
ಬೀಜಿಂಗ್ (ಮಾ.6): ತನ್ನ ಉತ್ಪನ್ನಗಳ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ‘ಬೆದರಿಕೆ, ಹೆದರಿಕೆ ನಮ್ಮ ಬಳಿ ನಡೆಯಲ್ಲ. ಅಮೆರಿಕವು ಯುದ್ಧವನ್ನು ಬಯಸಿದರೆ, ಅದು ತೆರಿಗೆ, ವ್ಯಾಪಾರ ಅಥವಾ ಇನ್ಯಾವುದೇ ಯುದ್ಧವಾದರೂ ನಾವು ಕೊನೆಯ ತನಕ ಹೋರಾಡಲು ಸಿದ್ಧ’ ಎಂದು ಅಮೆರಿಕಕ್ಕೆ ನೇರ ಪಂಥಾಹ್ವಾನ ನೀಡಿದೆ.
ಚೀನಾ ರಫ್ತು ಮಾಡುವ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ಹೇರುವ ಕುರಿತು ಟ್ರಂಪ್ ಘೋಷಣೆ ಬೆನ್ನಲ್ಲೇ ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, ‘ಫೆಂಟನಿಲ್ ಔಷಧ ವಿಷಯವು ಅಮೆರಿಕಕ್ಕೆ ಸುಂಕವನ್ನು ಹೆಚ್ಚಿಸಲು ಒಂದು ನೆಪವಷ್ಟೇ. ಅಮೆರಿಕದಲ್ಲಿ ಫೆಂಟನಿಲ್ ಬಿಕ್ಕಟ್ಟಿಗೆ ಅಮೆರಿಕವೇ ಹೊರತೂ ಬೇರಾರೂ ಕಾರಣರಲ್ಲ. ಆದರೆ ಅಮೆರಿಕವು ಚೀನಾದ ಮೇಲೆ ಆರೋಪ ಹೊರಿಸಲು ಯತ್ನಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮೊದಲು ಹಿಂದೂಗಳ ಮೇಲೆ ದಾಳಿ, ಈಗ ರಂಜಾನ್ ವೇಳೆ ತಮ್ಮದೇ ದರ್ಗಾ ಮೇಲೂ ದಾಳಿ!...
ಜೊತೆಗೆ, ‘ಸುಂಕ ಹೆಚ್ಚಳದ ಮೂಲಕ ಚೀನಾವನ್ನು ಮೇಲೆ ಬ್ಲ್ಯಾಕ್‌ಮೇಲ್ ಮಾಡುವ ಮತ್ತು ಒತ್ತಡ ಹೇರುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ ಬೆದರಿಕೆ ನಮ್ಮನ್ನು ಹೆದರಿಸುವುದಿಲ್ಲ. ಇದು ಚೀನಾದೊಂದಿಗೆ ಸರಿಯಾದ ರೀತಿಯಲ್ಲಿ ವ್ಯವಹರಿಸುವ ಮಾರ್ಗವಲ್ಲ. ಅಮೆರಿಕ ಬಯಸುವ ಯಾವುದೇ ಯುದ್ಧವಾದರೂ ಕೊನೆಯವರೆಗೆ ಹೋರಾಡಲು ಸಿದ್ಧ’ ಎಂದಿದ್ದಾರೆ.
ಚೀನಾವು ಅಮೆರಿಕದ ಉತ್ಪನ್ನಗಳಿಗೆ ಭಾರೀ ಪ್ರಮಾಣದ ತೆರಿಗೆ ಹೇರುತ್ತಿದೆ ಎಂದು ಆರೋಪಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ಹೇರುವ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ