ಚೀನಿ ಆಪ್‌ಗಳಿಂದ ಭಯೋತ್ಪಾದನೆಗೆ ಆರ್ಥಿಕ ನೆರವು: ಭಾರತದಲ್ಲಿ 700 ಕೋಟಿ ವಂಚನೆ

By Kannadaprabha News  |  First Published Jul 24, 2023, 8:28 AM IST

ಹೂಡಿಕೆ ಮತ್ತು ಪಾರ್ಟ್‌ ಟೈಂ ಉದ್ಯೋಗದ ಹೆಸರಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಸಾವಿರಾರು ಜನರಿಗೆ 712 ಕೋಟಿ ರು. ವಂಚನೆ ಮಾಡಿದ್ದ ಜಾಲವೊಂದನ್ನು ಹೈದರಾಬಾದ್‌ ಪೊಲೀಸರು ಭೇದಿಸಿದ್ದಾರೆ.


ಕ್ರಿಪ್ಟೋಕರೆನ್ಸಿ ಮೂಲಕ ಹಿಜ್ಬುಲ್ಲಾಗೆ ಹಣ: ಭಾರತದಲ್ಲಿ ವಂಚಿಸಿ ಲೆಬನಾನ್‌ಗೆ ರವಾನೆ

  • ಹೂಡಿಕೆ ಮಾಡಿದರೆ ಹೆಚ್ಚು ರಿಟರ್ನ್ಸ್ ಕೊಡುವುದಾಗಿ ಆಮಿಷ
  • ಪಾರ್ಟ್‌ ಟೈಂ ನೌಕರಿ ಕೂಡ ಕೊಡುತ್ತೇವೆಂದು ಜನರಿಗೆ ವಂಚನೆ
  • ಭಾರತೀಯರಿಗೆ ವಂಚಿಸಿದ ಹಣ ಲೆಬನಾನ್‌ಗೆ ರಹಸ್ಯವಾಗಿ ರವಾನೆ
  • ಕ್ರಿಪ್ಟೋಕರೆನ್ಸಿ ಮೂಲಕ ಹಿಜ್ಬುಲ್ಲಾ ಉಗ್ರ ಸಂಘಟನೆಗೆ ಹಣದ ನೆರವು
  • ಹೈದರಾಬಾದ್‌ನ ವ್ಯಕ್ತಿ 28 ಲಕ್ಷ ರು. ಕಳೆದುಕೊಂಡಾಗ ವಂಚನೆ ಪತ್ತೆ
  • ಹೈದರಾಬಾದ್‌ ಪೊಲೀಸರಿಂದ ದೇಶದ ಬೇರೆ ಬೇರೆ ಕಡೆ 9 ಜನರ ಸೆರೆ
  • ಖೊಟ್ಟಿಕಂಪನಿಗಳನ್ನು ಹುಟ್ಟುಹಾಕಿ ಹವಾಲಾ ಮೂಲಕ ಹಣ ರವಾನೆ

ಹೈದರಾಬಾದ್‌: ಹೂಡಿಕೆ ಮತ್ತು ಪಾರ್ಟ್‌ ಟೈಂ ಉದ್ಯೋಗದ ಹೆಸರಲ್ಲಿ ಕಳೆದೊಂದು ವರ್ಷದ ಅವಧಿಯಲ್ಲಿ ದೇಶಾದ್ಯಂತ ಸಾವಿರಾರು ಜನರಿಗೆ 712 ಕೋಟಿ ರು. ವಂಚನೆ ಮಾಡಿದ್ದ ಜಾಲವೊಂದನ್ನು ಹೈದರಾಬಾದ್‌ ಪೊಲೀಸರು ಭೇದಿಸಿದ್ದಾರೆ. ಆತಂಕಕಾರಿ ವಿಷಯವೆಂದರೆ ಹೀಗೆ ವಂಚಿಸಿದ ಹಣದ ಪೈಕಿ ಒಂದಷ್ಟುಹಣವನ್ನು ಲೆಬನಾನ್‌ ಮೂಲದ ಹಿಜ್ಬುಲ್ಲಾ ಉಗ್ರ ಸಂಘಟನೆಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ರವಾನಿಸಲಾಗುತ್ತಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ. ಭಾರತದಲ್ಲಿ ಚೀನಾದ ವಂಚಕ ಆ್ಯಪ್‌ಗಳ ಕಾರ್ಯಾಚರಣೆ ಹೊಸದಲ್ಲವಾದರೂ, ಉಗ್ರರೊಂದಿಗೆ ಅವರ ನಂಟಿನ ಮೊದಲ ಪ್ರಕರಣ ಇದು ಎನ್ನಲಾಗಿದೆ.

Tap to resize

Latest Videos

ಹೈದರಾಬಾದ್‌ ಮೂಲದ ಶಿವಕುಮಾರ್‌ (Shivakumar) ಎಂಬಾತ ಹೀಗೆ ಈ ಜಾಲದ ಮೋಸ ಅರಿಯದೇ ಪಾರ್ಟ್ ಟೈಂ (Part Time worker) ಕೆಲಸಗಾರನಾಗಿ ಹಾಗೂ ಹೂಡಿಕೆದಾರನಾಗಿ ಸೇರಿಕೊಂಡಿದ್ದ. ಮೊದಲು ಆತನನ್ನು ನಂಬಿಸಲು ಅತ್ಯಾಕರ್ಷಕ ಲಾಭ ನೀಡಲಾಗಿತ್ತು. ಆದರೆ ಬಳಿಕ ಲಾಭ ಬಾರದೆ, ಕಾಲಕ್ರಮೇಣ 28 ಲಕ್ಷ ರು. ಕಳೆದುಕೊಂಡಿದ್ದ. ಆತನಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿ ಪೊಲೀಸರಿಗೆ ದೂರು ನೀಡಿದ್ದ. ಶಿವಕುಮಾರ್‌ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ವಂಚನೆಯ ಜಾಲ ಬಯಲಾಗಿದೆ. ತನಿಖೆ ವೇಳೆ ಕ್ರಿಪ್ಟೋಕರೆನ್ಸಿಗಳನ್ನು ನಿರ್ವಹಿಸುವ ಕಂಪನಿಯೊಂದು, ಲೆಬನಾನ್‌ (Lebanon) ಉಗ್ರರ ಖಾತೆಯ ಸುಳಿವು ನೀಡಿದ ಹಿನ್ನೆಲೆಯಲ್ಲಿ, ಚೀನಾ ವಂಚಕರಿಗೆ ಉಗ್ರರ ನಂಟು ಇರುವ ಮಾಹಿತಿ ಹೊರಬಿದ್ದಿದೆ.

Fact check; ಚೀನಿ ಆಪ್‌ಗಳಿಗೆ ಕೊನೆ ಮೊಳೆ ಹೊಡೆದ ಭಾರತ!

ಪ್ರಕರಣದ ಸಂಬಂಧ ಹೈದರಾಬಾದ್‌ನ ಮೊಹಮ್ಮದ್‌ ಮುನಾವರ್‌ (Mohammed Munawar), ಅರುಳ್‌ ದಾಸ್‌, ಶಮೀರ್‌ ಖಾನ್‌ ಮತ್ತು ಶಾ ಸುಮೈರ್‌, ಅಹಮದಾಬಾದ್‌ನ ಪ್ರಕಾಶ್‌ ಪ್ರಜಾಪತಿ ಮತ್ತು ಕುಮಾರ್‌ ಪ್ರಜಾಪತಿ (Prakash Prajapati)ಮತ್ತು ಮುಂಬೈನ ಗಗನ್‌ ಸೋನಿ, ಪರ್ವೇಜ್‌ ಅಲಿಯಾಸ್‌ ಗುಡ್ಡು ಮತ್ತು ನೈಮುದ್ದೀನ್‌ ಶೇಖ್‌ (Naimuddin Sheikh)ಎಂಬುವವರನ್ನು ಬಂಧಿಸಲಾಗಿದೆ.

ವಂಚನೆ ಹೇಗೆ?:

ದುಬೈ ಮೂಲದ ಚೀನಾದ ಹ್ಯಾಂಡ್ಲರ್‌ಗಳು ಭಾರತದಾದ್ಯಂತ ಏಜೆಂಟ್‌ಗಳನ್ನು ನೇಮಕ ಮಾಡಿಕೊಂಡಿದ್ದರು. ಇವರು ‘ನಮ್ಮ ಕಂಪನಿಗಳಿಗೆ ಪಾಸಿಟಿವ್‌ ಪ್ರತಿಕ್ರಿಯೆಗಳನ್ನು ಗೂಗಲ್‌ ರಿವ್ಯೂ ಹಾಗೂ ಯೂಟ್ಯೂಬ್‌ ಮೂಲಕ ನೀಡಿ. ಈ ಪಾರ್ಟ್ ಟೈಂ ಉದ್ಯೋಗದ ಮೂಲಕ ಹಣ ಗಳಿಸಿ’ ಎಂದು ಆ್ಯಪ್‌ ಹಾಗೂ ಜಾಲತಾಣಗಳ ಮೂಲಕ ಅಮಾಯಕರನ್ನು ಸೆಳೆಯುತ್ತಿದ್ದರು. ಪಾರ್ಟ್ ಟೈಂ ಉದ್ಯೋಗದ ಜೊತೆಗೆ ನೀವೂ ನಮ್ಮ ಕಂಪನಿಯಲ್ಲಿ ಹಣ ಹೂಡಿ ಬಾರಿ ಆದಾಯ ಗಳಿಸಿ ಎಂದು ಆಮಿಷ ಒಡ್ಡುತ್ತಿದ್ದರು. ಇದನ್ನು ನಂಬಿ ಜನ ಹಣ ಹೂಡಿಕೆ ಮಾಡುತ್ತಿದ್ದರು. ಹೀಗೆ ಸಂಗ್ರಹವಾದ ಹಣವನ್ನು ಏಜೆಂಟ್‌ಗಳು ಉತ್ತರ ಪ್ರದೇಶದಲ್ಲಿ ತೆರೆಯಲಾದ ನಕಲಿ ಕಂಪನಿಗಳ ಬ್ಯಾಂಕ್‌ ಖಾತೆಗೆ ಜಮೆ ಮಾಡುತ್ತಿದ್ದರು.

ನಂತರ ಈ ಹಣವನ್ನು ಹವಾಲಾ ಮಾರ್ಗದ ಮೂಲದ ಕ್ರಿಪ್ಟೋಕರೆನ್ಸಿಯಾಗಿ ಪರಿವರ್ತನೆ ಮಾಡಿ ದುಬೈನಲ್ಲಿರುವ ವ್ಯಕ್ತಿಯ ಖಾತೆಗೆ ವರ್ಗಾವಣೆ ಮಾಡಲಾಗುತ್ತಿತ್ತು. ಹೀಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ವರ್ಗಾವಣೆಯಾದ ಹಣದ ಪೈಕಿ ಒಂದು ಖಾತೆಯನ್ನು ಲೆಬನಾನ್‌ ಮೂಲದ ಹಿಜ್ಬುಲ್ಲಾ ಉಗ್ರರು ನಿರ್ವಹಣೆ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಮತ್ತೊಂದೆಡೆ ಜನರು ಹೂಡಿಕೆ ಮಾಡಿ ಕೆಲ ಸಮಯ ಆದ ಬಳಿಕ ಅವರೊಂದಿಗಿನ ಸಂಪರ್ಕವನ್ನು ವಂಚಕರು ಕಡಿದುಕೊಂಡು ಅವರಿಗೆ ವಂಚನೆ ಎಸಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲಿಂಗಸುಗೂರು: ಪಬ್‌ಜಿ ಗೇಮ್‌ ಬ್ಯಾನ್‌, ರೈತರಿಂದ ಪ್ರಧಾನಿ ಮೋದಿ ಭಾವಚಿತ್ರಕ್ಕೆ ಪೂಜೆ

click me!