ವಿಶ್ವದ ಅತ್ಯಂತ ಪ್ರಮುಖ ಸುದ್ದಿಸಂಸ್ಥೆಗಳ ಪೈಕಿ ಒಂದಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಭಾರತದಲ್ಲಿನ ತನ್ನ ಪ್ರಸಾರದ ಲೈಸೆನ್ಸ್ ಅನ್ನು ಭಾರತೀಯರಿಗೆ ಮಾರಾಟ ಮಾಡಿದೆ!
ನವದೆಹಲಿ: ವಿಶ್ವದ ಅತ್ಯಂತ ಪ್ರಮುಖ ಸುದ್ದಿಸಂಸ್ಥೆಗಳ ಪೈಕಿ ಒಂದಾದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಭಾರತದಲ್ಲಿನ ತನ್ನ ಪ್ರಸಾರದ ಲೈಸೆನ್ಸ್ ಅನ್ನು ಭಾರತೀಯರಿಗೆ ಮಾರಾಟ ಮಾಡಿದೆ! ವಿಶೇಷವೆಂದರೆ ಬಿಬಿಸಿಯಲ್ಲಿನ ಭಾರತೀಯ ಸಿಬ್ಬಂದಿಗಳೇ ಸೇರಿಕೊಂಡು ‘ಕಲೆಕ್ಟಿವ್ ನ್ಯೂಸ್‌ರೂಂ’ ಎಂಬ ಕಂಪನಿ ಸ್ಥಾಪಿಸಿದ್ದು, ಅದಕ್ಕೆ ಬಿಬಿಸಿ ಇಂಡಿಯಾ ತನ್ನ ಸುದ್ದಿ ಪ್ರಸಾರದ ಲೈಸೆನ್ಸ್ ಮಾರಾಟ ಮಾಡಿದೆ.
ಪ್ರಮುಖ ಸುದ್ದಿ ಸಂಸ್ಥೆಯೊಂದು ತನ್ನ ಲೈಸೆನ್ಸ್ ಅನ್ನು ತನ್ನ ಸಿಬ್ಬಂದಿಗೇ ಮಾರಾಟ ಮಾಡಿದ ಮೊದಲ ಘಟನೆ ಇದು ಹೇಳಲಾಗಿದೆ. 1940ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದ ಬಿಬಿಸಿ ಇಂಡಿಯಾ, ಕಳೆದ ಕೆಲ ವರ್ಷಗಳಿಂದ ತನ್ನ ಕೆಲವು ಸುದ್ದಿಗಳ ಮೂಲಕ ವಿವಾದದ ಕೇಂದ್ರಬಿಂದುವಾಗಿತ್ತು. ಎನ್‌ಡಿಎ ಸರ್ಕಾರದ ಹಲವು ಯೋಜನೆಗಳ ಮತ್ತು ನೀತಿಗಳ ಕುರಿತಾಗಿ ವರದಿಗಳನ್ನು ಪ್ರಕಟಿಸುತ್ತಲೇ ಬಂದಿತ್ತು.
YearEnder 2023 ಮೋದಿ ಸಾಕ್ಷ್ಯಚಿತ್ರದ ಬಿಸಿ ಏರಿಸಿದ ಬಿಬಿಸಿ, ಪಾಕಿಸ್ತಾನಕ್ಕೆ ಗೋಧಿಹಿಟ್ಟಿನ ತಲೆಬಿಸಿ!
ಈ ನಡುವೆ ತೆರಿಗೆ ವಂಚನೆ ಆರೋಪದ ಮೇಲೆ ಕಳೆದ ವರ್ಷ ಬಿಬಿಸಿ ಇಂಡಿಯಾದ ಕಚೇರಿಗಳ ಮೇಲೆ ಆದಾಯ ತೆರಿಗೆ ದಾಳಿ ಮಾಡಿದ್ದರು. ಮತ್ತೊಂದೆಡೆ ಸುದ್ದಿ ಮಾಧ್ಯಮದಲ್ಲಿ ಯಾವುದೇ ವಿದೇಶಿ ಸಂಸ್ಥೆ ಶೇ.26ಕ್ಕಿಂತ ಹೆಚ್ಚು ಎಫ್‌ಡಿಐ ಹೊಂದುವಂತಿಲ್ಲ ಎಂಬ ನೀತಿ ರೂಪಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಬಿಬಿಸಿ ಇಂಡಿಯಾದಲ್ಲಿ ಶೇ.99ರಷ್ಟು ಪಾಲು ಹೊಂದಿದ್ದ ಬ್ರಿಟನ್ ಮೂಲದ ಕಂಪನಿ ತನ್ನ ಲೈಸೆನ್ಸ್ ಅನ್ನು ಕಲೆಕ್ಟಿವ್ ನ್ಯೂಸ್‌ರೂಂಗೆ ಮಾರಾಟ ಮಾಡಿದೆ. ಜೊತೆಗೆ ಹೊಸ ಕಂಪನಿಯಲ್ಲಿ ಶೇ.26ರಷ್ಟು ಷೇರುಪಾಲು ಹೊಂದಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದೆ.
ಇದೇ ವೇಳೆ ಕಲೆಕ್ಟಿವ್ ನ್ಯೂಸ್‌ರೂಂನ ಸಿಇಒ ಮತ್ತು ಬಿಬಿಸಿ ಇಂಡಿಯಾದ ಹಿರಿಯ ಪತ್ರಕರ್ತೆ ರೂಪಾ ಝಾ ಪ್ರತಿಕ್ರಿಯೆ ನೀಡಿ, ಬಿಬಿಸಿ ತನ್ನ ಪ್ರಸಾರದ ಲೈಸೆನ್ಸ್ ಅನ್ನು ಮತ್ತೊಂದು ಸಂಸ್ಥೆಗೆ ನೀಡಿರುವುದು ಕಂಡು ಕೇಳರಿಯದ ಬೆಳವಣಿಗೆ. ಹೊಸ ಸಂಸ್ಥೆಯಲ್ಲಿ ನಾವು ಪತ್ರಿಕೋದ್ಯಮದ ವಿಷಯದಲ್ಲಿ ಯಾವುದೇ ರಾಜಿ ಆಗುವುದಿಲ್ಲ. ಬಿಬಿಸಿ ನಮ್ಮ ಬೆಂಬಲಕ್ಕೆ ಇರಲಿದೆ ಎಂದು ಹೇಳಿದ್ದಾರೆ.
ಆದಾಯ ಕಡಿಮೆ ವರದಿ ಮಾಡಿದ್ದನ್ನು ಒಪ್ಪಿಕೊಂಡ ಬಿಬಿಸಿ ಇಂಡಿಯಾ, ವಿಪಕ್ಷಗಳಿಗೆ ಮುಖಭಂಗ!