ಕೊರೋನಾ ವೈರಸ್ ಭೀತಿಯಿಂದಾಗಿ ಪ್ರಯಾಣಿಕರ ವಿಮಾನ ಹಾರಟವನ್ನು ಕೇಂದ್ರ ಸರ್ಕಾರ ಸಂಪೂರ್ಣ ಬಂದ್ ಮಾಡಿದೆ. ಈಗಾಗಲೇ ಮೇ.3ರವರೆಗೂ ಲಾಕ್‌ಡೌನ್ ವಿಧಿಸಲಾಗಿದ್ದು, ಈವರೆಗೆ ಬುಕ್ ಮಾಡಿದ ಪ್ರಯಾಣಿಕರ ಹಣವನ್ನು ಯಾವುದೇ ಶುಲ್ಕ ವಿಧಿಸದೇ ವಾಪಾಸ್ ನೀಡಬೇಕೆಂದು ಸೂಚಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಏ.17): ಮೇ 3ರವರೆಗೆ ಪ್ರಯಾಣಿಸಲು ಟಿಕೆಟ್ ಖರೀದಿಸಿವರಿಗೆ ಎಲ್ಲಾ ವಿಮಾನಯಾನ ಸಂಸ್ಥೆಗಳು ಯಾವುದೇ ಶುಲ್ಕ ಕಡಿತ ಮಾಡದೇ ಪೂರ್ಣ ಹಣ ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಮಾ.25ರಿಂದ ಏ.14ರವರೆಗೆ ಟಿಕೆಟ್ ಬುಕ್ ಮಾಡಿದವರಿಗೆ ಈ ನಿಯಮ ಅನ್ವಯವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಎಲ್ಲಾ ವಿಮಾನ ಕಂಪನಿಗಳಿಗೆ ಸೂಚಿಸಿದೆ. ಈ ಹಿಂದೆ, ಟಿಕೆಟ್ ಹಣವನ್ನು ಹಿಂದಿರುಗಿಸುವ ಬದಲು ಮುಂದಿನ ಪ್ರಯಾಣಕ್ಕೆ ಮುಂದೂಡಲು ವಿಮಾನಯಾನ ಕಂಪನಿಗಳು ನಿರ್ಧರಿಸಿತ್ತು.
ವಿಶ್ವದ 108 ರಾಷ್ಟ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ
ಅದಕ್ಕಾಗಿ ವರ್ಷಾಂತ್ಯದ ವರೆಗೂ ಸಮಯ ನಿಗದಿ ಮಾಡಿತ್ತು. ಆದರೆ ಪ್ರಯಾಣಿಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದರಿಂದ, ಮಾರ್ಚ್ 25 ರಿಂದ ಮೇ 3ರ ವರೆಗಿನ ಲಾಕ್‌ಡೌನ್ ಅವಧಿಯಲ್ಲಿ ರದ್ದಾದ ಟಿಕೆಟ್ ಹಣವನ್ನು ಕ್ಯಾನ್ಸಲೇಶನ್ ಶುಲ್ಕ ವಿಧಿಸದೇ ಹಿಂದಿರುಗಿಸಬೇಕು ಎಂದು ಸಚಿವಾಲಯ ಆದೇಶಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮೊದಲ ಹಂತದಲ್ಲಿ ಮಾರ್ಚ್ 25ರಿಂದಲೇ ಜಾರಿಗೆ ಬರುವಂತೆ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದರು. ಇದಾದ ಬಳಿಕ ಏಪ್ರಿಲ್ 14ರ ನಂತರ ವಿಮಾನ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಹೀಗಾಗಿ ಹಲವರು ಟಿಕೆಟ್ ಬುಕ್ಕಿಂಗ್ ಮಾಡಿದ್ದರು. ಇದೀಗ ಮೋದಿ ಎರಡನೇ ಹಂತದಲ್ಲಿ ಮತ್ತೆ 19 ದಿನಗಳ ಕಾಲ ಲಾಕ್‌ಡೌನ್ ಮಾಡಿರುವುದರಿಂದ ಕೇಂದ್ರ ಯಾವುದೇ ಶುಲ್ಕ ಕಡಿತ ಮಾಡದೇ ಹಣ ವಾಪಾಸ್ ನೀಡುವಂತೆ ಸೂಚಿಸಿದೆ.