ಹವಾಮಾನ ಬದಲಾವಣೆಯಿಂದಾಗಿ ಭವಿಷ್ಯದಲ್ಲಿ ವಾಸಿಸಲು ಯೋಗ್ಯವಲ್ಲದ ಸ್ಥಳಗಳಿಂದ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ಗೆ ಜನ ಸಾಮೂಹಿಕ ವಲಸೆ ಬರಬಹುದು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಪುಣೆ: ವರ್ಷದಿಂದ ವರ್ಷಕ್ಕೆ ವೇಗವಾಗಿ ಬದಲಾಗುತ್ತಿರುವ ಹವಾಮಾನ ಬದಲಾವಣೆಯನ್ನು ಸಮಯಕ್ಕೆ ತಕ್ಕಂತೆ ಎದುರಿಸಲು ವಿಫಲವಾದರೆ ತಾಪಮಾನ ಮತ್ತು ಹವಾಮಾನ ಬದಲಾವಣೆಯಿಂದಾಗಿ ಭವಿಷ್ಯದಲ್ಲಿ ವಾಸಿಸಲು ಯೋಗ್ಯವಲ್ಲದ ಸ್ಥಳಗಳಿಂದ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ಗೆ ಜನ ಸಾಮೂಹಿಕ ವಲಸೆ ಬರಲು ಕಾರಣವಾಗಬಹುದು ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಟೆಕ್ ದೈತ್ಯ ನಾರಾಯಣ ಮೂರ್ತಿ ಹೇಳಿದ್ದಾರೆ. ಭಾರತ ಹಾಗೂ ಕೆಲ ಆಫ್ರಿಕಾದ ದೇಶಗಳು ತೀವ್ರತರದ ತಾಪಮಾನ ಏರಿಕೆಗೆ ಗುರಿಯಾಗುತ್ತಿವೆ. ಹೀಗಾಗಿ ಮುಂದಿನ 20- 25 ವರ್ಷಗಳಲ್ಲಿ ಭಾರತದ ಕೆಲ ಸ್ಥಳಗಳು ವಾಸಿಸಲು ಯೋಗ್ಯವಲ್ಲದ ಸ್ಥಳವಾಗಿ ಬದಲಾಗಬಹುದು. ಹೀಗಾಗಿ ಈ ಸ್ಥಳಗಳಿಂದ ಜನ ಬೆಂಗಳೂರು, ಪುಣೆ, ಹೈದರಾಬಾದ್‌ನಂತಹ ಸ್ಥಳಗಳಿಗೆ ಸಾಮೂಹಿಕ ವಲಸೆ ಹೆಚ್ಚಾಗಬಹುದು ಎಂದು ನಾರಾಯಣಮೂರ್ತಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಟ್ರಾಫಿಕ್ ಹಾಗೂ ವಾಯು ಮಾಲಿನ್ಯದ ಸಮಸ್ಯೆಯಿಂದಾಗಿ ಬೆಂಗಳೂರು, ಪುಣೆ, ಹೈದರಾಬಾದ್‌ನ ಮುಂದಿನ ದಿನಗಳಲ್ಲಿ ವಾಸಿಸಲು ಬಹಳ ಕಷ್ಟವೆನಿಸುವ ಸ್ಥಳವಾಗಲಿದೆ ಎಂದು ನಾರಾಯಣಮೂರ್ತಿ ಹೇಳಿದ್ದಾರೆ. ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಈ ಅಭಿಪ್ರಾಯ ತಿಳಿಸಿದ್ದಾರೆ. ನಾವು ಭಾರತದಲ್ಲಿ, ವಿಶೇಷವಾಗಿ ಕಾರ್ಪೊರೇಟ್ ವಲಯ, ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳೊಂದಿಗೆ ಸಹಕರಿಸಬೇಕು ಮತ್ತು ಸಾಮೂಹಿಕ ವಲಸೆ ಇಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಅದು ಸವಾಲಿನ ವಿಚಾರ. ರಾಜಕಾರಣಿಗಳು ಮತ್ತು ಅಧಿಕಾರಶಾಹಿಗಳೊಂದಿಗೆ ಕಾರ್ಪೊರೇಟ್ ಜಗತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು. ಭಾರತೀಯರು ಎಲ್ಲವನ್ನೂ ಕೊನೆ ಗಳಿಗೆಯಲ್ಲಿ ಮಾಡುವ ಮನಸ್ಥಿತಿ ಹೊಂದಿದ್ದಾರೆ. ಆದರೆ 2030ರ ವೇಳೆಗೆ ದೇಶದ ಈ ಮನಸ್ಥಿತಿ ಬದಲಾಗಲಿದ್ದು ಗಮನಾರ್ಹ ಪ್ರಗತಿ ಕಂಡುಬರಲಿದೆ ಎಂದು ಅವರು ಹೇಳಿದ್ದಾರೆ.