India-Pakistan Conflict: ಭಾರತದ ದಾಳಿಗೆ 6 ಪಾಕ್ ಫೈಟರ್‌ಜೆಟ್‌ ಧ್ವಂಸ; ಚೀನಾ ನಿರ್ಮಿತ 30ಕ್ಕೂ ಹೆಚ್ಚು ಡ್ರೋನ್‌ಗಳು ಪುಡಿಪುಡಿ!

Kannadaprabha News   | Kannada Prabha
Published : Jun 05, 2025, 04:10 AM ISTUpdated : Jun 05, 2025, 11:04 AM IST
Operation Sindoor war room pics

ಸಾರಾಂಶ

ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ಪಾಕಿಸ್ತಾನಕ್ಕೆ ಭಾರೀ ಹಾನಿಯಾಗಿದೆ. 6 ಯುದ್ಧವಿಮಾನಗಳು, ಕಣ್ಗಾವಲು ವಿಮಾನಗಳು, ಡ್ರೋನ್‌ಗಳು ಮತ್ತು ಕ್ಷಿಪಣಿಗಳು ನಾಶವಾಗಿವೆ ಎಂದು ವರದಿಯಾಗಿದೆ.

ನವದೆಹಲಿ (ಜೂ.5): ಪಹಲ್ಗಾಂ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯು ಸೇನೆಗೆ ಭಾರೀ ಹಾನಿಯಾಗಿದೆ. ಪಾಕ್‌ ವಾಯುಸೇನೆಯ 6 ಯುದ್ಧವಿಮಾನಗಳು, ಎರಡು ಭಾರೀ ಮೌಲ್ಯದ ಕಣ್ಗಾವಲು/ರೇಡಾರ್‌ ವಿಮಾನಗಳು, 10ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಡ್ರೋನ್‌ಗಳು, ಸಿ-130 ಹರ್ಕ್ಯುಲೆಸ್‌ ಮಿಲಿಟರಿ ಸರಕು ಸಾಗಣೆ ವಿಮಾನ ಮತ್ತು 30ಕ್ಕೂ ಹೆಚ್ಚು ಕ್ಷಿಪಣಿಗಳು ನಾಶವಾಗಿವೆ ಎಂದು ಮೂಲಗಳು ತಿಳಿಸಿವೆ.

ಭಾರತವು ರಫೇಲ್‌ ಮತ್ತು ಎಸ್‌ಯು-30 ಯುದ್ಧವಿಮಾನಗಳ ಮೂಲಕ ಬ್ರಹ್ಮೋಸ್‌ ಕ್ಷಿಪಣಿಗಳನ್ನು ಬಳಸಿಕೊಂಡು ಪಾಕಿಸ್ತಾನದ ಮೇಲೆ ಭಾರೀ ವಾಯು ದಾಳಿ ನಡೆಸಿತ್ತು. ಇದರಿಂದ ಕಂಗಾಲಾದ ಪಾಕಿಸ್ತಾನದ ತರಾತುರಿಯಲ್ಲಿ ಕದನವಿರಾಮದ ಪ್ರಸ್ತಾಪವಿಟ್ಟಿತು.

ಒಟ್ಟಾರೆ 4 ದಿನಗಳ ಕಾಲ ನಡೆದ ಈ ಆಪರೇಷನ್ ಸಿಂದೂರ ಕಾರ್ಯಾಚರಣೆಯ ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನದ 6 ಯುದ್ಧವಿಮಾನಗಳನ್ನು ಭಾರತೀಯ ಯುದ್ಧವಿಮಾನಗಳಿಂದ ಹಾರಿಸಿದ ಕ್ಷಿಪಣಿಗಳೇ ಹೊಡೆದುರುಳಿಸಿವೆ. ಇನ್ನು ಎಲೆಕ್ಟ್ರಾನಿಕ್ ಯುದ್ಧಕ್ಕೆ ನೆರವಾಗಬಲ್ಲ ಅಥವಾ ವಾಯುದಾಳಿ ಕುರಿತು ಮುನ್ನೆಚ್ಚರಿಕೆ ನೀಡುವ ವಿಮಾನವೊಂದನ್ನು ಎಸ್‌-400 ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿ ಹೊಡೆದುರುಳಿಸಿದರೆ, ಸ್ಪೀಡನ್‌ ಮೂಲದ ಎಇಡಬ್ಲ್ಯುಆ್ಯಂಡ್‌ಸಿ ಕಣ್ಗಾವಲು ವಿಮಾನವನ್ನು ಭೋಲಾರಿ ಏರ್‌ಬೇಸ್‌ ಮೇಲಿನ ಕ್ಷಿಪಣಿ ದಾಳಿಯಲ್ಲಿ ನಾಶಪಡಿಸಲಾಗಿದೆ.

ಇನ್ನು ಯುದ್ಧದ ವೇಳೆ ಸರಕು ಸಾಗಣೆಗೆ ನೆರವಾಗುತ್ತಿದ್ದ ಸಿ-130 ಹರ್ಕ್ಯುಲೆಸ್‌ ಸರಕು ವಿಮಾನವನ್ನು ಪಂಜಾಬ್‌ ಪ್ರಾಂತ್ಯದ ಮುಲ್ತಾನ್‌ ಸಮೀಪದ ವಾಯುನೆಲೆ ಮೇಲಿನ ದಾಳಿಯಲ್ಲಿ ನಾಶವಾಗಿದೆ.

ಭಾರತದ ಕ್ಷಿಪಣಿ ದಾಳಿ ವೇಳೆ ಪಾಕಿಸ್ತಾನದ ಭೋಲಾರಿ ವಾಯುನೆಲೆಯಲ್ಲಿ ಹಲವು ಯುದ್ಧವಿಮಾನಗಳಿದ್ದವು ಎಂದು ಗುಪ್ತಚರ ಮೂಲಗಳು ಖಚಿತಪಡಿಸಿವೆ. ಆದರೆ ಅವುಗಳಲ್ಲಿ ಎಷ್ಟು ನಾಶವಾಗಿವೆ ಎಂಬ ಕುರಿತು ಪಾಕಿಸ್ತಾನ ಇನ್ನಷ್ಟೇ ಸ್ಪಷ್ಟಪಡಿಸಬೇಕಿದೆ ಎಂದು ಮೂಲಗಳು ಹೇಳಿವೆ.

ಚೀನಾ ನಿರ್ಮಿತ ಡ್ರೋನ್‌ಗಳು ಪುಡಿಪುಡಿ

ಯುದ್ಧವಿಮಾನಗಳು ಮಾತ್ರವಲ್ಲದೆ ಚೀನಾ ನಿರ್ಮಿತ ಹಲವು ವಿಂಗ್‌ ಲೂಂಗ್‌ ಡ್ರೋನ್‌ಗಳು, ಮಧ್ಯಮ ದೂರು ವ್ಯಾಪ್ತಿಯ ಹಲವು ಯುಎವಿಗಳೂ ಭಾರತದ ಕ್ಷಿಪಣಿ ದಾಳಿಗೆ ಪುಡಿಪುಡಿಯಾಗಿವೆ. ಒಟ್ಟಾರೆ ಭಾರತದ ವಾಯುದಾಳಿಯಿಂದ ಪಾಕಿಸ್ತಾನದ ವಾಯು ಹಾಗೂ ಭೂಸೇನೆಗೆ ಭಾರೀ ಹಾನಿಯಾಗಿದೆ. ಆದರೆ, ಪಾಕಿಸ್ತಾನ ಈ ಹಾನಿ ವಿವರವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗಿದೆ.

ಭಾರತದ ನಿಯೋಗ ನಿರ್ಬಂಧಕ್ಕೆ ಯತ್ನ, ಪಾಕ್‌ಗೆ ಮತ್ತೆ ಮುಖಭಂಗ:

ನವದೆಹಲಿ (ಜೂ.5): ಪಾಕಿಸ್ತಾನದ ಉಗ್ರಮುಖವನ್ನು ಬಯಲು ಮಾಡಲು ಮಲೇಷ್ಯಾಕ್ಕೆ ತೆರಳಿರುವ ಸರ್ವಪಕ್ಷ ನಿಯೋಗದ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪಾಕಿಸ್ತಾನ ರಾಯಭಾರ ಕಚೇರಿಯು ಮಲೇಷ್ಯಾಕ್ಕೆ ಒತ್ತಾಯಿಸಿತ್ತು. ಆದರೆ ಪಾಕ್‌ನ ಬೇಡಿಕೆಯನ್ನು ಮಲೇಷ್ಯಾ ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿದ್ದು, ಭಾರತದ ನಿಯೋಗಕ್ಕೆ ಸಂಪೂರ್ಣ ಸಹಕಾರ ನೀಡಿದೆ.ಈ ಮೂಲಕ ವಿದೇಶದಲ್ಲೂ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಯು ಸಂಸದ ಸಂಜಯ್ ಝಾ, ಬಿಜೆಪಿ ಸಂಸದರಾದ ಅಪರಾಜಿತಾ ಸಾರಂಗಿ, ಬ್ರಿಜ್ ಲಾಲ್, ಪ್ರದಾನ್ ಬರೂವಾ, ಹೇಮಾಂಗ ಜೋಶಿ, ಟಿಎಂಸಿ ಸಂಸದ ಅಭಿಷೇಕ ಬ್ಯಾನರ್ಜಿ, ಸಿಪಿಎಂನ ಜಾನ್ ಬ್ರಿಟ್ಟಾಸ್, ಕಾಂಗ್ರೆಸ್‌ನ ಸಲ್ಮಾನ್ ಖುರ್ಷಿದ್ ಹಾಗೂ ಮಾಜಿ ರಾಜತಾಂತ್ರಿಕ ಮೋಹನ್ ಕುಮಾರ್ ಅವರನ್ನೊಳಗೊಂಡ ನಿಯೋಗ ಮಲೇಷ್ಯಾಕ್ಕೆ ತೆರಳಿತ್ತು. ಪೂರ್ವನಿರ್ಧಾರದಂತೆ ಎಲ್ಲ ಸಭೆ, ಕಾರ್ಯಕ್ರಮಗಳು ನಡೆದಿದ್ದು, ಪಾಕ್‌ನ ಕುತಂತ್ರ ವಿಫಲವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ