ಜನರಿಗೆ, ಆರ್ಥಿಕತೆಗೆ ತೊಂದರೆಯಾದರೂ ಲಾಕ್‌ಡೌನ್‌ಗೇ ಮೋದಿ ಅಂಟಿಕೊಂಡಿದ್ದೇಕೆ?

By Suvarna News  |  First Published Apr 17, 2020, 2:13 PM IST

ಸುಮಾರು ನಮ್ಮ ಕರ್ನಾಟಕದಷ್ಟು ದೊಡ್ಡದಿರುವ ಇಟಲಿಯಲ್ಲ, ಬೆಂಗಳೂರಿಗಿಂತಲೂ ಚಿಕ್ಕದಿರುವ ಸಿಂಗಾಪುರು ದಿನೆ ದಿನೇ ಕೊರೋವಾ ವೈರಸ್ ಸೋಂಕಿತರ ಸಂಖ್ಯೆ ಉಲ್ಬಣಿಸುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಭಾರತದಲ್ಲಿ ತಕ್ಕಮಟ್ಟಿಗೆ ರೋಗ ನಿಯಂತ್ರಣದಲ್ಲಿದೆ. ಈ ಸಂದರ್ಭದಲ್ಲಿ ಆರ್ಥಿಕ ಕುಸಿತದ ಬಗ್ಗೆ ಯೋಚಿಸದ ಮೋದಿ ಲಾಕ್‌ಡೌನ್‌ಗೆ ಮುಂದಾಗಿದ್ದೇಕೆ?


ಲಾಕ್‌ಡೌನ್‌ ಮಾಡಿಕೊಂಡು ಎಷ್ಟು ದಿನ ಜನರನ್ನು ಮನೆಯಲ್ಲಿ ಕೂರಿಸುವುದು? ಹೀಗಾದರೆ ಜನ ಹಸಿವಿನಿಂದ ಸಾಯುತ್ತಾರೆ. ಇದಕ್ಕೆ ಬದಲಾಗಿ ಹರ್ಡ್‌ ಇಮ್ಯುನಿಟಿ ಅರ್ಥಾತ್‌ ಸಾಮೂಹಿಕ ರೋಗ ನಿರೋಧಕ ಶಕ್ತಿ ಬೆಳೆಸಿ, ಕೊರೋನಾ ವಿರುದ್ಧ ಹೋರಾಡುವುದೇ ಪರಿಹಾರ ಎಂಬ ಚರ್ಚೆ ಯುರೋಪ್‌ ಮತ್ತು ಅಮೆರಿಕಗಳಲ್ಲಿ ಆರಂಭವಾಗಿದ್ದು, ಕೇಂದ್ರ ಸರ್ಕಾರಕ್ಕೆ ಏನು ಮಾಡುವುದು ಎಂದು ದಾರಿ ತಿಳಿಯದಾಗಿದೆ. 

ಲಸಿಕೆ ತಯಾರಿಸುವ ಕಂಪನಿಗಳ ಪ್ರಕಾರ ಕ್ಲಿನಿಕಲ್‌ ಪರೀಕ್ಷೆ ನಡೆಸಿ ಲಸಿಕೆ ತಯಾರಿಕೆಗೆ ಕನಿಷ್ಠ 12ರಿಂದ 16 ತಿಂಗಳು ಬೇಕು. ಅಲ್ಲಿಯವರೆಗೆ ಲಾಕ್‌ಡೌನ್‌ ಮಾಡುವುದು ಅಸಾಧ್ಯ. ಹೀಗಾಗಿ ವೃದ್ಧರನ್ನು ಮತ್ತು ರೋಗಿಗಳನ್ನು ಸುರಕ್ಷಿತವಾಗಿಟ್ಟು ನಗರಗಳನ್ನು ತೆರೆಯುವುದೇ ಇರುವ ಏಕೈಕ ದಾರಿ ಎಂಬ ಚಿಂತನೆಗೆ ವೇಗ ಸಿಗುತ್ತಿದೆ. ಈಗಾಗಲೇ ಸ್ವೀಡನ್‌ ಲಾಕ್‌ಡೌನ್‌ ತೆರವುಗೊಳಿಸಿದೆ. ಅಮೆರಿಕದಲ್ಲಿ ಕೊರೋನಾ ಅಲ್ಲೋಲ ಕಲ್ಲೋಲ ಮಾಡಿದ್ದರೂ ಡೊನಾಲ್ಡ್‌ ಟ್ರಂಪ್‌ ಮೇ 1ರಿಂದ ಮಾರುಕಟ್ಟೆಗಳನ್ನು ತೆರೆಯುವ ಮೂಡ್‌ನಲ್ಲಿದ್ದಾರೆ. ಜರ್ಮನಿಯಲ್ಲಿ ಕೂಡ ಲಾಕ್‌ಡೌನ್‌ ತೆರವುಗೊಳಿಸುವ ಪ್ರಕ್ರಿಯೆ ಶುರು ಮಾಡಿದ್ದು, ವೈರಸ್‌ ಜೊತೆಗಿನ ಯುದ್ಧ 40 ದಿನದಲ್ಲಿ ಮುಗಿಯುವುದಲ್ಲ. ಅಕ್ಟೋಬರ್‌, ನವೆಂಬರ್‌ವರೆಗೆ ಜಗ್ಗಬಹುದು ಎಂಬ ನಿಷ್ಕರ್ಷೆ ಕೇಳಿಬರುತ್ತಿದೆ. 

Tap to resize

Latest Videos

ಚೀನಾದ ಝೂಮ್ ಆ್ಯಪ್ ಬೇಡವೇ ಬೇಡ: ಪ್ರಧಾನಿಗೆ ಸಲಹೆ

ಅಂತಾರಾಷ್ಟ್ರೀಯ ಪ್ರಯಾಣ, ದೊಡ್ಡ ಸಮ್ಮೇಳನಗಳು, ಧಾರ್ಮಿಕ ಕಾರ್ಯಕ್ರಮಗಳು, ಮದುವೆಗಳನ್ನು ರದ್ದುಪಡಿಸಿ, ನಿಧಾನವಾಗಿ ದೇಶೀಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸದೇ ಹೋದರೆ ಜಾಗತಿಕ ಆಹಾರ ಕೊರತೆ ಉಂಟಾಗಬಹುದು ಎಂಬ ಭೀತಿ ಆವರಿಸತೊಡಗಿದೆ. ಬಹುತೇಕ ಮೇ 30ರ ಒಳಗೆ ದೊಡ್ಡ ದೊಡ್ಡ ದೇಶಗಳು ಲಾಕ್‌ಡೌನ್‌ ಎಷ್ಟು ದಿನ ಮುಂದುವರಿಸಬೇಕು ಎನ್ನುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರಬಹುದು. ಇಲ್ಲವಾದಲ್ಲಿ ವೈರಸ್‌ ಬರದೇ ಬಿಟ್ಟವರನ್ನು ನಿರುದ್ಯೋಗ ಮತ್ತು ಹಸಿವೆ ಬೆನ್ನಟ್ಟಿ ಕೊಲ್ಲಬಹುದೇನೋ?

ಮೋದಿ ನಿರ್ಧಾರದ ಹಿಂದೆ ಏನಿದೆ?

ಭಾರತದ ಜಿಡಿಪಿ ಈ ವರ್ಷ ಶೇ.2.5ಗೆ ಕುಸಿಯಬಹುದು ಎಂಬ ಅಂದಾಜಿದ್ದರೂ 130 ಕೋಟಿ ಜನಸಂಖ್ಯೆಯ ದೇಶಕ್ಕೆ ಲಾಕ್‌ಡೌನ್‌ ಒಂದೇ ಪರಿಹಾರ. ನಮ್ಮ 7-8 ಜಿಲ್ಲೆಗಳು ಸೇರಿದರೆ ಆಗುವಷ್ಟುಇರುವ ಯುರೋಪಿಯನ್‌ ದೇಶಗಳಲ್ಲಿ ಹಣವಿದೆ, ಅಸ್ಪತ್ರೆಗಳಿವೆ, ಬೇಕಾದಷ್ಟುಅತ್ಯಾಧುನಿಕ ಸೌಕರ್ಯಗಳಿವೆ. ಅಲ್ಲಿ ಹರ್ಡ್‌ ಇಮ್ಯುನಿಟಿ ಬಗ್ಗೆ ಯೋಚನೆ ಮಾಡಬಹುದೇನೋ. ಆದರೆ ಒಂದು ವೇಳೆ ನಮ್ಮಲ್ಲಿ ಹರ್ಡ್‌ ಇಮ್ಯುನಿಟಿ ಮಾಡಲು ಹೋಗಿ 70 ಕೋಟಿ ಜನರಿಗೆ ಸೋಂಕು ತಗಲಿದರೆ ಚಿಕಿತ್ಸೆಗೆ ಹಣ, ಆಸ್ಪತ್ರೆಗಳು, ಡಾಕ್ಟರ್‌ಗಳು, ಸೌಲಭ್ಯಗಳು, ಸ್ವಚ್ಛತೆ ಎಲ್ಲಿದೆ? 

ಮೋದಿ ಸಾಹೇಬರಿಗೆ ಇದೀಗ ಖಜಾನೆಯದ್ದೇ ಚಿಂತೆ

ಜನರನ್ನು ಮನೆ ಒಳಗೆ ಇರಿಸಿ ವೈರಸ್‌ ಸೋಂಕಿತರನ್ನು ಕಡಿಮೆ ಮಾಡುವುದೊಂದೇ ನಮಗಿರುವ ಸರಳ ಮಾರ್ಗ. ಪಾಶ್ಚಿಮಾತ್ಯ ದೇಶಗಳ ಬಳಿ ಪ್ರತಿ ಸಾವಿರಕ್ಕೆ ಒಬ್ಬ ಡಾಕ್ಟರ್‌ ಇದ್ದರೆ, ನಮ್ಮಲ್ಲಿ ಪ್ರತಿ 5 ಸಾವಿರ ಜನರಿಗೆ ಒಬ್ಬ ಡಾಕ್ಟರ್‌. ಒಂದು ಅಂದಾಜಿನ ಪ್ರಕಾರ 50 ಸಾವಿರ ತೀವ್ರ ನಿಗಾ ಪರಿಣತರು ನಮ್ಮ ದೇಶಕ್ಕೆ ಬೇಕು. ಆದರೆ ನಮ್ಮಲ್ಲಿರುವುದು ಎಂಟೂವರೆ ಸಾವಿರ ಮಾತ್ರ. ಈಗೇನೋ ಸೋಂಕಿತರ ಸಂಖ್ಯೆ ಒಂದೊಂದು ಊರಲ್ಲಿ ಕೈಯಿಂದ ಎಣಿಕೆ ಮಾಡುವಷ್ಟಿದೆ. ಇದೇ ಸಂಖ್ಯೆ ಲಕ್ಷ ತಲುಪಿದರೆ ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಏನು? ಅದಕ್ಕಾಗಿಯೇ ಮೋದಿ, ‘ಮನೆ ಒಳಗೆ ಇರಿ, ಸುರಕ್ಷಿತವಾಗಿರಿ. ಆಸ್ಪತ್ರೆಗಳ ಮೇಲೆ ಒತ್ತಡ ಹಾಕಬೇಡಿ’ ಎಂದು ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ.

40 ದಿನಗಳ ಕ್ವಾರಂಟೈನ್‌ ಮೂಲ ಇಲ್ಲಿದೆ

ಕೊರೋನಾ ಜೊತೆಜೊತೆಗೆ ಹೆಚ್ಚು ಪ್ರಚಲಿತಕ್ಕೆ ಬಂದ ಶಬ್ದ ಎಂದರೆ ಕ್ವಾರಂಟೈನ್‌. ಇದು ಮೂಲತಃ ಇಟಾಲಿಯನ್‌ ಶಬ್ದವಂತೆ. ಅಲ್ಲಿನ ಕಾಲುವೆಗಳ ಸುಂದರ ನಗರ ವೆನಿಸ್‌ನಲ್ಲಿ ಹಿಂದೆ ವಿದೇಶದಿಂದ ಬರುತ್ತಿದ್ದ ಹಡಗುಗಳನ್ನು 40 ದಿನ ಒಳಗೆ ತೆಗೆದುಕೊಳ್ಳುತ್ತಿರಲಿಲ್ಲ. ಈ ಪ್ರಕ್ರಿಯೆಗೆ ಬಿದ್ದ ಹೆಸರೇ ಕ್ವಾರಂಟೈನ್‌. ಈಗ ವಿಶ್ವದಲ್ಲಿ ಪ್ರತಿಯೊಬ್ಬರ ಬಾಯಲ್ಲೂ ಕ್ವಾರಂಟೈನ್‌ ಪದ ಪ್ರಯೋಗ ಆಗುತ್ತಿದೆ. ಅಂದಹಾಗೆ, ಭಾರತದಲ್ಲಿ ಮೇ 3ರ ವರೆಗೆ ಲಾಕ್‌ಡೌನ್‌ ಘೋಷಣೆಯ ಅರ್ಥವೇ 40 ದಿನಗಳ ಕ್ವಾರಂಟೈನ್‌.

- ಪ್ರಶಾಂತ್ ನಾಥು, ದೆಹಲಿ ಪ್ರತಿನಿಧಿ, ಸುವರ್ಣ ನ್ಯೂಸ್
ಕನ್ನಡಪ್ರಭದಲ್ಲಿ ಪ್ರಕಟವಾದ ದೆಹಲಿಯಿಂದ ಕಂಡ ರಾಜಕಾರಣ ಅಂಕಣದಿಂದ 

click me!