ಚೀನಾ ಹೊಸವರ್ಷ ಹಿನ್ನೆಲೆ ಆ ದೇಶದಲ್ಲಿ ನಿತ್ಯ ಕೋವಿಡ್‌ಗೆ 36,000 ಜನರು ಮೃತಪಡುತ್ತಾರೆ ಎನ್ನಲಾಗಿದೆ. 1 ತಿಂಗಳ ಅವಧಿಯಲ್ಲಿ ಕೋಟ್ಯಂತರ ಜನರು ಸಂಚಾರ ಮಾಡುತ್ತಿದ್ದು, ಕೋವಿಡ್ ಸೋಂಕು ಭಾರಿ ಸ್ಫೋಟದ ತೀವ್ರ ಆತಂಕ ಎದುರಾಗಿದೆ.
ಬೀಜಿಂಗ್: ಚೀನಾದಲ್ಲಿ ಒಂದು ತಿಂಗಳು ಕಾಲ ನಡೆಯುವ ಹೊಸ ವರ್ಷಾಚರಣೆ ಜನವರಿ 21ರಿಂದ ಆರಂಭವಾಗಲಿದ್ದು, ದೇಶದಲ್ಲಿ ಮತ್ತೆ ಕೋವಿಡ್ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ. ನಿತ್ಯ ಗರಿಷ್ಠ 36,000 ಜನರು ಸಾಯಬಹುದು ಎಂದು ಅಧ್ಯಯನ ವರದಿಯೊಂದು ಎಚ್ಚರಿಕೆ ನೀಡಿದೆ. ಕೋವಿಡ್ ವಿಷಯದಲ್ಲಿ ಕಳೆದ 3 ವರ್ಷಗಳಿಂದ ಕಟ್ಟುನಿಟ್ಟಾಗಿ ಜಾರಿ ಮಾಡಿದ್ದ ನೀತಿಯನ್ನು ಚೀನಾ ಸರ್ಕಾರ ಪೂರ್ಣವಾಗಿ ಕೈಬಿಟ್ಟಿದೆ. ಅದರ ಬೆನ್ನಲ್ಲೇ ಒಂದು ತಿಂಗಳು ಕಾಲ ಚಾಂದ್ರಮಾನ ಹೊಸ ವರ್ಷಾಚರಣೆ ಸಂಭ್ರಮ ದೇಶಾದ್ಯಂತ ಮನೆ ಮಾಡಿದೆ. ನಗರ ಪ್ರದೇಶಗಳಿಗೆ ಉದ್ಯೋಗ ಅರಸಿ ಬರುವ ಕೋಟ್ಯಂತರ ಜನರು ಪ್ರತಿ ವರ್ಷ ಈ ಸಮಯದಲ್ಲಿ ತಮ್ಮ ಹುಟ್ಟೂರಿಗೆ ತೆರಳುತ್ತಿದ್ದಾರೆ. ಕೋವಿಡ್ ನೀತಿ ಸಡಿಲ ಮಾಡಿರುವ ಹಿನ್ನೆಲೆಯಲ್ಲಿ 3 ವರ್ಷಗಳಿಂದ ತಮ್ಮ ತವರಿಗೆ ತೆರಳದ ಕೋಟ್ಯಂತರ ಜನರು ಇದೀಗ ಹುಟ್ಟೂರಿನತ್ತ ಮುಖ ಮಾಡಿದ್ದಾರೆ. ಹೀಗಾಗಿ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 201 ಕೋಟಿ ಸಂಚಾರ ನಡೆಯಲಿದೆ ಎಂದು ಅಂದಾಜಿಸಲಾಗಿದೆ.
ಹೀಗಾಗಿ ಕೋವಿಡ್ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಅನುಸರಿಸಿದರೂ ಸೋಂಕು ನಿಯಂತ್ರಿಸಲಾಗದ ಚೀನಾಕ್ಕೆ, ಇದೀಗ ಕೋಟ್ಯಂತರ ಜನರ ಸಂಚಾರ ಹೊಸ ಆತಂಕ ಸೃಷ್ಟಿಮಾಡಿದೆ. ಸೋಂಕು ಮತ್ತು ಸಾವಿನ ವಿಷಯದಲ್ಲಿ 3 ವರ್ಷಗಳಿಂದಲೂ ರಹಸ್ಯ ಕಾಪಾಡಿಕೊಂಡಿದ್ದ ಚೀನಾ 3 ವರ್ಷಗಳಲ್ಲಿ ಕೇವಲ 1 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ ಮತ್ತು 5500 ಜನರು ಮೃತಪಟ್ಟಿದ್ದಾರೆ ಎಂದೇ ಮಾಹಿತಿ ನೀಡಿತ್ತು. ಆದರೆ ಜನವರಿ ಮೊದಲ ವಾರದಲ್ಲಿ ಆಸ್ಪತ್ರೆ ದಾಖಲಾದವರ ಪೈಕಿ 60,000 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮೊದಲ ಬಾರಿಗೆ ಒಪ್ಪಿಕೊಳ್ಳುವ ಮೂಲಕ ದೇಶದಲ್ಲಿ ಹೊಸದಾಗಿ ಹಬ್ಬಿರುವ ಕೋವಿಡ್ ಅಲೆಯ ಕುರಿತು ಸುಳಿವು ನೀಡಿತ್ತು.
undefined
ಇದನ್ನು ಓದಿ: 35 ದಿನದಲ್ಲಿ 60,000 ಸಾವು, ಈ ತಿಂಗಳಲ್ಲಿ ಬೀಜಿಂಗ್ ಸಂಪೂರ್ಣ ನಿವಾಸಿಗಳಿಗೆ ಕೋವಿಡ್ ಸೋಂಕು!
ಈ ನಡುವೆ ಲಂಡನ್ ಮೂಲದ ಏರ್ ಇನ್ಫಿನಿಟಿ ಎಂಬ ಸಂಸ್ಥೆಯೊಂದು ಪ್ರಸಕ್ತ ಹೊಸ ವರ್ಷಾಚರಣೆ ವೇಳೆ ಚೀನಾದಲ್ಲಿ ನಿತ್ಯ 36,000 ಜನರು ಮೃತಪಡುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಡಿಸೆಂಬರ್ 29ರಂದು ಒಂದೇ ದಿನ ದೇಶದಲ್ಲಿ 11,000 ಜನರು ಮೃತಪಟ್ಟಿದ್ದಾರೆ. ಇದು ಸೋಂಕು ಮತ್ತು ಸಾವಿನ ತೀವ್ರತೆಯನ್ನು ತೋರಿಸುತ್ತದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಚೀನಾಗೆ ಭಾರತದ ಕೋವಿಡ್ ಲಸಿಕೆ ಮಾರಾಟಕ್ಕೆ ಚಿಂತನೆ