ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದಂತೆ ಬೀಗುತ್ತಿರುವ ಕಾಂಗ್ರೆಸ್‌ಗೆ ವಾಸ್ತವತೆಯ ಅರಿವಿಲ್ಲ. ಅವರು ಗೆದ್ದಿರುವುದು 100ಕ್ಕೆ 99 ಅಲ್ಲ, 543ಕ್ಕೆ 99 ಆದರೂ ತಾವೇ ಗೆದ್ದಂತೆ ವರ್ತಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಗೆದ್ದಂತೆ ಬೀಗುತ್ತಿರುವ ಕಾಂಗ್ರೆಸ್‌ಗೆ ವಾಸ್ತವತೆಯ ಅರಿವಿಲ್ಲ. ಅವರು ಗೆದ್ದಿರುವುದು 100ಕ್ಕೆ 99 ಅಲ್ಲ, 543ಕ್ಕೆ 99 ಆದರೂ ತಾವೇ ಗೆದ್ದಂತೆ ವರ್ತಿಸುತ್ತಿದ್ದಾರೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೋಮವಾರ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಬಾಲಕ ಬುದ್ಧಿಗೆ ಹೋಲಿಸಿ ವ್ಯಂಗ್ಯಭರಿತ ತೀಕ್ಷ್ಣ ಎದಿರೇಟು ನೀಡಿದ್ದಾರೆ. ಅಲ್ಲದೆ, ಈ ಬಾಲಕ ಬುದ್ಧಿಯ ವ್ಯಕ್ತಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು ತಮಾಷೆ ಮಾಡಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಂಗಳವಾರ ಸುಮಾರು 2 ತಾಸು ಸುದೀರ್ಘವಾಗಿ ಮಾತನಾಡಿದ ಪ್ರಧಾನಿ, ಸೋಮವಾರ ರಾಹುಲ್ ಗಾಂಧಿ ತಮ್ಮ ಮತ್ತು ತಮ್ಮ ಸರ್ಕಾರದ ವಿರುದ್ಧ ಮಾಡಿದ್ದ ಆರೋಪಗಳಿಗೆ ಎಳೆ ಎಳೆಯಾಗಿ ತಿರುಗೇಟು ನೀಡುವ ಮೂಲಕ ವಿಪಕ್ಷಗಳನ್ನು ಕಟ್ಟಿಹಾಕುವ ಯತ್ನ ಮಾಡಿದರು.
ಬಾಲಕ ಬುದ್ಧಿಗೆ ದೇಶ ಆಳಲು ಆಗದು:
ರಾಹುಲ್ ಗಾಂಧಿ ಅವರದ್ದು ಬಾಲಕ ಬುದ್ಧಿ ಎಂದು ಟೀಕಿಸಿದ ಮೋದಿ, ಬಾಲಕ ಬುದ್ಧಿ (ರಾಹುಲ್) ಅಳುತ್ತಿದ್ದಾನೆ. ಆತ ನನಗೆ ಆತ ಹೊಡೆದಿದ್ದಾನೆ, ಈತ ಹೊಡೆದಿದ್ದಾನೆ, ಇಲ್ಲಿ ಹೊಡೆದಿದ್ದಾನೆ, ಅಲ್ಲಿ ಹೊಡೆದಿದಿದ್ದಾನೆ ಎಂದು ಅನುಕಂಪ ಪಡೆಯಲು ನಾಟಕ ಆಡುತ್ತಿದ್ದಾನೆ. ಆ ಮಗುವಿನ ಮನಸ್ಸಿನ ವ್ಯಕ್ತಿಗೆ ಏನು ಹೇಳಬೇಕು ಮತ್ತು ಹೇಗೆ ವರ್ತಿಸಬೇಕು ಎಂದು ಗೊತ್ತಾಗುತ್ತಿಲ್ಲ. ಆತ (ರಾಹುಲ್ ಗಾಂಧಿ) ಲೋಕಸಭೆಯೊಳಗೆ ಕೆಲವೊಮ್ಮೆ ಕಣ್ಣು ಮಿಟುಕಿಸುತ್ತಾನೆ. ಹೀಗಾಗಿಯೇ ದೇಶವು ಆತನನ್ನು ಚೆನ್ನಾಗಿ ಅರಿತುಕೊಂಡಿದ್ದು, ಈಗ ಇಡೀ ದೇಶವು ಈಗ ಅವನಿಗೆ ತುಮ್ಸೆ ನ ಹೋ ಪಾಯೇಗಾ (ನಿನ್ನಿಂದ ದೇಶ ಆಳಲು ಆಗದು) ಎಂದು ಹೇಳುತ್ತಿದೆ. ಅದಕ್ಕೇ ಕಾಂಗ್ರೆಸ್ ಪಕ್ಷವನ್ನು ಸತತ 3ನೇ ಬಾರಿಗೆ ಜನ ತಿರಸ್ಕರಿಸಿದ್ದಾರೆ. ವಿಪಕ್ಷದಲ್ಲಿ ಕೂರಲು ಸೂಚಿಸಿದ್ದಾರೆ ಎಂದು ಹಾಸ್ಯಭರಿತವಾಗಿ ಚಾಟಿ ಬೀಸಿದರು.
ಲೋಕಸಭೆಯಲ್ಲಿ ಮೋದಿ ಮಾತು ಆರಂಭಿಸಿದ ಬೆನ್ನಲ್ಲೇ ವಿಪಕ್ಷಗಳ ಅಡ್ಡಿ, ಕೆರಳಿದ ಸ್ಪೀಕರ್ ಓಂ ಬಿರ್ಲಾ!
99 ಅಂಕದ ಕತೆ ಹೇಳಿ ಟಾಂಗ್:
ಇದೇ ವೇಳೆ ಮುಂದುವರಿದ ಮೋದಿ, ನನಗೆ ಒಂದು ಘಟನೆ ನೆನಪಾಗುತ್ತಿದೆ. ಒಂದೂರಲ್ಲಿ ಒಬ್ಬ ಬಾಲಕನಿದ್ದ, ಆತ ತನಗೆ 99 ಅಂಕ ಬಂದಿದೆ ಎಂದು ಎಲ್ಲರಿಗೂ ತೋರಿಸುತ್ತಿದ್ದ. ಜನರು 99 ಅಂದಾಕ್ಷಣ ಆತನನ್ನು ಇನ್ನಷ್ಟು ಪ್ರೋತ್ಸಾಹಿಸುತ್ತಿದ್ದರು. ಈ ವೇಳೆ ಶಿಕ್ಷಕರು ಬಂದು, ನೀವೇಕೆ ಸಿಹಿ ಹಂಚುತ್ತಿದ್ದೀರಿ ಎಂದು ಪ್ರಶ್ನಿಸಿ, ಈ ಬಾಲಕ 99 ಅಂಕ ಪಡೆದಿದ್ದು 100ಕ್ಕೆ ಅಲ್ಲ, 543ಕ್ಕೆ ಎಂದು ವಾಸ್ತವಿಕತೆ ಬಿಚ್ಚಿಟ್ಟರು. ವಿಷಯ ಹೀಗಿರುವಾಗ ನೀನು ವೈಫಲ್ಯದಲ್ಲೂ ವಿಶ್ವದಾಖಲೆ ಸ್ಥಾಪಿಸಿದ್ದೀಯಾ ಎಂದು ಆ ಬಾಲಕನಿಗೆ ಹೇಳುವವರಾದರೂ ಯಾರು? ಎಂದು ನಗೆಗಡಲಲ್ಲಿ ಪ್ರಶ್ನಿಸಿದರು. ಈ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 99 ಸ್ಥಾನ ಗೆದ್ದು ಬೀಗುತ್ತಿರುವ ಬಗ್ಗೆ ಟಾಂಗ್ ನೀಡಿದರು.
ರಾಹುಲ್ ಗಾಂಧಿ ಹೇಳಿಕೆಗೆ ಹಿಂದೂ, ಸಿಖ್, ಮುಸ್ಲಿಂ ಧರ್ಮಗುರುಗಳು ಹೇಳಿದ್ದೇನು?
ನೋವನ್ನು ಅರ್ಥ ಮಾಡಿಕೊಳ್ಳಬಲ್ಲೆ:
ಸತತ ಸುಳ್ಳುಗಳನ್ನು ಹೇಳಿದ ಹೊರತಾಗಿಯೂ ಸೋಲಬೇಕಾಗಿ ಬಂದವರ (ಕಾಂಗ್ರೆಸ್) ನೋವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಸತತ ಮೂರನೇ ಬಾರಿ ಅವರು 100 ಸ್ಥಾನಗಳನ್ನು ಕೂಡಾ ಗೆಲ್ಲಲಾಗದೇ ಹೋಗಿದ್ದು ಇದೇ ಮೊದಲ ಬಾರಿ. ಈ ನೋವು ಲೋಕಸಭಾ ಚುನಾವಣೆಯ ಸೋಲು ಅವರ ವರ್ತನೆಯಲ್ಲಿ ವ್ಯಕ್ತವಾಗಬೇಕಿತ್ತು. ಆದರೆ ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳದೆಯೇ ಜನರ ಅನುಕಂಪ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ಸೋಲೊಪ್ಪಿಕೊಳ್ಳುವ ಬದಲು ನಾವು ಚುನಾವಣೆ ಗೆದ್ದೆವೆಂದು ಬೀಗುತ್ತಿದ್ದಾರೆ ಎಂದು ಕಿಡಿಕಾರಿದರು.
ಬೇಲ್ ಮೇಲೆ ರಾಹುಲ್:
ನಿನ್ನೆ ನಾವು ಲೋಕಸಭೆಯಲ್ಲಿ ಬಾಲಕ ಬುದ್ಧಿಯ ವರ್ತನೆ ನೋಡಿದೆವು. ಅನುಕಂಪಕ್ಕಾಗಿ ಹೊಸ ನಾಟಕ ಆಡಲಾಯಿತು. ಆದರೆ ಬಾಲಕ ಬುದ್ಧಿಯ ವ್ಯಕ್ತಿ ಸಾವಿರಾರು ಕೋಟಿ ರು. ಭ್ರಷ್ಟಾಚಾರ ಕೇಸಿನಲ್ಲಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ ಎಂಬ ವಿಷಯ ದೇಶದ ಜನತೆಗೆ ಗೊತ್ತಿದೆ. ಒಬಿಸಿಗಳನ್ನು ಟೀಕಿಸಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಇಂಥ ಹೇಳಿಕೆ ನೀಡಿದ್ದಕ್ಕಾಗಿ ಅವರು ಸುಪ್ರೀಂಕೋರ್ಟ್‌ನಲ್ಲಿ ಕ್ಷಮೆ ಕೇಳಬೇಕಾಗಿ ಬಂತು. ವೀರ ಸಾರ್ವರ್ಕರ್ ಅವರಂಥ ಮಹಾನ್ ವ್ಯಕ್ತಿಗಳನ್ನು ಅವಮಾನಿಸಿದ ಪ್ರಕರಣ ಮತ್ತು ದೇಶದ ಅತಿದೊಡ್ಡ ರಾಜಕೀಯ ಪಕ್ಷದ ಅಧ್ಯಕ್ಷರನ್ನು ಕೊಲೆಗಾರ ಎಂದು ಕರೆದ ಪ್ರಕರಣವೂ ಈ ನಾಯಕರ ಮೇಲಿದೆ ಎಂದು ರಾಹುಲ್ ವಿರುದ್ಧ ಮೋದಿ ತೀವ್ರ ವಾಗ್ದಾಳಿ ನಡೆಸಿದರು.
ನಿನ್ನೆ ಸುಳ್ಳಿನ ಸರಮಾಲೆ:
ಲೋಕಸಭೆಯ ವಿಪಕ್ಷ ನಾಯಕ (ರಾಹುಲ್) ಈ ಹಿಂದೆ ಇವಿಎಂ ಬಗ್ಗೆ ಸುಳ್ಳಾಡಿದ್ದರು, ಸಂವಿಧಾನದ ಬಗ್ಗೆ, ಮೀಸಲು ಬಗ್ಗೆ ಸುಳ್ಳಾಡಿದ್ದರು. ಅದಕ್ಕೂ ಮುನ್ನ ರಫೇಲ್, ಎಚ್‌ಎಎಲ್, ಎಲ್‌ಐಸಿ, ಬ್ಯಾಂಕ್ ಬಗ್ಗೆಯೂ ಸುಳ್ಳಾಡಿದ್ದರು. ಇದೀಗ ಸೋಮವಾರ ಸದನವನ್ನೂ ತಮ್ಮ ಸುಳ್ಳುಗಳ ಮೇಲೆ ದಾರಿ ತಪ್ಪಿಸುವ ಧೈರ್ಯವನ್ನು ಅವರು ತೋರಿದ್ದಾರೆ. ಅಗ್ನಿವೀರ, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಬಗ್ಗೆಯೂ ಅವರು ಸುಳ್ಳು ಹೇಳಿದ್ದಾರೆ ಎಂದು ಮೋದಿ ಕಿಡಿಕಾರಿದರು. ಅಲ್ಲದೆ ಸದನದಲ್ಲಿ ಸುಳ್ಳು ಹೇಳುವ ಸಂಪ್ರದಾಯವನ್ನೇ ಹೊಂದಿರುವ ರಾಹುಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದೇಶ ಬಯಸುತ್ತದೆ ಎಂದು ಸ್ಪೀಕರ್ ಬಳಿ ಮೋದಿ ಮನವಿ ಮಾಡಿದರು.
ಜತೆಗೆ ಬಾಲಕ ಬುದ್ಧಿಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ ಎಂದು ದೇವರಲ್ಲಿ ಕೋರುತ್ತೇನೆ ಎಂದು ಹೇಳುವ ಮೂಲಕ ತಮ್ಮ ಭಾಷಣ ಕೊನೆಗೊಳಿಸಿದರು.
ಅಂದೊಂದಿತ್ತು ಕಾಲ ಭ್ರಷ್ಟಾಚಾರದ ಮೇಳ, ಗದ್ದಲದ ನಡುವೆ ಲೋಕಸಭೆಯಲ್ಲಿ ವಿಪಕ್ಷಕ್ಕೆ ಮೋದಿ ಗುದ್ದು!