ಭೂತಾನ್‌ ಜಾಗ ಅತಿಕ್ರಮಿಸಿ ಹಳ್ಳಿಯನ್ನೇ ಸ್ಥಾಪಿಸಿದ ಚೀನಾ!

By Kannadaprabha NewsFirst Published Nov 20, 2020, 7:30 AM IST
Highlights

2017ರಲ್ಲಿ ಭಾರತ ಮತ್ತು ಚೀನಾ ನಡುವೆ 73 ದಿನಗಳ ಸಂಘರ್ಷದ ಮೂಲದ ಯುದ್ಧ ಭೀತಿ ಹುಟ್ಟುಹಾಕಿದ್ದ ಡೋಕ್ಲಾಂ ಪ್ರದೇಶದಿಂದ ಕೇವಲ 9 ಕಿ.ಮೀ ದೂರದಲ್ಲಿ ಚೀನಾವೂ ಹಳ್ಳಿಯನ್ನು ಸ್ಥಾಪಿಸಿದೆ
 

ನವದೆಹಲಿ (ನ.20):  ಈಗಾಗಲೇ ಟಿಬೆಟ್‌ ಅನ್ನು ಕಬಳಿಸಿ, ತೈವಾನ್‌ ತನ್ನದೆನ್ನುತ್ತ, ಭಾರತದ ಭೂಭಾಗ ಕಬಳಿಕೆಗೆ ಯತ್ನಿಸುತ್ತಿರುವ ಕಮ್ಯುನಿಸ್ಟ್‌ ದೇಶ ಚೀನಾ, ಇದೀಗ ಭೂತಾನ್‌ನ ಗಡಿಯೊಳಗೆ ತನ್ನದೇ ಆದ ಹಳ್ಳಿಯೊಂದನ್ನು ಸ್ಥಾಪಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಆತಂಕದ ವಿಷಯವೆಂದರೆ, 2017ರಲ್ಲಿ ಭಾರತ ಮತ್ತು ಚೀನಾ ನಡುವೆ 73 ದಿನಗಳ ಸಂಘರ್ಷದ ಮೂಲದ ಯುದ್ಧ ಭೀತಿ ಹುಟ್ಟುಹಾಕಿದ್ದ ಡೋಕ್ಲಾಂ ಪ್ರದೇಶದಿಂದ ಕೇವಲ 9 ಕಿ.ಮೀ ದೂರದಲ್ಲಿ ಈ ಹಳ್ಳಿಯನ್ನು ಸ್ಥಾಪಿಸಲಾಗಿದೆ.

ಪಂಗ್ಡಾ ಎಂದು ಹೆಸರಿಸಲಾಗಿರುವ ಈ ಹಳ್ಳಿ ಭೂತಾನ್‌ನ ಭೂಭಾಗದ 2 ಕಿ.ಮೀ ಒಳಗೆ ನಿರ್ಮಾಣಗೊಂಡಿದೆ. ಇದು ಭೂತಾನ್‌ನ ಆಯಕಟ್ಟಿನ ಜಾಗವನ್ನು ಆಕ್ರಮಿಸಿಕೊಂಡು ಗಡಿ ಪ್ರದೇಶದಲ್ಲಿ ಭಾರತದ ವಿರುದ್ಧ ಸಂಚು ನಡೆಸುವ ಚೀನಾದ ಕುತಂತ್ರದ ಭಾಗವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಿನ್‌ಪಾಯಿಂಟ್ ಸ್ಟ್ರೈಕ್ ನಡೆಸಿಲ್ಲ: ಸೇನೆ ಸ್ಪಷ್ಟನೆ! ...

ರಹಸ್ಯ ಬಯಲು:  ಇಂಥದ್ದೊಂದು ಹಳ್ಳಿ ನಿರ್ಮಾಣಗೊಂಡಿರುವ ವಿಷಯವನ್ನು ಚೀನಾ ಸರ್ಕಾರದ ಮುಖವಾಣಿ ಪತ್ರಿಕೆ ಸಿಜಿಟಿಎನ್‌ ನ್ಯೂಸ್‌ನ ವರದಿಗಾರ ಶೆನ್‌ ಶುವೇ, ಗುರುವಾರ ಬೆಳಗ್ಗೆ ಫೋಟೋ ಸಮೇತ ಟ್ವೀಟ್‌ ಮಾಡಿದ್ದಾರೆ. ಅಲ್ಲದೆ ಈ ಹಳ್ಳಿ ಎಲ್ಲಿ ನಿರ್ಮಾಣಗೊಂಡಿದೆ ಎಂಬ ವಿಷಯವನ್ನೂ ದಾಖಲಿಸಿದ್ದರು. ಆ ಫೋಟೋದಲ್ಲಿ ಕಟ್ಟಡವೊಂದರ ಮುಂದೆ ಹಲವಾರು ಜನ ನಿಂತಿರುವ ಮತ್ತು ವ್ಯಕ್ತಿಯೊಬ್ಬರು ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ಕಂಡುಬರುತ್ತದೆ. ಆದರೆ ಅದಾದ ಕೆಲ ಹೊತ್ತಿನಲ್ಲೇ ಅವರು ತಮ್ಮ ಟ್ವೀಟರ್‌ ಖಾತೆಯಿಂದ ಈ ಸುದ್ದಿ ಮತ್ತು ಫೋಟೋ ಎರಡನ್ನೂ ಅಳಿಸಿ ಹಾಕಿದ್ದಾರೆ.

ಡೋಕ್ಲಾಮ್‌ ಪ್ರದೇಶ ಭಾರತ- ಚೀನಾ- ಭೂತಾನ್‌ ಗಡಿ ಸಂಧಿಸುವ ಪ್ರದೇಶವಾಗಿದೆ. ಇದು ಭೂತಾನ್‌ಗೆ ಸೇರಿದ್ದು. ಆದರೆ ಮೊದಲಿನಿಂದಲೂ ಇದರ ಮೇಲೆ ಚೀನಾ ಕಣ್ಣಿಟ್ಟಿದ್ದು, ಡೋಕ್ಲಾಂ ಮತ್ತು ಅದಕ್ಕೂ ಮುಂದುವರೆದ ಸಾಕಷ್ಟುಪ್ರದೇಶ ತನ್ನದೆಂದು ವಾದಿಸಿಕೊಂಡೇ ಬಂದಿದೆ.

click me!