
ನವದೆಹಲಿ: ಈಗಾಗಲೇ ಆಫ್ರಿಕಾದ ಜಿಬೋತಿಯಲ್ಲಿ ತನ್ನದೇ ಆದ ನೌಕಾನೆಲೆ ಪೂರ್ಣಗೊಳಿಸಿದ್ದಲ್ಲದೆ, ಶ್ರೀಲಂಕಾದಲ್ಲಿನ ಹಂಬನ್‌ತೋಟ (Hambantota port) ಬಂದರು ನಿರ್ಮಾಣಕ್ಕೂ ಸಾಥ್ ನೀಡಿ ಅಲ್ಲಿ ಪರೋಕ್ಷ ಅಧಿಪತ್ಯ ಸ್ಥಾಪಿಸಿರುವ ಚೀನಾ, ಈಗ ಭಾರತಕ್ಕೆ ತಲೆನೋವಾಗುವಂತ ಮತ್ತೊಂದು ಹೆಜ್ಜೆ ಇಟ್ಟಿದೆ. ಈವರೆಗೆ ತನ್ನಿಂದ ಅಂತರ ಕಾಯ್ದುಕೊಂಡಿದ್ದ ಕಾಂಬೋಡಿಯಾವನ್ನು ‘ಬುಟ್ಟಿಗೆ’ ಹಾಕಿಕೊಂಡಿರುವ ಚೀನಾ, ಕಾಂಬೋಡಿಯಾ ಸಮುದ್ರ ತೀರದಲ್ಲಿ ಬಂದರು ಸ್ಥಾಪಿಸುವ ಪ್ರಕ್ರಿಯೆ ಆರಂಭಿಸಿದೆ.
ಇದು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪಾರುಪತ್ಯ ಸ್ಥಾಪಿಸುವ ಕ್ಸಿ ಜಿನ್‌ಪಿಂಗ್ ಸರ್ಕಾರ (Xi Jinping government) ನಡೆಯಾಗಿದ್ದು, ಭಾರತ ಹಾಗೂ ಇತರ ಚೀನಾ ವಿರೋಧಿ ದೇಶಗಳಿಗೆ ಮುಂದಿನ ದಿನಗಳಲ್ಲಿ ಸವಾಲಾಗಬಹುದು. ಅಲ್ಲದೆ, ಜಾಗತಿಕ ಸಮುದ್ರ ವ್ಯಾಪಾರದ ಮೇಲೂ ಹತೋಟಿಗೆ ಚೀನಾ ನಡೆಸಿರುವ ಹುನ್ನಾರ ಇದಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಈವರೆಗೂ ಕಾಂಬೋಡಿಯಾ ತಟಸ್ಥ ದೇಶವಾಗಿತ್ತು. ಆದರೆ ಆರ್ಥಿಕ ಸಂಕಷ್ಟವು ಕಾಂಬೋಡಿಯಾಗೆ ಸವಾಲಾಗಿ ಪರಿಣಮಿಸುತ್ತಿದ್ದು, ಅನಿವಾರ್ಯವಾಗಿ ಚೀನಾದ ಸಹಾಯ ಹಸ್ತ ಚಾಚಿದೆ. ಈ ಸಂದರ್ಭ ಬಳಸಿಕೊಂಡಿರುವ ಚೀನಾ, ಅತ್ಯಂತ ಮಹತ್ವದ ಸಾಗರ ಪ್ರದೇಶವಾದ ಮಲಕ್ಕಾ (Malacca) ಜಲಸಂಧಿ ಸಮೀಪ ಇರುವ ಕಾಂಬೋಡಿಯಾದಲ್ಲಿ ಬಂದರು ನಿರ್ಮಾಣ ಆರಂಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಉಪಗ್ರಹ ಚಿತ್ರಗಳು ಲಭ್ಯವಾಗಿವೆ. ತೀರದಲ್ಲಿ ಕಟ್ಟಡಗಳು, ಬೇಲಿಗಳು ಹಾಗೂ ಇತರ ದೃಶ್ಯಗಳನ್ನು ಕಾಣಬಹುದು ಎಂದು ‘ಎನ್‌ಡಿಟೀವಿ’ ಆಂಗ್ಲ ಸುದ್ದಿವಾಹಿನಿ ವರದಿ ಮಾಡಿದೆ.
ಎಲೆಕ್ಟ್ರಾನಿಕ್ ವಾರ್‌ಗೆ ನಾಂದಿ ಹಾಡಿತಾ ಭಾರತದ ನಿರ್ಧಾರ ?: ಚೀನಾ ಲ್ಯಾಪ್ ಟಾಪ್ ಬೇಕಾ ? ತಗೊಳ್ಳಿ ಲೈಸೆನ್ಸ್ !
‘ಸದ್ಯ ಇದು ನಾಗರಿಕ ಬಂದರು ಎನ್ನಿಸಿಕೊಂಡರೂ ಮುಂದೆ ಇದನ್ನು ಚೀನಾ ಮುಂದೆ ಸೇನಾ ಉದ್ದೇಶಕ್ಕೆ ಬಳಸಿಕೊಳ್ಳಲೂಬಹುದು. ಕಾಂಬೋಡಿಯಾ ತನ್ನ ಸಾಗರೋತ್ತರ ಮಿಲಿಟರಿ ನೌಕಾನೆಲೆಯಾಗಿ ಪರಿವರ್ತಿಸಬಹುದು. ಈ ಸಂಬಂಧ ಕಾಂಬೋಡಿಯಾದೊಂದಿಗೆ ಚೀನಾ ಒಪ್ಪಂದ ಮಾಡಿಕೊಂಡಿದೆ’ ಎಂದು ಅಮೆರಿಕದ ‘ವಾಲ್‌ಸ್ಟ್ರೀಟ್ ಜರ್ನಲ್’ ಹೇಳಿದೆ.
ಭಾರತಕ್ಕೆ ಏಕೆ ಅಪಾಯ?:
ಸರಕು ಸಾಗಣೆಗೆ ಮಹತ್ವ ಪಡೆದಿರುವ ಮಲಕ್ಕಾ ಜಲಸಂಧಿ ಸಮೀಪವೇ ಕಾಂಬೋಡಿಯಾ ಬಂದರು ಇದೆ. ಭಾರತದ ಪಾಲಿಗೆ ಮಹತ್ವದ್ದಾಗಿರುವ ಹಿಂದೂ ಮಹಾಸಾಗರ ಹಾಗೂ ದಕ್ಷಿಣ ಚೀನಾ ಸಮುದ್ರವನ್ನು ಸಂಪರ್ಕಿಸುವ ಭಾಗವೇ ಮಲಕ್ಕಾ ಜಲಸಂಧಿ. ಇದು ವಿಶ್ವದ ಅತಿ ‘ಹಡಗು ದಟ್ಟಣೆ’ಯ ಸ್ಥಳವಾಗಿದೆ. ಜಾಗತಿಕ ವ್ಯಾಪಾರದ ಶೇ.25ರಷ್ಟುಸರಕು ಸಾಗಣೆಯು ಇದೇ ಮಾರ್ಗದಲ್ಲಿ ನಡೆಯುತ್ತದೆ.
ಈ ಬಗ್ಗೆ ಟೀವಿ ವಾಹಿನಿಯೊಂದರ ಜತೆ ಮಾತನಾಡಿದ ಅಡ್ಮಿರಲ್ ಅರುಣ್ ಪ್ರಕಾಶ್, ‘ಚೀನೀಯರು ಕಾಂಬೋಡಿಯಾಗೆ ಬಂದರು ನಿರ್ಮಿಸಿಕೊಡುವ ನೆಪದಲ್ಲಿ, ಮುಂದೆ ತಮ್ಮ ಸೇನಾ ಕಾರ್ಯಾಚರಣೆಯನ್ನು ಅಲ್ಲಿಂದಲೇ ಮಾಡಬಹುದು. ಏಕೆಂದರೆ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸುವುದಾಗಿ 2019ರಲ್ಲೇ ಹೇಳಿತ್ತು. ಚೀನಾದ ಈಗಿನ ನಡೆ ಮುಂದಿನ ದಿನಗಳಲ್ಲಿ ಜಾಗತಿಕ ಸರಕು ಸಾಗಣೆ ಮೇಲೆ ಪ್ರಭಾವ ಬೀರಬಹುದು. ಮಿಲಿಟರಿ ದೃಷ್ಟಿಯಿಂದಲೂ ಪ್ರಭಾವ ಬೀರಬಹುದು’ ಎಂದಿದ್ದಾರೆ.
ದೇಶದ ಆರ್ಥಿಕತೆ ಪ್ರಗತಿಗೆ ಸಾಕ್ಷಿ: ಭಾರತದ ರೇಟಿಂಗ್ ಹೆಚ್ಚಿಸಿ ಚೀನಾ ರೇಟಿಂಗ್ ಇಳಿಸಿದ Morgan Stanley ಸಂಸ್ಥೆ
ಸದ್ಯ ಚೀನಾ ಬಳಿ 350 ಯುದ್ಧ ಹಡಗುಗಳಿದ್ದು, ವಿಶ್ವದ ಅತಿದೊಡ್ಡ ನೌಕಾಪಡೆಗಳಲ್ಲಿ ಒಂದಾಗಿದೆ. ಮುಂದಿನ 3 ವರ್ಷದಲ್ಲಿ ಅವುಗಳ ಸಂಖ್ಯೆ 460ಕ್ಕೆ ಏರಬಹುದಾಗಿದೆ. 85 ಗಸ್ತು ಹಡಗುಗಳೂ ಚೀನಾ ಬಳಿ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ