
ನವದೆಹಲಿ(ಜ.01): ಭಾರತದ ಜೊತೆ ನಿರಂತರ ಸಂಘರ್ಷದಲ್ಲಿ ತೊಡಗಿರುವ ಚೀನಾ ಈಗ ಗಡಿಪಾರಿನಲ್ಲಿರುವ ಟಿಬೆಟಿಯನ್ ಸಂಸತ್ತು ಆಯೋಜಿಸಿದ್ದ ಔತಣದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಆರು ಸಂಸದರು ಭಾಗವಹಿಸಿದ್ದಕ್ಕೂ ತಕರಾರು ತೆಗೆದಿದೆ. ಸಂಸದರ ನಡೆಯನ್ನು ಆಕ್ಷೇಪಿಸಿ ಭಾರತದಲ್ಲಿರುವ ಚೀನಾ ದೂತಾವಾಸವು ನೇರವಾಗಿ ಸಂಸದರಿಗೆ ಪತ್ರ ಬರೆದಿದ್ದು, ಅದು ವಿವಾದಕ್ಕೆ ಕಾರಣವಾಗಿದೆ.
ಭಾರತದಲ್ಲಿರುವ ಟಿಬೆಟ್ ಸಂಸತ್ತು ಡಿ.22ರಂದು ದೆಹಲಿಯ ಹೋಟೆಲ್ ಒಂದರಲ್ಲಿ ಔತಣ ಏರ್ಪಡಿಸಿತ್ತು. ಆಹ್ವಾನದ ಮೇರೆಗೆ ಆ ಔತಣದಲ್ಲಿ ಟಿಬೆಟ್‌ಗಾಗಿನ ಭಾರತೀಯ ಸರ್ವಪಕ್ಷ ಸಂಸದೀಯ ವೇದಿಕೆಯ ಆರು ಸಂಸದರು ಪಾಲ್ಗೊಂಡಿದ್ದರು. ಅವರಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಕರ್ನಾಟಕದ ಬಿಜೆಪಿ ರಾಜ್ಯಸಭೆ ಸದಸ್ಯ ಕೆ.ಸಿ.ರಾಮಮೂರ್ತಿ, ಸಂಸದೆ ಮನೇಕಾ ಗಾಂಧಿ, ಕಾಂಗ್ರೆಸ್ ಸಂಸದರಾದ ಜೈರಾಂ ರಮೇಶ್ ಹಾಗೂ ಮನೀಶ್ ತಿವಾರಿ ಮತ್ತು ಬಿಜೆಡಿ ಸಂಸದ ಸುಜೀತ್ ಕುಮಾರ್ ಪಾಲ್ಗೊಂಡಿದ್ದರು.
ಚೀನಾ ದೂತಾವಾಸದ ಆಕ್ಷೇಪ:
ಭಾರತದಲ್ಲಿರುವ ಟಿಬೆಟಿಯನ್ ಸಂಸತ್ತನ್ನು ಚೀನಾ ಸರ್ಕಾರ ಅಕ್ರಮ ಸಂಸ್ಥೆಯೆಂದು ಪರಿಗಣಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಚೀನಾ ದೂತಾವಾಸದ ರಾಜಕೀಯ ಕೌನ್ಸೆಲರ್ ಈ ಸಂಸದರಿಗೆ ನೇರವಾಗಿ ಪತ್ರ ಬರೆದಿದ್ದು, ನಿಮ್ಮ ನಡೆ ಕಳವಳಕಾರಿಯಾಗಿದೆ. ಟಿಬೆಟಿಯನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡುವುದರಿಂದ ದೂರವಿರಿ ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಚೀನಾ ಸರ್ಕಾರ ಭಾರತದ ಜೊತೆಗೆ ಅಧಿಕೃತವಾಗಿ ವ್ಯವಹರಿಸಬೇಕೆಂದರೆ ವಿದೇಶಾಂಗ ಇಲಾಖೆಯ ಜೊತೆ ವ್ಯವಹರಿಸಬೇಕು. ನಮಗೆ ನೇರವಾಗಿ ಪತ್ರ ಬರೆಯಲು ನಿಮಗೆಷ್ಟುಧೈರ್ಯ ಎಂದು ಬಿಜೆಡಿ ಸಂಸದ ಸುಜೀತ್ ಕುಮಾರ್ ಕಿಡಿಕಾರಿದ್ದಾರೆ.
ಆಹ್ವಾನ ಬಂದಿತ್ತು, ಹೋಗಿದ್ದೆ-ಆರ್‌ಸಿ:
ಈ ಕುರಿತು ಇಂಗ್ಲಿಷ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಸಚಿವ ರಾಜೀವ್ ಚಂದ್ರಶೇಖರ್, ‘ನಾನು ಬಿಜೆಪಿಯ ಹಿರಿಯ ನಾಯಕ ಶಾಂತಕುಮಾರ್ ಅವರು ಅಧ್ಯಕ್ಷರಾಗಿದ್ದಾಗಿನಿಂದಲೂ ಇಂಡೋ-ಟಿಬೆಟಿಯನ್ ಸಂಸದೀಯ ವೇದಿಕೆಯ ಸದಸ್ಯನಾಗಿದ್ದೇನೆ. ಹೀಗಾಗಿ ನನಗೆ ಔತಣಕ್ಕೆ ಆಹ್ವಾನ ಬಂದಿತ್ತು, ಹೋಗಿದ್ದೆ’ ಎಂದು ಹೇಳಿದ್ದಾರೆ.
ಚೀನಾ ದೂತಾವಾಸವು ಸಂಸದರಿಗೆ ನೇರವಾಗಿ ಪತ್ರ ಬರೆದಿದ್ದಕ್ಕೆ ಭಾರತ ಸರ್ಕಾರ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತ-ಚೀನಾ ನಡುವಿನ ಗಡಿ ವಿವಾದದ ಹಿನ್ನೆಲೆಯಲ್ಲಿ 2018ರಲ್ಲಿ ಟಿಬೆಟ್‌ನ ಗಡಿಪಾರು ಸಂಸತ್ತು ಆಯೋಜಿಸುವ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಡಿ ಎಂದು ವಿದೇಶಾಂಗ ಇಲಾಖೆಯು ಸಂಸದರು ಹಾಗೂ ಸಚಿವರಿಗೆ ಸೂಚಿಸಿತ್ತು ಎನ್ನಲಾಗಿದೆ. ಆನಂತರ ಭಾರತದ ಸಂಸದರು ಟಿಬೆಟ್‌ನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಚೀನಾದ ಪತ್ರದಲ್ಲೇನಿದೆ?
ಸೋಕಾಲ್ಡ್ ಟಿಬೆಟ್‌ಗಾಗಿನ ಭಾರತೀಯ ಸರ್ವಪಕ್ಷ ಸಂಸದೀಯ ವೇದಿಕೆಯಿಂದ ನೀವು ಸೋಕಾಲ್ಡ್ ಗಡಿಪಾರು ಸಂಸತ್ತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇನೆ. ನಿಮಗೆಲ್ಲ ಗೊತ್ತಿರುವಂತೆ ಸೋಕಾಲ್ಡ್ ‘ಗಡಿಪಾರು ಸಂಸತ್ತು’ ಪ್ರತ್ಯೇಕತಾವಾದಿ ರಾಜಕೀಯ ಗುಂಪಾಗಿದ್ದು, ಅಕ್ರಮ ಸಂಸ್ಥೆಯಾಗಿದೆ. ಅದನ್ನು ಯಾವ ದೇಶವೂ ಗುರುತಿಸಿಲ್ಲ. ಟಿಬೆಟ್ ಚೀನಾದ ಅವಿಭಾಜ್ಯ ಅಂಗವಾಗಿದ್ದು, ಅದಕ್ಕೆ ಸಂಬಂಧಿಸಿದ ವಿಚಾರಗಳು ಚೀನಾದ ಆಂತರಿಕ ವಿಚಾರಗಳಾಗಿವೆ. ಅದರಲ್ಲಿ ವಿದೇಶಿ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ. ಹಿರಿಯ ರಾಜಕಾರಣಿಗಳಾಗಿರುವ ನೀವು ಈ ವಿಚಾರದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡು ಟಿಬೆಟಿಯನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡುವುದರಿಂದ ದೂರವಿರುತ್ತೀರಿ ಎಂದು ನಿರೀಕ್ಷಿಸುತ್ತೇನೆ ಎಂದು ಝೌ ಯಾಂಗ್‌ಶೆಂಗ್, ಭಾರತದಲ್ಲಿರುವ ಚೀನಾ ದೂತಾವಾಸದ ರಾಜಕೀಯ ಕೌನ್ಸೆಲರ್ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ