ಕಾಂಗ್ರೆಸ್ ಈಗಲೂ ರಿಮೋಟ್ ಕಂಟ್ರೋಲ್‌ನಲ್ಲಿದೆ ಎಂದು ಆಜಾದ್ ಹೇಳಿದ್ದು, ಖರ್ಗೆಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರವಿಲ್ಲ ಎಂದಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಹೆಚ್ಚು ಉದಾರಿ, ಪ್ರೌಢ ಆಡಳಿತಗಾರ ಎಂದೂ ಶ್ಲಾಘಿಸಿದ್ದಾರೆ.
ನವದೆಹಲಿ (ಏಪ್ರಿಲ್ 6, 2023): ಕಾಂಗ್ರೆಸ್ ಪಕ್ಷ ಈಗಲೂ ಸಹ ರಿಮೋಟ್ ಕಂಟ್ರೋಲ್‌ನಿಂದ ನಡೆಯುತ್ತಿದೆ. ನಾನು ಈ ಬಗ್ಗೆ ಹೆಚ್ಚು ಮಾತನಾಡಿದಷ್ಟು ಕಹಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಕಳೆದ ವರ್ಷ ಪಕ್ಷ ತೊರೆದ ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಬುಧವಾರ ಹೇಳಿದ್ದಾರೆ. ಅವರು ಬರೆದಿರುವ ಆತ್ಮಕಥೆ ‘ಆಜಾದ್- ಅನ್ ಆಟೋಬಯೋಗ್ರಫಿ’ ಪುಸ್ತಕದ ಬಿಡುಗಡೆಗೂ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳುವ ಯಾವುದೇ ಅಧಿಕಾರವನ್ನು ನೀಡಲಾಗಿಲ್ಲ. ಪಕ್ಷ ಈಗಲೂ ಸಹ ರಿಮೋಟ್ ಕಂಟ್ರೋಲ್‌ನಿಂದಲೇ ನಡೆಯುತ್ತಿದೆ. ಬಹುಶಃ ರಿಮೋಟ್ ರಾಹುಲ್ ಗಾಂಧಿ ಕೈಯಲ್ಲಿರಬಹುದು ಎಂದು ಅವರು ಹೇಳಿದರು.
‘ನಾನು ಕಾಂಗ್ರೆಸ್ ಪಕ್ಷದ (Congress Party) ಇತಿಹಾಸದ ಬಗ್ಗೆ ಹೆಚ್ಚು ಕೆದಕಲು ಹೋಗುವುದಿಲ್ಲ. ಇದನ್ನು ಹೆಚ್ಚು ಮಾಡಿದಷ್ಟು ಕಹಿ ಘಟನೆಗಳೇ ಕಾಣಿಸಿಕೊಳ್ಳುತ್ತವೆ. ಈಗ ನಾನು ಪಕ್ಷವನ್ನು ತೊರೆದಿದ್ದೇನೆ. ಹಾಗಾಗಿ ಇವುಗಳ ಬಗ್ಗೆ ಮಾತನಾಡುವುದಿಲ್ಲ. ನನಗೆ ನೆಹರೂ (Jawaharlal Nehru), ಇಂದಿರಾ ಗಾಂಧಿ (Indira Gandhi), ರಾಜೀವ್ (Rajiv Gandhi) ಹಾಗೂ ಸೋನಿಯಾ ಗಾಂಧಿ (Sonia Gandhi) ಬಗ್ಗೆ ಗೌರವವಿದೆ. ಆದರೆ ರಾಹುಲ್ ಗಾಂಧಿ ಬಗ್ಗೆ ರಾಜಕೀಯ ಭಿನ್ನಾಭಿಪ್ರಾಯವಿದೆ ಎಂದು ಹೇಳಿದರು.
ಇದನ್ನು ಓದಿ: ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ: ಮತ್ತೆ ‘ಕೈ’ ಹೊಗಳಿದ Ghulam Nabi Azad..!
ಕಾಂಗ್ರೆಸ್ ಪಕ್ಷ ತನ್ನ ಪ್ರತಿನಿಧಿಗಳಿಂದ ಸಲಹೆಗಳನ್ನು ಕೇಳುತ್ತದೆ. ಆದರೆ ನಾವು ನೀಡುವ ಸಲಹೆಗಳನ್ನು ಅವರು ಸ್ವೀಕರಿಸುವುದಿಲ್ಲ. ಟೀಕೆಗಳನ್ನು ಅರಗಿಸುಕೊಳ್ಳುವ ಶಕ್ತಿ ಪಕ್ಷಕ್ಕೆ ಸ್ವಲ್ಪವೂ ಇಲ್ಲ. ಹಾಗಾಗಿಯೇ ನಾನು ಪಕ್ಷವನ್ನು ತೊರೆದೆ. ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕೇಳುಗರು. ಸಲಹೆಗಳನ್ನು ಸಂಪೂರ್ಣವಾಗಿ ಕೇಳುತ್ತಾರೆ. ಅಲ್ಲದೇ ಕಾಂಗ್ರೆಸ್‌ಗಿಂತ ಮೋದಿ ನನ್ನೊಂದಿಗೆ ಹೆಚ್ಚು ಉದಾರವಾಗಿದ್ದಾರೆ. ವಿಪಕ್ಷ ನಾಯಕನಾಗಿ ನಾನು ಅವರ ವಿರುದ್ಧ ಬಹಳಷ್ಟುಟೀಕೆ ಮಾಡಿದ್ದೇನೆ. ಆದರೂ ಸಹ ಅವುಗಳನ್ನು ಅವರು ಮರೆತಿದ್ದಾರೆ. ನಿಜಕ್ಕೂ ಒಬ್ಬ ಪ್ರೌಢ ಆಡಳಿತಗಾರ ಎಂದು ಅವರು ಹೇಳಿದರು.
ಇದನ್ನೂ ಓದಿ: 'ಪ್ರಧಾನಿ ಮೋದಿ ರಾಜಕೀಯ ಮುತ್ಸದ್ದಿ..' ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಬಹುಪರಾಕ್!