‘ಚಳಿಗಾಲದಲ್ಲಿ ಈ ರೀತಿಯ ಹಿಮಕುಸಿತ ಕಂಡಿರಲಿಲ್ಲ’

By Kannadaprabha NewsFirst Published Feb 8, 2021, 7:55 AM IST
Highlights

‘ಚಳಿಗಾಲದಲ್ಲಿ ಈ ರೀತಿಯ ಹಿಮಕುಸಿತ ಕಂಡಿರಲಿಲ್ಲ’| ಘಟನೆಯಿಂದ ಪಾರಾದ ಪ್ರತ್ಯಕ್ಷದರ್ಶಿಗಳ ಅನುಭವ

ಡೆಹ್ರಾಡೂನ್‌(ಫೆ.08): ಸಾಮಾನ್ಯವಾಗಿ ಮಳೆಗಾಲದಲ್ಲಿ ಹಿಮಕುಸಿತ, ಪ್ರವಾಹದ ಸನ್ನಿವೇಶಗಳನ್ನು ನೋಡುತ್ತಿದ್ದೆವು. ಆದರೆ, ಚಳಿಗಾಲದಲ್ಲಿ ಏಕಾಏಕಿ ಹಿಮ ಕುಸಿದು ಪ್ರವಾಹ ಸೃಷ್ಟಿಯಾದ ಘಟನೆ ಹಿಂದೆಂದೂ ಕಂಡಿರಲಿಲ್ಲ. ಗುಡ್ಡಗಳಿಂದ ಹಿಮ ಕುಸಿಯುತ್ತಿರುವ ದೃಶ್ಯಗಳು ಕಂಡುಬಂದ ಕೂಡಲೇ ಪ್ರಾಣ ರಕ್ಷಣೆಗಾಗಿ ನಾವು ಓಡಲು ಆರಂಭಿಸಿದೆವು... ಇದು ಘಟನಾ ಸ್ಥಳದಿಂದ 5 ಕಿ.ಮೀ. ದೂರದಲ್ಲಿರುವ ರೇನಿ ಗ್ರಾಮದ ಪ್ರತ್ಯಕ್ಷದರ್ಶಿಗಳ ಅನುಭವ.

"

‘ಅದು ಶುಭ್ರವಾದ ಬಿಸಿಲಿನ ಭಾನುವಾರವಾಗಿತ್ತು. ಏಕಾಏಕಿ ಭಾರೀ ಶಬ್ದಗಳು ಮತ್ತು ಭೂಕಂಪದ ರೀತಿ ನೆಲ ಅಲುಗಿದ ಅನುಭವ ಆಯಿತು. ಕಿವಿ ಗಡಚಿಕ್ಕುವ ಶಬ್ದ ಕೇಳಿಬಂದ ಕಡೆಗೆ ನಾವು ದೌಡಾಯಿಸಿದೆವು. ಆದರೆ ಪರ್ವತಗಳಿಂದ ಹಿಮಗಡ್ಡೆಗಳು ಕರಗಿ ಇಳಿಜಾರಿನತ್ತ ಬರುತ್ತಿರುವುದನ್ನು ನೋಡಿದೆವು. ಗ್ರಾಮಸ್ಥರ ಜೊತೆಗೂಡಿ ಕೂಡಲೇ ಅಲ್ಲಿಂದ ಓಡಲು ಆರಂಭಿಸಿದೆವು’ ಎಂದು ಪ್ರತ್ಯಕ್ಷದರ್ಶಿ ಸಂದೀಪ್‌ ನೌತಿಯಾಲ್‌ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಮಳೆಗಾಲದಲ್ಲಿ ನಾವು ಇಂತಹ ದೃಶ್ಯಗಳನ್ನು ನೋಡುತ್ತಿದ್ದೆವು. ಆದರೆ, ಏಕಾಏಕಿ ಸಂಭವಿಸಿದ ಈ ಘಟನೆಯಿಂದ ಭಾರೀ ಆಘಾತವಾಗಿದೆ. ನಾವು ಭೀತಿಯಲ್ಲಿಯೇ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಇನ್ನೊಬ್ಬ ನಿವಾಸಿ ಶಂಕರ್‌ ರಾಣಾ ಎನ್ನುವವರು ಹೇಳಿದ್ದಾರೆ.

click me!