
ನವದೆಹಲಿ (ಏ.19): ಮದ್ಯ ಲೈಸೆನ್ಸ್ ಹಗರಣದಲ್ಲಿ ಜೈಲು ಪಾಲಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹತ್ಯೆಗೆ ದೊಡ್ಡ ಸಂಚು ರೂಪಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ. ಮಧುಮೇಹದಿಂದ ಬಳಲುತ್ತಿದ್ದರೂ ಕೇಜ್ರಿವಾಲ್ ಜೈಲಲ್ಲಿ ಸಿಹಿ ತಿನಿಸು ಸೇವಿಸುತ್ತಿದ್ದಾರೆ. ಹೀಗಾಗಿ ಅವರಿಗೆ ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಬಾರದು ಎಂದು ಜಾರಿ ನಿರ್ದೇಶನಾಲಯ ಗುರುವಾರ ಕೋರ್ಟ್‌ಗೆ ಮನವಿ ಮಾಡಿತ್ತು.
ಅದರ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಆಪ್ ಸರ್ಕಾರದ ಸಚಿವ ಅತಿಷಿ, ‘ಕೇಜ್ರಿವಾಲ್ ಆಹಾರ ಸೇವನೆ ಕುರಿತು ಇ.ಡಿ.ಅಧಿಕಾರಿಗಳು ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಅಂಶ 300 ದಾಟಿದೆ. ಹೀಗಾಗಿ ಇನ್ಸುಲಿನ್ ನೀಡುವಂತೆ ಕೋರಿಕೆ ಸಲ್ಲಿಸಿದರೂ ಅಧಿಕಾರಿಗಳು ಅದಕ್ಕೆ ಅನುಮತಿ ನೀಡುತ್ತಿಲ್ಲ. ಜೊತೆಗೆ ಮನೆಯಲ್ಲಿ ಸಿದ್ಧಪಡಿಸಿದ ಆಹಾರ ನೀಡಲೂ ಅವಕಾಶ ನೀಡುತ್ತಿಲ್ಲ. ಇದನ್ನೆಲ್ಲಾ ನೋಡಿದರೆ ಜೈಲಿನಲ್ಲೇ ಕೇಜ್ರಿವಾಲ್ ಅವರನ್ನು ಕೊಲ್ಲಲು ದೊಡ್ಡ ಪಿತೂರಿ ರೂಪಿಸಿದಂತಿದೆ’ ಎಂದು ಆರೋಪಿಸಿದರು.
ಬಿಜೆಪಿ ಅಡಿಯಾಳಾಗಿರುವ ಇ.ಡಿ., ಕೇಜ್ರಿವಾಲ್ ಅವರು ಬಾಳೆಹಣ್ಣು, ಮಾವಿನ ಹಣ್ಣು ಮತ್ತು ಹೆಚ್ಚಾಗಿ ಸಿಹಿ ತಿನಿಸುಗಳನ್ನು ತಿನ್ನುತ್ತಿದ್ದಾರೆ ಎಂದ ಕೋರ್ಟಿಗೆ ಸುಳ್ಳು ಹೇಳಿದೆ. ಯಾರಾದರೂ ಸಕ್ಕರೆ ಕಾಯಿಲೆ ಇದ್ದವರೂ ಸಿಹಿ ಪದಾರ್ಥ ತಿನ್ನಲು ಸಾಧ್ಯವೇ? ತನ್ನ ಘಟಕವಾಗಿರುವ ಇ.ಡಿ. ಮೂಲಕ ಕೇಜ್ರಿವಾಲ್ ಅವರಿಗೆ ಹಾನಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಅತಿಷಿ ಆರೋಪಿಸಿದರು. ಸಕ್ಕರೆ ಅಂಶ ದಿಢೀರ್ ಕಡಿಮೆಯಾದರೆ ಎಂಬ ಕಾರಣಕ್ಕೆ ಮಧುಮೇಹಿಗಳಿಗೆ ಬಾಳೆಹಣ್ಣು ಅಥವಾ ಚಾಕಲೆಟ್ ಇಟ್ಟುಕೊಳ್ಳಲು ವೈದ್ಯರೇ ಸೂಚಿಸುತ್ತಾರೆ.
ಸದ್ದಿಲ್ಲದೇ 250 ಕಿ.ಮೀ. ವೇಗದ ಸ್ವದೇಶಿ ಬುಲೆಟ್ ರೈಲು ತಯಾರಿ ಶುರು
ಇನ್ನು ನವರಾತ್ರಿ ಮೊದಲ ದಿನ ಮಾತ್ರವೇ ಕೇಜ್ರಿವಾಲ್ ಆಲೂ ಪೂರಿ ಸೇವಿಸಿದ್ದರು. ಆದರೂ ಅವರ ಬಗ್ಗೆ ಇ.ಡಿ. ನಾನಾ ಸುಳ್ಳು ಮಾಹಿತಿ ನೀಡುತ್ತಿದೆ ಎಂದು ಅತಿಷಿ ಕಿಡಿಕಾರಿದರು.ಜಾಮೀನಿಗಾಗಿ ಕೇಜ್ರಿ ಅತಿಯಾಗಿ ಮಾವು, ಸಿಹಿ ಸೇವನೆ: ಇ.ಡಿ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಸಕ್ಕರೆ ಕಾಯಿಲೆ ಇದ್ದರೂ ವೈದ್ಯಕೀಯ ಜಾಮೀನು ಪಡೆಯುವ ಸಲುವಾಗಿ ಮಾವಿನ ಹಣ್ಣು ಮತ್ತು ಸಿಹಿ ಪದಾರ್ಧಗಳನ್ನೆ ಹೆಚ್ಚಾಗಿ ತಿನ್ನುತ್ತಿದ್ದಾರೆ. ಹೀಗಾಗಿ ಅವರಿಗೆ ವೈದ್ಯಕೀಯ ಜಾಮೀನು ನೀಡಬಾರದೆಂದು ಜಾರಿ ನಿರ್ದೇಶನಾಲಯ ಗುರುವಾರ ನ್ಯಾಯಾಲಯಕ್ಕೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ