
ಜೈಪುರ (ಆ.22): ಸ್ಕೂಲ್ ಠೀಕ್ ಕರೋ ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದ ಜಿರಳೆ ಪಕ್ಷದ ತಂಡವನ್ನು ಸ್ಥಳೀಯರು ತಡೆದು, ಗ್ರಾಮದಿಂದ ಹೊರದಬ್ಬಿರುವ ಘಟನೆ ಜೈಪುರದ ರಾಮಪುರ ಕನ್ವರ್‌ಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ಬೆನ್ನಲ್ಲೇ, 48 ಗಂಟೆಗಳಲ್ಲಿ ಶಾಲೆ ದುರಸ್ತಿ ಆರಂಭಿಸದಿದ್ದರೆ ಹಾಗೂ ಬಿಜೆಪಿ ಗೂಂಡಾಗಳನ್ನು ಬಂಧಿಸದಿದ್ದರೆ ಧರಣಿ ಕೂರುತ್ತೇವೆ ಎಂದು ಸಿಜೆಪಿ ಸ್ಥಾಪಕ ಅಬಿಜೀತ್ ದೀಪ್ಕೆ ಎಚ್ಚರಿಸಿದ್ದಾರೆ.
ಶಾಲೆಯ ಮೂಲಸೌಕರ್ಯ, ಕಟ್ಟಡದ ಸ್ಥಿತಿಗತಿ ಪರಿಶೀಲಿಸಲು ಸಿಜೆಪಿ ನಿಯೋಗ ತೆರಳಿತ್ತು. ಆದರೆ, ಕಾರ್ಯಕರ್ತರು ಗ್ರಾಮಕ್ಕೆ ಆಗಮಿಸುವ ಮುನ್ನವೇ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿದ್ದ ಸ್ಥಳೀಯರು, ಬರುವ ವಾಹನಗಳನ್ನು ತಪಾಸಣೆ ನಡೆಸಿದರು. ಈ ವೇಳೆ ಸಿಜೆಪಿಗರು ಮತ್ತು ಸ್ಥಳೀಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು, ಅಂತಿಮವಾಗಿ ಕಾರ್ಯಕರ್ತರನ್ನು ಪ್ರದೇಶದಿಂದ ಹೊರದಬ್ಬಲಾಯಿತು. ಬಳಿಕ ಗ್ರಾಮಸ್ಥರು ಶಾಲೆಯ ಮುಂದೆ ಕುಳಿತು ಸಿಜೆಪಿ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು.
‘ಸರ್ಕಾರವು ಶಾಲೆಯ ದುರಸ್ತಿಗೆ ಈಗಾಗಲೇ ಅನುದಾನ ಮಂಜೂರು ಮಾಡಿದ್ದು, ಸ್ಥಳೀಯರ ಶ್ರಮದಿಂದಲೇ ಕಟ್ಟಡವನ್ನು ಸರಿಪಡಿಸಿಕೊಳ್ಳಲಾಗುವುದು. ಈ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪ ಅಗತ್ಯವಿಲ್ಲ’ ಎಂದು ಬಿಜೆಪಿ ಕಾರ್ಯಕರ್ತರ ಜೊತೆಗೂಡಿದ ಗ್ರಾಮಸ್ಥರು ತಿಳಿಸಿದ್ದಾರೆ. ಪ್ರಸ್ತುತ ಪಾಳುಬಿದ್ದಿರುವ ಈ ಶಾಲೆಗೆ ಬೀಗ ಹಾಕಲಾಗಿದ್ದು, ಪಕ್ಕದ ದನದ ಕೊಟ್ಟಿಗೆಯಲ್ಲಿ ತರಗತಿ ನಡೆಸಲಾಗುತ್ತಿದೆ.
ಘಟನೆ ಬೆನ್ನಲ್ಲೇ ದೀಪ್ಕೆ ವಿಡಿಯೋ ಸಂದೇಶ ನೀಡಿದ್ದು, ‘ಮುಂದಿನ 48 ಗಂಟೆಗಳ ಒಳಗೆ ಶಾಲೆಯ ದುರಸ್ತಿ ಕಾರ್ಯ ಪ್ರಾರಂಭವಾಗದಿದ್ದರೆ ಮತ್ತು ಬಿಜೆಪಿ ಗೂಂಡಾಗಳನ್ನು ಬಂಧಿಸದಿದ್ದರೆ, ನಾನು ಜೈಪುರಕ್ಕೆ ಹೋಗುತ್ತೇನೆ. ಧರಣಿ ಕೂರುತ್ತೇನೆ. ನಮ್ಮೊಂದಿಗೆ ಕೈಜೋಡಿಸಿ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ