
ವಾಷಿಂಗ್ಟನ್ (ಜೂ.5): ಬೆಳೆಗಳಿಗೆ ಅಪಾಯಕಾರಿಯಾಗಿರುವ ಶಿಲೀಂಧ್ರ(ಫಂಗಸ್)ವನ್ನು ಅಕ್ರಮವಾಗಿ ಅಮೆರಿಕಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಚೀನಾ ಪ್ರಜೆಗಳನ್ನು ಬಂಧಿಸಲಾಗಿದೆ. ಇದು ದೇಶವೊಂದರ ಕೃಷಿಯನ್ನು ರೋಗಕಾರಕಗಳನ್ನು ಬಳಸಿ ನಾಶ ಮಾಡುವ ಸಂಚಿನಂತಿರುವ ಕಾರಣ ಇದನ್ನು ‘ಕೃಷಿ ಭಯೋತ್ಪಾದನೆ’ ಎಂದು ಪರಿಗಣಿಸಲಾಗುತ್ತಿದೆ.
ಯುಂಕಿಂಗ್ ಜಿಯಾನ್(33) ಮತ್ತು ಝುನ್ಯೊಂಗ್ ಲಿಯು(34), ಗೋಧಿ, ಬಾರ್ಲಿ, ಜೋಳ, ಭತ್ತದ ಬೆಳೆಗಳಿಗೆ ರೋಗ ಬರಿಸುವ ಫ್ಯುಸಾರಿಯಮ್ ಗ್ರ್ಯಾಮಿನೇರಮ್ ಹೆಸರಿನ ಫಂಗಸ್‌ಅನ್ನು ಅಮೆರಿಕಕ್ಕೆ ತರುತ್ತಿದ್ದರು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪಿತೂರಿ, ಕಳ್ಳಸಾಗಣೆ, ಸುಳ್ಳು ಹೇಳಿಕೆ ಮತ್ತು ವೀಸಾ ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಿಚಿಗನ್‌ನ ಪೂರ್ವ ಜಿಲ್ಲೆಯ ಸರ್ಕಾರಿ ವಕೀಲ ಜೆರೋಮ್ ಎಫ್. ಗೋರ್ಗನ್ ಮಾತನಾಡಿ, ‘ಈ ಪ್ರಕರಣದಲ್ಲಿ ಜಾಗತಿಕ ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವನ್ನುಂಟುಮಾಡುವ ಶಿಲೀಂಧ್ರವನ್ನು ಅಕ್ರಮವಾಗಿ ಅಮೆರಿಕಕ್ಕೆ ಸಾಗಿಸಲಾಗುತ್ತಿತ್ತು. ಇವುಗಳನ್ನು ವಿದೇಶಿಗರು ಅಮೇರಿಕನ್ ಸಂಶೋಧನಾ ಸಂಸ್ಥೆಗೆ ಸಾಗಿಸಲು ಯತ್ನಿಸಿದ್ದು ರಾಷ್ಟ್ರೀಯ ಭದ್ರತಾ ಕಾಳಜಿಯ ವಿಷಯ’ ಎಂದರು.
ಬಂಧಿತ ಜಿಯಾನ್, ಮಿಚಿಗನ್ ವಿಶ್ವವಿದ್ಯಾಲಯದ ಸಂಶೋಧನಾಲಯದ ಉದ್ಯೋಗಿಯಾಗಿದ್ದ ಹಾಗೂ ಚೀನಾ ಸರ್ಕಾರದಿಂದ ಸಂಶೋಧನೆಗೆ ನಿಧಿ ಪಡೆಯುತ್ತಿದ್ದ. ಆತನ ಪ್ರೇಯಸಿ ಲಿಯು ಚೀನಾದ ವಿವಿಯಲ್ಲಿ ಇಂತಹ ಸಂಶೋಧನೆಯಲ್ಲಿ ತೊಡಗಿದ್ದಳು ಎನ್ನಲಾಗಿದೆ. ಇದೀಗ ಇಬ್ಬರೂ ಪೊಲೀಸರ ವಶದಲ್ಲಿದ್ದು, ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ಭಾರತದ ಮೇಲೂ ನಡೆದಿತ್ತು ಕೃಷಿ ಭಯೋತ್ಪಾದನೆ2016ರಲ್ಲಿ ಪಶ್ಚಿಮ ಬಂಗಾಳದ ಗಡಿಯಲ್ಲಿ, ಬಾಂಗ್ಲಾದೇಶದಲ್ಲಿ ಕಂಡುಬಂದಿದ್ದ ಅಪಾಯಕಾರಿ ಶಿಲೀಂಧ್ರಗಳು ಪತ್ತೆಯಾಗಿದ್ದವು. ಆಗ ಆ ಪ್ರದೇಶದಲ್ಲಿ 3 ವರ್ಷ ಗೋಧಿ ಬೆಳೆಯದಂತೆ ಸರ್ಕಾರ ನಿರ್ಬಂಧ ವಿಧಿಸಿ ಅನಾಹುತವನ್ನು ತಡೆದಿತ್ತು. ಅಂತೆಯೇ, ಬಾಂಗ್ಲಾದೊಂದಿಗೆ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡ ಜಿಲ್ಲೆಗಳಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿ ಕೃಷಿಯನ್ನೇ ನಿಷೇಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ