
ನವದೆಹಲಿ (ಮಾರ್ಚ್ 19, 2023): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅವರು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸ್‌ನ ಉನ್ನತ ಅಧಿಕಾರಿಗಳು ಅವರ ನಿವಾಸಕ್ಕೆ ತೆರಳಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೇಶದ ಹಲವು ರಾಜ್ಯಗಳನ್ನು ಹಾದು ಹೋದ ‘ಭಾರತ್ ಜೋಡೋ ಯಾತ್ರೆ’ ವೇಳೆ ರಾಹುಲ್ ಗಾಂಧಿಯವರ "ಮಹಿಳೆಯರ ಮೇಲೆ ಇನ್ನೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ" ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಪೊಲೀಸರು ಅವರ ನಿವಾಸವನ್ನು ತಲುಪಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ತನ್ನನ್ನು ಸಂಪರ್ಕಿಸಿರುವ ಮಹಿಳೆಯರ ವಿವರಗಳನ್ನು ಕೇಳಿ ಪೊಲೀಸರು ಮಾರ್ಚ್ 16 ರಂದು ಕಾಂಗ್ರೆಸ್ ನಾಯಕನಿಗೆ ನೋಟಿಸ್ ನೀಡಿದ್ದರು.
ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಪೊಲೀಸರು ರಾಹುಲ್ ಗಾಂಧಿಗೆ ಪ್ರಶ್ನಾವಳಿಯನ್ನು ಕಳುಹಿಸಿದ್ದರು. ಇದಕ್ಕೆ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತ್ ಜೋಡೋ ಯಾತ್ರೆಯ ವೇಳೆ ಶ್ರೀನಗರದಲ್ಲಿ ರಾಹುಲ್ ಗಾಂಧಿ "ಮಹಿಳೆಯರು ಈಗಲೂ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ನಾನು ಕೇಳಿದ್ದೇನೆ" ಎಂದು ಹೇಳಿಕೆ ನೀಡಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದತಿಗೆ ಬಿಜೆಪಿ ಬಿಗಿಪಟ್ಟು ; ಕ್ಷಮೆ ಕೇಳೋವರೆಗೂ ಮಾತಾಡಲು ಬಿಡಲ್ಲ ಎಂದ ಕೇಸರಿ ಪಕ್ಷ
ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಲು, ಆ ಮಹಿಳೆಯರ ವಿವರಗಳನ್ನು ರಾಹುಲ್ ಗಾಂಧಿಯಿಂದ ತಿಳಿದುಕೊಳ್ಳಲು ಬಯಸುವುದಾಗಿಯೂ ದೆಹಲಿ ಪೊಲೀಸರು ಹೇಳಿದ್ದಾರೆ. ವಿಶೇಷ ಪೊಲೀಸ್ ಕಮಿಷನರ್ ಮಟ್ಟದ ಅಧಿಕಾರಿಯೊಂದಿಗೆ ಉನ್ನತ ಪೊಲೀಸ್ ಅಧಿಕಾರಿಗಳು, ಸಂಬಂಧಪಟ್ಟ ಮಹಿಳೆಯರ ಬಗ್ಗೆ ಮಾಹಿತಿ ಪಡೆಯಲು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ರಾಹುಲ್ ಗಾಂಧಿಗೆ ನೋಟಿಸ್ ನೀಡಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸ್ವಯಂ ಪ್ರೇರಿತವಾಗಿ ಅಥವಾ ದೂರಿನ ಆಧಾರದ ಮೇಲೆ ರಾಹುಲ್ ಗಾಂಧಿ ವಿರುದ್ಧ ನೋಟಿಸ್ ನೀಡುವುದಕ್ಕೆ ಯಾವುದೇ ಕಾನೂನು ಪೂರ್ವನಿದರ್ಶನವಿಲ್ಲ ಎಂದೂ ಕಾಂಗ್ರೆಸ್ ಉನ್ನತ ಮೂಲಗಳು ಕಿಡಿ ಕಾರಿದೆ. ದೆಹಲಿ ಪೊಲೀಸರಿಂದ ನಿಯೋಜಿಸಲಾದ ಕಿರುಕುಳದ ಮತ್ತೊಂದು ಸಾಧನವಾಗಿ ಕಾಂಗ್ರೆಸ್ ಪಕ್ಷ ಇದನ್ನು ನೋಡುತ್ತದೆ. "ಒಂದು ಹೇಳಿಕೆ ಇರಬಹುದು, ಆದರೆ ಅವರು ಸಂತ್ರಸ್ಥೆಯರ ಹೆಸರನ್ನು ಬಹಿರಂಗಪಡಿಸಲು ಅವರನ್ನು ಒತ್ತಾಯಿಸಲು ಸಾಧ್ಯವಿಲ್ಲ. ಈ ಕ್ರಮವು ದುರುದ್ದೇಶಪೂರಿತ ಮತ್ತು ಬೋಗಸ್ ಆಗಿದೆ" ಎಂದೂ ಅವರು ಹೇಳಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಯೋಜಿತ ವೈಯಕ್ತಿಕ ದಾಳಿ: ಗಾಂಧಿ ಕುಟುಂಬ ಆಪ್ತ ಸ್ಯಾಮ್ ಪಿತ್ರೋಡಾ ಆಕ್ರೋಶ
ಈ ಮಧ್ಯೆ, ರಾಹುಲ್ ಗಾಂಧಿ ಅವರು ವಿವರಗಳನ್ನು ನೀಡಲು ವಿಫಲವಾದರೆ, ಅವರಿಗೆ ಮತ್ತೊಂದು ನೋಟಿಸ್ ನೀಡಲಾಗುವುದು ಎಂದೂ ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
"ಇದು ವ್ಯಕ್ತಿಗಳ ಜೀವನ ಮತ್ತು ಭದ್ರತೆಯನ್ನು ಒಳಗೊಂಡಿರುವ ಸೂಕ್ಷ್ಮ ಪ್ರಕರಣವಾಗಿರುವುದರಿಂದ, ಸಾಕ್ಷ್ಯ ಮತ್ತು ಸಾಕ್ಷಿಗಳನ್ನು ಹಾಳು ಮಾಡದಂತೆ ಖಚಿತಪಡಿಸಿಕೊಳ್ಳಲು ತಂಡವು ಸಂಬಂಧಿತ ಮಾಹಿತಿಯನ್ನು ಸಂಗ್ರಹಿಸಲು ಕೆಲಸ ಮಾಡುತ್ತಿದೆ" ಎಂದೂ ಅವರು ಹೇಳಿದರು.
ಈಗಾಗಲೇ ರಾಹುಲ್ ಗಾಂಧಿ ಅವರು ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಹೇಳಿಕೆಗೆ ತೀವ್ರ ಆಕ್ರೋಶ ಎದುರಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ದೇಶಕ್ಕೆ ಅಥವಾ ಸರ್ಕಾರಕ್ಕೆ ಕ್ಷಮೆ ಕೇಳುವವರೆಗೆ ಅವರನ್ನು ಸಂಸತ್‌ನಲ್ಲಿ ಮಾತನಾಡಲು ಬಿಡಲ್ಲ ಎಂದು ಬಿಜೆಪಿ ಆಗ್ರಹಿಸಿದೆ. ಅಲ್ಲದೆ, ಅವರ ಲೋಕಸಭೆ ಸಂಸದ ಸ್ಥಾನಮಾನ ರದ್ದು ಮಾಡಲು ಸಹ ಬಿಜೆಪಿಯ ಸಂಸದರೊಬ್ಬರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Sorry Politics: ರಾಹುಲ್ - ಮೋದಿ ಕ್ಷಮೆ ಗಲಾಟೆಗೆ ಬಲಿಯಾಯ್ತು 2ನೇ ದಿನದ ಕಲಾಪ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ