ಕೇಂದ್ರ ಕೃಷಿ ಕಾಯ್ದೆ ರದ್ದತಿಗೆ ಕಾಂಗ್ರೆಸ್‌ ಮಸೂದೆ!

By Suvarna NewsFirst Published Oct 3, 2020, 7:54 AM IST
Highlights

ಕೇಂದ್ರ ಕೃಷಿ ಕಾಯ್ದೆ ರದ್ದತಿಗೆ ಕಾಂಗ್ರೆಸ್‌ ಮಸೂದೆ| ಕಾಂಗ್ರೆಸ್‌ ಆಡಳಿತದ ರಾಜ್ಯಗಳಿಗೆ ಶೀಘ್ರದಲ್ಲೇ ರವಾನೆ| ಎನ್‌ಡಿಎಯೇತರ ರಾಜ್ಯಗಳಲ್ಲೂ ಅಂಗೀಕಾರ ಸಾಧ್ಯತೆ

ನವದೆಹಲಿ(ಅ.03): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಮಸೂದೆಗಳನ್ನು ನಿಮ್ಮ ನಿಮ್ಮ ರಾಜ್ಯಗಳಲ್ಲಿ ರದ್ದುಪಡಿಸಲು ವಿಶೇಷ ಕಾಯ್ದೆ ಜಾರಿಗೊಳಿಸಿ ಎಂದು ಕಾಂಗ್ರೆಸ್‌ ಆಳ್ವಿಕೆಯ ರಾಜ್ಯಗಳಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಲ ದಿನಗಳ ಹಿಂದೆ ಕರೆ ನೀಡಿದ ಬೆನ್ನಲ್ಲೇ ‘ಮಾದರಿ ಕಾಯ್ದೆ’ಯೊಂದನ್ನು ಕಾಂಗ್ರೆಸ್‌ ಪಕ್ಷ ಸಿದ್ಧಪಡಿಸಿದೆ.

‘ರೈತರ ಹಿತಾಸಕ್ತಿ ಹಾಗೂ ಕೃಷಿ ಉತ್ಪನ್ನಗಳ ರಕ್ಷಣೆ (ವಿಶೇಷ ಅವಕಾಶಗಳು) ಮಸೂದೆ’ ಹೆಸರಿನ ಈ ವಿಧೇಯಕವನ್ನು ಕಾನೂನು ತಜ್ಞ ಹಾಗೂ ಕಾಂಗ್ರೆಸ್‌ ಸಂಸದ ಅಭಿಷೇಕ್‌ ಸಿಂಘ್ವಿಯವರ ಅನುಮತಿ ಪಡೆದು ಕಾಂಗ್ರೆಸ್‌ ಪಕ್ಷದ ಆಳ್ವಿಕೆಯಿರುವ ಎಲ್ಲಾ ರಾಜ್ಯಗಳಿಗೆ ಶೀಘ್ರದಲ್ಲೇ ಕಳುಹಿಸಲಾಗುತ್ತದೆ.

ಈ ಮಸೂದೆಯು ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವ್ಯವಹಾರ (ಉತ್ತೇಜನ ಮತ್ತು ಪ್ರೋತ್ಸಾಹ) ಮಸೂದೆ-2020, ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳಿಗೆ ಸಂಬಂಧಿಸಿದಂತೆ ರೈತರ ಜೊತೆಗಿನ ಒಪ್ಪಂದ ಮಸೂದೆ-2020 ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆ-2020ನ್ನು ರಾಜ್ಯಗಳಲ್ಲಿ ನಿಷ್ಕಿ್ರಯಗೊಳಿಸಲಿದೆ.

ಹಿಂದೆ ಮನಮೋಹನ ಸಿಂಗ್‌ ಅವರ ಸರ್ಕಾರವಿದ್ದಾಗ ಜಾರಿಗೊಳಿಸಿದ್ದ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಬಿಜೆಪಿ ಆಳ್ವಿಕೆಯ ರಾಜ್ಯಗಳೆಲ್ಲ ತಮ್ಮದೇ ಕಾಯ್ದೆಯ ಮೂಲಕ ಇದೇ ರೀತಿ ನಿಷ್ಕಿ್ರಯಗೊಳಿಸಿದ್ದವು. ಈಗ ಕಾಂಗ್ರೆಸ್‌ ಪಕ್ಷ ಅದೇ ಮಾದರಿ ಅನುಸರಿಸಿದೆ. ಕೇಂದ್ರದ ಕಾಯ್ದೆಯನ್ನು ವಿರೋಧಿಸುತ್ತಿರುವ ಎನ್‌ಡಿಎಯೇತರ ಆಳ್ವಿಕೆಯ ರಾಜ್ಯ ಸರ್ಕಾರಗಳೂ ಈ ಕಾಯ್ದೆಯನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿರುವ ಕೃಷಿಯಂತಹ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾಯ್ದೆ ರೂಪಿಸಿದರೆ ಅದರ ಜಾರಿಯಿಂದ ತಪ್ಪಿಸಿಕೊಳ್ಳಲು ತಮ್ಮದೇ ಆದ ಕಾಯ್ದೆ ರೂಪಿಸುವುದಕ್ಕೆ ಸಂವಿಧಾನದ 254(2) ಕಲಂನಲ್ಲಿ ರಾಜ್ಯಗಳ ವಿಧಾನಮಂಡಲಕ್ಕೆ ಅಧಿಕಾರವಿದೆ.

ಅ.4ರಿಂದ ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಪಂಜಾಬ್‌ ಮತ್ತು ಹರ್ಯಾಣದಲ್ಲಿ ಟ್ರಾಕ್ಟರ್‌ ರಾರ‍ಯಲಿಗಳು ನಡೆಯಲಿದ್ದು, ಪಕ್ಷದ ನಾಯಕ ರಾಹುಲ್‌ ಗಾಂಧಿ ಅದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

click me!