
ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ 30 ವರ್ಷದ ಹಳೆಯ ಫೋಟೋವನ್ನು ಕಾಂಗ್ರೆಸ್ ನಾಯಕಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊದಲ ಬಾರಿಗೆ ಶಾಸಕಿಯಾಗಿರುವ ರೇಖಾ ಗುಪ್ತಾ ದೆಹಲಿಯ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬುಧವಾರ ರೇಖಾ ಗುಪ್ತಾ ದೆಹಲಿಯ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಅಧಿಕೃತ ಘೋಷಣೆ ಮಾಡಿತ್ತು. ರೇಖಾ ಅವರ ಹೆಸರು ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕಿಯಾಗಿರುವ ಅಲ್ಕಾ ಲಂಬಾ ತಮ್ಮ ಎಕ್ಸ್ ಖಾತೆಯಲ್ಲಿ 30 ವರ್ಷದಷ್ಟು ಹಳೆಯದಾದ ಫೋಟೋ ಹಂಚಿಕೊಂಡು ಶುಭಾಶಯಗಳನ್ನು ತಿಳಿಸಿದ್ದಾರೆ.
ಯಾವುದು ಈ ಫೋಟೋ?
1995 ರ ಈ ಫೋಟೋದಲ್ಲಿ, ಅಲ್ಕಾ ಲಂಬಾ ಮತ್ತು ರೇಖಾ ಗುಪ್ತಾ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನಂತರ NSUI ನ ಅಲ್ಕಾ ಲಂಬಾ ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದರು ಮತ್ತು ABVP ಯ ರೇಖಾ ಗುಪ್ತಾ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಗೆದ್ದಿದ್ದರು. ಕಾಂಗ್ರೆಸ್ ನಾಯಕಿಯಾಗಿರುವ ಅಲ್ಕಾ ಲಂಬಾ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆಯಾಗಿದ್ದರು. ಹಾಗಾಗಿ ಕಳೆದ 30 ವರ್ಷಗಳಿಂದಲೂ ರೇಖಾ ಗುಪ್ತಾ ಮತ್ತು ಅಲ್ಕಾ ಲಂಬಾ ಪರಿಚಿತರಾಗಿದ್ದಾರೆ.
ದೆಹಲಿಯ ಮುಖ್ಯಮಂತ್ರಿ ಹುದ್ದೆಗೆ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾದ ರೇಖಾ ಗುಪ್ತಾ ಅವರನ್ನು ಬಿಜೆಪಿ ಬುಧವಾರ ಹೆಸರಿಸಿದೆ. ರೇಖಾ ಗುಪ್ತಾ ದೆಹಲಿಯ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ಇದೀಗ ಅಲ್ಕಾ ಲಂಬಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಪೋಸ್ಟ್ ವೈರಲ್ ಆಗುತ್ತಿದೆ.
ಅಲ್ಕಾ ಲಂಬಾ ಪೋಸ್ಟ್
ಇದು 1995 ರಲ್ಲಿ - ರೇಖಾ ಗುಪ್ತಾ ಮತ್ತು ನಾನು ಒಟ್ಟಿಗೆ ಪ್ರಮಾಣ ವಚನ ಸ್ವೀಕರಿಸಿದ ಸ್ಮರಣೀಯ ಚಿತ್ರ. ನಾನು NSUI ನಿಂದ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ (DUSU) ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದೆ. ರೇಖಾ ಅವರು ABVP ಯಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಗೆದ್ದಿದ್ದರು. ರೇಖಾ ಗುಪ್ತಾ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಅಲ್ಕಾ ಲಂಬಾ ಬರೆದುಕೊಂಡಿದ್ದಾರೆ. ಮುಂದುವರಿದು ದೆಹಲಿ ತನ್ನ ನಾಲ್ಕನೇ ಮಹಿಳಾ ಮುಖ್ಯಮಂತ್ರಿಯನ್ನು ಪಡೆದಿದ್ದಕ್ಕಾಗಿ ಅಭಿನಂದನೆಗಳು ಮತ್ತು ನಾವು ದೆಹಲಿಯ ಜನರು ತಾಯಿ ಯಮುನಾ ಸ್ವಚ್ಛವಾಗಿರಲಿ ಮತ್ತು ಹೆಣ್ಣುಮಕ್ಕಳು ಸುರಕ್ಷಿತವಾಗಿರಲಿ ಎಂದು ಆಶಿಸುತ್ತೇವೆ ಎಂದು ಅಲ್ಕಾ ಲಂಬಾ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿಯ ಅದೃಷ್ಟರೇಖೆ, ರೇಖಾ ಗುಪ್ತಾ ಅವರ ವಿದ್ಯಾಭ್ಯಾಸ, ನೆಟ್‌ವರ್ತ್ ಎಷ್ಟು?
ಇದು ಪವಾಡ ಎಂದ ರೇಖಾ ಪತಿ
ಪತ್ನಿ ರೇಖಾ ಗುಪ್ತಾ ಹೆಸರು ದೆಹಲಿ ಸಿಎಂ ಸ್ಥಾನಕ್ಕೆ ಅಧಿಕೃತವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಮನೀಶ್ ಗುಪ್ತಾ, ಇದೊಂದು ಪವಾಡ ಎಂದಿದ್ದಾರೆ. ಪತ್ನಿ ರೇಖಾ ಗುಪ್ತಾ ಅವರು ಮೊದಲ ಬಾರಿ ಶಾಸಕಿಯಾಗಿರೋದಕ್ಕೆ ನಮಗೆ ತುಂಬಾನೇ ಸಂತೋಷವಾಗಿತ್ತು. ರೇಖಾ ಅವರು ದೆಹಲಿಯ ಮುಖ್ಯಮಂತ್ರಿಯಾಗುತ್ತಾರೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಇದು ಒಂದು ಪವಾಡದಂತೆ ಭಾಸವಾಗುತ್ತಿದೆ. ಪಕ್ಷವು ನಮಗೆ ಇಷ್ಟೊಂದು ಗೌರವವನ್ನು ನೀಡಿರುವುದು ನಮಗೆ ಸಂತೋಷದ ವಿಷಯ ಎಂದು ಮನೀಶ್ ಗುಪ್ತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ನೂತನ ಸಿಎಂ ಪ್ರಮಾಣವಚನ : ರಾಮಲೀಲಾ ಮೈದಾನದಲ್ಲಿ ಭಾರೀ ಭದ್ರತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ