ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸುವ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆಗೆ ಸ್ಪರ್ಧಿಸಲಿ ಎಂದು ಬಿಜೆಪಿ ಸವಾಲು ಹಾಕಿದೆ. ಕಾಂಗ್ರೆಸ್‌ನ ಇವಿಎಂ ತಿರುಚುವಿಕೆ ಆರೋಪವನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ನವದೆಹಲಿ: ಇವಿಎಂ ಬಗ್ಗೆ ಪದೇ ಪದೇ ಸಂಶಯ ಪಡುವ ಕಾಂಗ್ರೆ ಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಚುನಾಯಿತ ಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಬ್ಯಾಲೆಟ್ ಪೇಪರ್ ಮರಳಿ ಬಂದ ಬಳಿಕವೇ ಅವರು ಚುನಾವಣೆಗೆ ಸ್ಪರ್ಧಿಸುವ ಕುರಿತು ಘೋಷಣೆ ಮಾಡಲಿ ಎಂದು ಬಿಜೆಪಿ ಸವಾಲು ಹಾಕಿದೆ. ಇವಿಎಂ ತಿರುಚುವಿಕೆ ಬಗ್ಗೆ ಪದೇ ಪದೇ ಮಾತನಾಡುವ ಕಾಂಗ್ರೆಸಿಗರಿಗೆ ಬಿಜೆಪಿ ವಕ್ತಾರ ಗೌರವ್ ಭಾಟಿಯಾ ತಿರುಗೇಟು ನೀಡಿದ್ದು, ರಾಹುಲ್, ಪ್ರಿಯಾಂಕಾ ಗಾಂಧಿ ಅದೇ ಇವಿಎಂ ಬಳಸಿ ಆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಈ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಲಿ. ಇಂತಹ ನಿಲುವುಗಳು ಅವರು ಪ್ರಸ್ತಾಪಿಸುತ್ತಿರುವ ವಿಷಯದ ಬಗ್ಗೆ ಅವರ ನಂಬಿಕೆಯನ್ನು ಒತ್ತಿ ಹೇಳುತ್ತದೆ. ಅವರ ಮಾತುಗಳು ಖಾಲಿ ಆರೋಪವಲ್ಲದೇ ಬೇರೇನೂ ಅಲ್ಲ. ಕಾಂಗ್ರೆಸ್ ಶೀಘ್ರದಲ್ಲೇ ಇತಿಹಾಸದ ಪುಟಕ್ಕೆ ಸೀಮಿತವಾಗಲಿದೆ ಎಂದರು.
ಕೈ ಆರೋಪ ತಿರಸ್ಕರಿಸಿದ ಆಯೋಗ
undefined
ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅತ್ಯಂತ ಗಂಭೀರ ಸ್ವರೂಪದ ಅಸಮಂಜಸ ಸಂಗತಿಗಳು ಪತ್ತೆಯಾಗಿವೆ. ಶೇಕಡಾವಾರು ಮತದಾನದ ಪ್ರಮಾಣ ಭಾರಿ ಜಿಗಿತ ಕಂಡಿದೆ ಎಂದು ಕಾಂಗ್ರೆಸ್ ಮಾಡಿದ್ದ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಇದೇ ವೇಳೆ, ಖುದ್ದಾಗಿ ವಿಚಾರಣೆ ಆಲಿಸಲು ಸಮಯಾವಕಾಶ ನೀಡಿದರೆ ತನ್ನ ಆರೋಪಕ್ಕೆ ಸೂಕ್ತ ದಾಖಲೆ ಸಲ್ಲಿಸುವುದಾಗಿ ಕಾಂಗ್ರೆಸ್ ಹೇಳಿದ್ದ ಹಿನ್ನೆಲೆಯಲ್ಲಿ ಡಿ.3ರ ಸಂಜೆ 5ಕ್ಕೆ ವಿಚಾರಣೆಗೆ ಬರುವಂತೆ ನಿರ್ದೇಶನ ನೀಡಿದೆ.ಸಂಜೆ 5ರ ನಂತರ ಶೇಕಡಾವಾರು ಮತದಾನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದೆ ಎಂಬ ಆರೋಪವನ್ನು ಅಲ್ಲಗಳೆದಿರುವ ಆಯೋಗ, ಮತದಾನ ಪ್ರಮಾಣದ ವಿವರ ನೀಡುವ ಆ್ಯಪ್‌ನಲ್ಲಿ ಮತದಾನ ಪ್ರಮಾಣವನ್ನು ನಿರಂತರವಾಗಿ ಅಪ್ ಲೋಡ್ ಮಾಡಲಾಗಿದೆ ಎಂದು ತಿಳಿಸಿದೆ.
ಡಿ.3ರಂದು ಸಂಜೆ 5ಕ್ಕೆ ಕಾಂಗ್ರೆಸ್‌ನಿಂದ ವಿವರ ಆಲಿಸಿ, ಚುನಾವಣಾ ಆಯೋಗವು ಪಕ್ಷ ಎತ್ತಿರುವ ವಿಷಯಗಳಿಗೆ ಸೂಕ್ತವಾದ ಸಮಯದಲ್ಲಿ ಸುದೀರ್ಘ ಉತ್ತರ ನೀಡಲಿದೆ ಎಂದು ತಿಳಿಸಿದೆ. ಸಂಜೆ 5ಕ್ಕೆ ಶೇ.58ರಷ್ಟಿದ್ದ ಮತದಾನ ಪ್ರಮಾಣ ರಾತ್ರಿ 11ರ ವೇಳೆಗೆ ಶೇ.65ಕ್ಕೇರಿಕೆಯಾಗಿತ್ತು, ವಿಧಾನಸಭೆ ಕ್ಷೇತ್ರಗಳಲ್ಲಿ ಶ್ವೇಚ್ಛಾಚಾರವಾಗಿ ಮತದಾರರ ಹೆಸರನ್ನು ಕೈಬಿಟ್ಟು 10 ಸಾವಿರ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿತ್ತು, ಮತದಾರರ ಸಂಖ್ಯೆ 50 ಸಾವಿರದಷ್ಟು ಹೆಚ್ಚಾದ ಕ್ಷೇತ್ರಗಳಲ್ಲಿ ಬಿಜೆಪಿ ಕೂಟ 47ರಲ್ಲಿ ಗೆಲುವು ಸಾಧಿಸಿತ್ತು ಎಂದು ಕಾಂಗ್ರೆಸ್ ಶುಕ್ರವಾರವಷ್ಟೇ ಆಯೋಗಕ್ಕೆ ದೂರು ಸಲ್ಲಿಸಿತ್ತು.