ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್‌ ಪ್ರಣಾಳಿಕೆ ರೀತಿ ಇದೆ: ಪ್ರಧಾನಿ ಮೋದಿ

By Kannadaprabha NewsFirst Published Apr 7, 2024, 5:49 AM IST
Highlights

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ 25 ಗ್ಯಾರಂಟಿಗಳುಳ್ಳ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಹಾರನ್‌ಪುರ (ಉತ್ತರ ಪ್ರದೇಶ) (ಏ.07): ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ 25 ಗ್ಯಾರಂಟಿಗಳುಳ್ಳ ಪ್ರಣಾಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇದು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮುಸ್ಲಿಂ ಲೀಗ್‌ ಹೊಂದಿದ್ದ ಚಿಂತನೆಯನ್ನೇ ಪ್ರತಿಬಿಂಬಿಸುತ್ತದೆ. ಸಮಗ್ರ ಭಾರತದ ಪ್ರತಿಬಿಂಬವೇ ಅದರಲ್ಲಿಲ್ಲ’ ಎಂದು ಆರೋಪಿಸಿದ್ದಾರೆ. ಮುಸ್ಲಿಂ ಲೀಗ್‌ ಏನು ಮನಸ್ಥಿತಿ ಹೊಂದಿತ್ತು ಎಂದು ಪ್ರಧಾನಿ ವಿಸ್ತರಿಸಿ ಹೇಳುವ ಗೋಜಿಗೆ ಹೋಗದೇ ಇದ್ದರೂ, ಆಗಿನ ಮುಸ್ಲಿಂ ಲೀಗ್‌, ಹಿಂದೂಗಳಿಗೆ ಭಾರತ ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಪಾಕಿಸ್ತಾನ ರಚನೆಯ ಬೇಡಿಕೆ ಮುಂದಿಟ್ಟಿತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 

ಹೀಗಾಗಿ ಕಾಂಗ್ರೆಸ್‌ನ ಪ್ರಣಾಳಿಕೆ ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ರೀತಿಯಲ್ಲಿದೆ ಎಂದು ಮೋದಿ ಪರೋಕ್ಷವಾಗಿ ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ಬಿಜೆಪಿ ಚುನಾವಣಾ ರ್‍ಯಾಲಿಯಲ್ಲಿ ಶನಿವಾರ ಮಾತನಾಡಿದ ಮೋದಿ, ‘ಕಾಂಗ್ರೆಸ್ ನಿನ್ನೆ ಬಿಡುಗಡೆ ಮಾಡಿದ ಪ್ರಣಾಳಿಕೆಯು ಇಂದಿನ ಕಾಂಗ್ರೆಸ್ ಇಂದಿನ ಭಾರತದ ಭರವಸೆ ಮತ್ತು ಆಕಾಂಕ್ಷೆಗಳಿಂದ ಸಂಪೂರ್ಣವಾಗಿ ದೂರ ಇದೆ ಎಂದು ಸಾಬೀತಾಗಿದೆ. ಅದರ ಚಿಂತನೆಯು ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಮುಸ್ಲಿಂ ಲೀಗ್‌ನಲ್ಲಿದ್ದ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಪ್ರತಿಫಲಿಸುತ್ತದೆ. ಇದರಲ್ಲಿ ಇಡೀ ದೇಶದ ಆಶೋತ್ತರ ಈಡೇರಿಸುವ ಅಂಶವಿಲ್ಲ. ಬದಲಾಗಿ ಎಡಪಂಥೀಯರ ಛಾಪು ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ’ ಎಂದು ಟೀಕಿಸಿದರು.

ಲೋಕಸಭೆಗೆ ಭರ್ಜರಿ ಪ್ರಚಾರ ಆರಂಭ: ಮೊಳಗಿದ ಕಾಂಗ್ರೆಸ್ ಪ್ರಜಾಧ್ವನಿ ರಣಕಹಳೆ

‘ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ದಶಕಗಳ ಹಿಂದೆಯೇ ಕೊನೆಗೊಂಡಿದೆ. ಇದು ಅಂದಿನ ಕಾಂಗ್ರೆಸ್ ಅಲ್ಲ. ಇಂದು ಕಾಂಗ್ರೆಸ್ ದೂರದಿಂದಲೂ ಗೋಚರಿಸುವುದಿಲ್ಲ. ಅಂದು ಕಾಂಗ್ರೆಸ್‌ನೊಂದಿಗೆ ಹಲವಾರು ಮಹಾನ್ ವ್ಯಕ್ತಿಗಳು ಸಂಬಂಧ ಹೊಂದಿದ್ದರು. ಮಹಾತ್ಮಾ ಗಾಂಧಿಯವರ ಹೆಸರು ಕಾಂಗ್ರೆಸ್‌ನೊಂದಿಗೆ ಸೇರಿಕೊಂಡಿತ್ತು. ಇಂದು ಉಳಿದಿರುವ ಕಾಂಗ್ರೆಸ್‌ಗೆ ರಾಷ್ಟ್ರದ ಹಿತಾಸಕ್ತಿಯ ನೀತಿಗಳಿಲ್ಲ ಅಥವಾ ರಾಷ್ಟ್ರದ ಅಭಿವೃದ್ಧಿಯ ದೂರದೃಷ್ಟಿ ಇಲ್ಲ’ ಎಂದು ಪ್ರಧಾನಿ ಕುಟುಕಿದರು,‘ಆದರೆ, ಬಿಜೆಪಿ ಸರ್ಕಾರ ಇದಕ್ಕೆ ತದ್ವಿರುದ್ಧ. ಬಿಜೆಪಿ ಯಾವುದೇ ತಾರತಮ್ಯವಿಲ್ಲದೆ ಕೆಲಸ ಮಾಡುತ್ತದೆ. ಸರ್ಕಾರದ ಯೋಜನೆಗಳು ಪ್ರತಿಯೊಂದು ವರ್ಗ, ಪ್ರತಿ ಜಾತಿ ಮತ್ತು ಎಲ್ಲರಿಗೂ ತಲುಪಬೇಕು ಎಂಬುದು ನಮ್ಮ ಚಿಂತನೆಯಾಗಿದೆ‘ ಎಂದು ಪ್ರಧಾನಿ ಹೇಳಿಕೊಂಡರು.

ಸಮಾಜವಾದಿ ಪಾರ್ಟಿಗೆ ಟಾಂಗ್: ಇದೇ ವೇಳೆ ಇಂಡಿಯಾ ಕೂಟದ ಸದಸ್ಯ ಪಕ್ಷ ಸಮಾಜವಾದಿ ಪಕ್ಷದ (ಎಸ್‌ಪಿ) ವಿರುದ್ಧವೂ ಪ್ರಧಾನಿ ಮೋದಿ ವ್ಯಂಗ್ಯವಾಡಿ, ‘ಉತ್ತರ ಪ್ರದೇಶದಲ್ಲಿ ಎಸ್‌ಪಿ ಪರಿಸ್ಥಿತಿ ಹೇಗಿದೆ ಎಂದರೆ ಇಲ್ಲಿ ಅವರು ಪ್ರತಿ ಗಂಟೆಗೆ ತಮ್ಮ ಅಭ್ಯರ್ಥಿಗಳನ್ನು ಬದಲಾಯಿಸಬೇಕಾಗಿದೆ, ಆದರೆ ಕಾಂಗ್ರೆಸ್‌ನ ಪರಿಸ್ಥಿತಿ ಇನ್ನೂ ವಿಚಿತ್ರವಾಗಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ’ ಎಂದು ಕುಟುಕಿದರು.‘ಕಾಂಗ್ರೆಸ್ ತನ್ನ ಭದ್ರಕೋಟೆ ಎಂದು ಪರಿಗಣಿಸಿದ ಸ್ಥಾನಗಳಲ್ಲಿಯೂ, ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯವನ್ನು ಪ್ರದರ್ಶಿಸುತ್ತಿಲ್ಲ’ ಅವರು ಕಾಂಗ್ರೆಸ್ ಭದ್ರಕೋಟೆಗಳಾದ ಅಮೇಠಿ ಮತ್ತು ರಾಯ್ ಬರೇಲಿಯನ್ನು ಪರೋಕ್ಷವಾಗಿ ಉಲ್ಲೇಖಿಸಿದರು.‘ಅಸ್ಥಿರತೆ ಮತ್ತು ಅನಿಶ್ಚಿತತೆಗೆ ಇಂಡಿಯಾ ಮೈತ್ರಿಕೂಟ ಮತ್ತೊಂದು ಹೆಸರಾಗಿದೆ. ಅದಕ್ಕಾಗಿಯೇ ಇಂದು ದೇಶವು ಅವರು ಹೇಳಿದ ಒಂದೇ ಒಂದು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ’ ಎಂದು ಆಪಾದಿಸಿದರು.

ಚೀನಾ ಭಾರತ ಪ್ರವೇಶಿಸಿದಾಗ ಅಫೀಮು ತಿಂದು ಮೋದಿ ನಿದ್ದೆ: ಮಲ್ಲಿಕಾರ್ಜುನ ಖರ್ಗೆ ಲೇವಡಿ

ದೋ ಲಡ್ಕೆ ಫ್ಲಾಪ್‌- ಅಖಿಲೇಶ್‌, ರಾಹುಲ್‌ಗೆ ಟಾಂಗ್‌: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಹೆಸರನ್ನು ತೆಗೆದುಕೊಳ್ಳದೆ ಪ್ರಧಾನಿ ಮೋದಿ ಟಾಂಗ್‌ ನೀಡಿಮ, ‘ಉತ್ತರ ಪ್ರದೇಶದಲ್ಲಿ ಇಬ್ಬರು ಹುಡುಗರನ್ನು ಒಳಗೊಂಡ ಚಿತ್ರ (‘ದೋ ಲಡ್ಕೆ’) ಕಳೆದ ಬಾರಿ ವಿಫಲವಾಗಿದ್ದು ನಿಮಗೆ ಇಲ್ಲಿ ನೆನಪಿರಬಹುದು. ಈಗ ಇಬ್ಬರು ಹುಡುಗರ ಚಿತ್ರವನ್ನು ಇವರೇ ಮರು ಬಿಡುಗಡೆ ಮಾಡಿದ್ದಾರೆ. ಇವರು ಮರದ ಮಡಕೆಯನ್ನು ಎಷ್ಟು ಸಲ ಬೆಂಕಿಗೆ ಹಾಕುತ್ತಾರೆ’ ಎಂದು ಕುಟುಕಿದರು.

click me!