
ನವದೆಹಲಿ (ಜು.25) ನೀಟ್ ಪೇಪರ್ ಲೀಕ್ ಪ್ರಕರಣ ಸಂಬಂಧ ನಡೆಯುತ್ತಿದ್ದ ಹೋರಾಟಕ್ಕೆ ಮಣಿದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ನಿರ್ಧಾರವನ್ನು ಕಾಕ್ರೋಚ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸ್ವಾಗತಿಸಿದ್ದಾರೆ. ವಿದ್ಯಾರ್ಥಿಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಇದು ಪ್ರಜಾಪ್ರಭುತ್ವ, ಇಲ್ಲಿ ಭಯಪಡುವ ಅಗತ್ಯವಿಲ್ಲ ಎಂದು ಅಭಿತಿತ್ ದೀಪ್ಕೆ ಹೇಳಿದ್ದಾರೆ.
ಸರ್ಕಾರದ ಮುಂದೆ ತಲೆಬಾಗುವ ಅಗತ್ಯವಿಲ್ಲ. ಧೈರ್ಯವಾಗಿ ಎದುರಿಸಿ ನಿಂತರೆ ನಮ್ಮ ಗುರಿ ಸಾಧಿಸಲು ಸಾಧ್ಯ. ಇದು ಪ್ರಜಾಪ್ರಭುತ್ವ, ಇಲ್ಲಿ ಯಾರಿಗೂ ತಲೆಬಾಗಬೇಕಿಲ್ಲ, ಯಾರಿಗೂ ಭಯಪಡಬೇಕಿಲ್ಲ. ಇದು ವಿದ್ಯಾರ್ಥಿಗಳ ಗೆಲುವು ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ತಮ್ಮ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲಿಸಿದ್ದಾರೆ. ಬಳಿಕ ಎಕ್ಸ್ ಮೂಲಕ ತಮ್ಮ ರಾಜೀನಾಮಗೆ ಕಾರಣಗಳನ್ನು ಹೇಳಿದ್ದಾರೆ. ಇದು ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ, ಇಲ್ಲಿ ಯುವ ಜನತೆಯ ಭವಿಷ್ಯ ಮುಖ್ಯ. ದೇಶದ ಯುವಶಕ್ತಿಯು ಗೊಂದಲದಲ್ಲಿ ಸಿಲುಕಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನ್ ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ಇದೇ ವೇಳೆ ಕಳೆದ 10 ದಿನಗಳ ಬೆಳವಣಿಗೆ ತಮಗೆ ತೀವ್ರ ನೋವು ತರಿಸಿದೆ ಎಂದಿದ್ದಾರೆ.ವಿದ್ಯಾರ್ಥಿಗಳ ತಮ್ಮ ಸಮಯವನ್ನು ಹೀಗೆ ಪ್ರತಿಭಟನೆಯಲ್ಲಿ ಮುಂದುವರಿಸಬಾರದು. ಅವರು ಕಾನೂನು ಸಂಕಷ್ಟದಲ್ಲಿ ಸಿಲುಕಬಾರದು, ಅವರ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಪ್ರಧಾನ್ ಹೇಳಿದ್ದಾರೆ.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಯಿಂದ ಕೇಂದ್ರ ಬಿಜೆಪಿಯಲ್ಲಿ ಚಟುವಟಿಕೆಗಳು ತೀವ್ರಗೊಂಡಿದೆ. ಒಂದೆಡೆ ಮೋದಿ ಕ್ಯಾಬಿನೆಟ್ ಪುನಾರಚನೆ ಅಥವಾ ವಿಸ್ತರಣೆ ಮಾತುಗಳು ಕೇಳಿಬಂದಿತ್ತು. ಆದರೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮುಂದೂಡಲಾಗಿತ್ತು. ಇದೀಗ ಪ್ರಧಾನ್ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಮೇಜರ್ ಸರ್ಜರಿಗಳು ನಡೆಯುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ