾಗಿದೆ.

ಜೈಸಲ್ಮೇರ್‌ ಕೇಂದ್ರದಲ್ಲಿ ಈಗ 500 ಜನರನ್ನು ಕ್ವಾರಂಟೈನ್‌ನಲ್ಲಿ ಇಡಬಹುದಾಗಿದೆ. ಎರಡು ಸೇನಾ ಬಟಾಲಿಯನ್‌ಗಳನ್ನು ಇಲ್ಲಿ ರವಾನಿಸಲಾಗಿದೆ. ಇನ್ನೊಂದು ಕೇಂದ್ರ ಹರ್ಯಾಣದ ಮನೇಸಾರ್‌ನಲ್ಲಿದೆ. ವಿದೇಶಗಳಿಂದ ಬಂದವನ್ನು ಕಡ್ಡಾಯವಾಗಿ ಇಲ್ಲಿ 14 ದಿನಗಳ ಕಾಲ ‘ಏಕಾಂತ ವಾಸ’ದಲ್ಲಿ ಇರಿಸಿ ಕೊರೋನಾ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ಎರಡೂ ಕೇಂದ್ರಗಳು ಇನ್ನೂ ಹೆಚ್ಚು ವಿಸ್ತಾರಗೊಂಡರೆ 1600 ಜನರು ಇಲ್ಲಿ ತಂಗಬಹುದಾಗಿದೆ ಎಂದು ಮೂಲಗಳು ಹೇಳಿವೆ.

ಇನ್ನು ಜೈಸಲ್ಮೇರ್‌ನಲ್ಲೇ ಇನ್ನೊಂದು ಕೇಂದ್ರವನ್ನು ಹೆಚ್ಚುವರಿಯಾಗಿ ತೆರೆಯಲಾಗಿದ್ದು, ತುರ್ತು ಸಂದರ್ಭಕ್ಕೆಂದು ಕಾಯ್ದಿರಿಸಲಾಗಿದೆ. ಜೋಧಪುರ, ವಿಶಾಖಪಟ್ಟಣ ಹಾಗೂ ಗೋರಖಪುರದಲ್ಲಿ ಕ್ರಮವಾಗಿ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳು ಕ್ವಾರಂಟೈನ್‌ ಕೇಂದ್ರಗಳನ್ನು ಸಿದ್ಧಪಡಿಸಿದ್ದು ಅವನ್ನೂ ಕಾಯ್ದಿರಿಸಲಾಗಿದೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಎಲ್ಲೆಲ್ಲಿ ಕೇಂದ್ರ ಆರಂಭ

ಕೋಲ್ಕತಾ, ಚೆನ್ನೈ, ಕೊಚ್ಚಿ, ಬೆಂಗಳೂರು, ಹೈದರಾಬಾದ್‌ನ ದುಂಡಿಗಲ್‌, ಕಾನ್ಪುರ, ಜೋರ್ಹಾಟ್‌.

click me!