ರಾಜ್ಯಸಭೆಗೆ ಕಾಂಗ್ರೆಸ್ಸಿಗ ಖರ್ಗೆ ವಿಪಕ್ಷ ನಾಯಕ| ಸೋನಿಯಾ ಶಿಫಾರಸಿಗೆ ಸಭಾಪತಿ ಅನುಮೋದನೆ| 2 ಸದನದ ವಿಪಕ್ಷ ನಾಯಕರಾದ ಮೊದಲ ಕನ್ನಡಿಗ
ನವದೆಹಲಿ(ಫೆ.17): ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ ಕರ್ನಾಟಕದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ನೇಮಕ ಮಂಗಳವಾರ ಅಧಿಕೃತವಾಗಿದೆ. ಖರ್ಗೆ ಅವರ ಹೆಸರು ಶಿಫಾರಸು ಮಾಡಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಳಿಸಿದ ಪತ್ರಕ್ಕೆ ಉಪರಾಷ್ಟ್ರಪತಿಯೂ ಆದ ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅನುಮೋದನೆ ನೀಡಿದ್ದಾರೆ.
ಮೈಸೂರಿನ ಎಂ.ಎಸ್. ಗುರುಪಾದಸ್ವಾಮಿ ನಂತರ ರಾಜ್ಯಸಭೆ ಪ್ರತಿಪಕ್ಷ ನಾಯಕ ಹುದ್ದೆಗೇರುತ್ತಿರುವ ಎರಡನೇ ಕನ್ನಡಿಗ ಖರ್ಗೆ ಅವರಾಗಿದ್ದಾರೆ. ಅಲ್ಲದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕತ್ವ ನಿರ್ವಹಿಸಿದ ಮೊದಲ ಕನ್ನಡಿಗ ಎಂಬ ಹಿರಿಮೆಗೆ ಖರ್ಗೆ ಅವರು ಭಾಜನರಾಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಗೆ ಬೆದರಿಕೆ ಕರೆ: ಫೋನ್ ಎಲ್ಲಿಂದ ಬಂತು ಎನ್ನುವುದು ಪತ್ತೆ..
ಈವರೆಗೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ವಿಪಕ್ಷ ನಾಯಕರಾಗಿದ್ದರು. ಅವರ ಸದಸ್ಯತ್ವ ಅವಧಿ ಫೆಬ್ರವರಿ 15ರಂದು ಮುಕ್ತಾಯವಾಗಿತ್ತು. ಅವರ ಸ್ಥಾನವನ್ನು ಖರ್ಗೆ ಅಲಂಕರಿಸಲಿದ್ದಾರೆ. 2020ರ ಜೂನ್‌ನಲ್ಲಿ ಖರ್ಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದು, 2026ರವರೆಗೆ ಅವಧಿ ಹೊಂದಿದ್ದಾರೆ. 36 ಸದಸ್ಯ ಬಲವನ್ನು ಕಾಂಗ್ರೆಸ್ ಪಕ್ಷ ರಾಜ್ಯಸಭೆಯಲ್ಲಿ ಹೊಂದಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿದ್ದರು. 2014ರಿಂದ 2019ರವರೆಗೆ ಲೋಕಸಭೆಯಲ್ಲಿ ಅವರು ಲೋಕಸಭೆಯ ಕಾಂಗ್ರೆಸ್ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದರು. 2009ರಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾಗಿದ್ದ ಅವರು, 2014ರವರೆಗೆ ಕಾರ್ಮಿಕ, ರೈಲ್ವೆ ಮಂತ್ರಿಯಾಗಿದ್ದರು.