ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಯಾವುದೇ ಧರ್ಮದ ವೈಯಕ್ತಿಕ ಕಾನೂನಿನ ಅಡಿಯ ಸಂಪ್ರದಾಯಗಳನ್ನು ಮುಂದಿಟ್ಟು ಕೊಂಡು ಚಿವುಟಿ ಹಾಕಲು ಆಗದು' ಎಂದು ಮಹತ್ವದ ಆದೇಶ ಪ್ರಕಟಿಸಿರುವ ಸುಪ್ರೀಂ ಕೋರ್ಟ್.
ನವದೆಹಲಿ (ಅ.19): 'ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ಯಾವುದೇ ಧರ್ಮದ ವೈಯಕ್ತಿಕ ಕಾನೂನಿನ ಅಡಿಯ ಸಂಪ್ರದಾಯಗಳನ್ನು ಮುಂದಿಟ್ಟು ಕೊಂಡು ಚಿವುಟಿ ಹಾಕಲು ಆಗದು' ಎಂದು ಮಹತ್ವದ ಆದೇಶ ಪ್ರಕಟಿಸಿರುವ ಸುಪ್ರೀಂ ಕೋರ್ಟ್, 'ಚಿಕ್ಕ ಮಕ್ಕಳಿಗೆ ವಿವಾಹ ಮಾಡಿದರೆ ಅವರು ತಮ್ಮ ಜೀವನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮೊಟಕು ಗೊಳಿಸಿದಂತೆ' ಎಂದಿದೆ. ತನ್ಮೂಲಕ ಬಾಲ್ಯ ವಿವಾಹ ನಿಷೇಧ ಕಾಯ್ದೆ ಎಲ್ಲಾ ಧರ್ಮಗಳಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿದೆ. ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಪೂರಕವಾಗಿ ಈ ಆದೇಶ ಹೊರಬಿದ್ದಿದೆ.
ಬಾಲ್ಯ ವಿವಾಹ ತಡೆ ಕಾನೂನಿನ ಪರಿಣಾಮಕಾರಿ ಜಾರಿ ಕೋರಿ ಸ್ವಯಂಸೇವಾ ಸಂಸ್ಥೆಯೊಂದು ಅರ್ಜಿ ಹಾಕಿತ್ತು. ಮುಖ್ಯ ನ್ಯಾಯಾಧೀಶ ನ್ಯಾ| ಡಿ.ವೈ. ಚಂದ್ರಚೂಡ್, ನ್ಯಾ| ಜೆ.ಬಿ.ಪರ್ದಿವಾಲಾ ಮತ್ತು ನ್ಯಾ| ಮನೋಜ್ ಮಿಶ್ರಾ ಅವರ ಪೀಠ ಇದರ ವಿಚಾರಣೆ ನಡೆಸಿತು. ಬಾಲ್ಯ ವಿವಾಹ ತಡೆಗಟ್ಟುವ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗ ಸೂಚಿಗಳನ್ನು ನ್ಯಾಯಪೀಠ ಹೊರಡಿಸಿತು ಹಾಗೂ ಈ ಕುರಿತು ಮಹತದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ಈ ಮುನ್ನ 1929ರಲ್ಲಿ ಮೊದಲ ಬಾರಿ ಬಾಲ್ಯ ವಿವಾಹ ನಿಷೇಧ ಕಾಯಿದೆ ಜಾರಿ ಮಾಡಲಾಗಿತ್ತು. ಆದರೆ ಅದು ಹಳತಾದ ಕಾರಣ 2006ರಲ್ಲಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಲಾ ಯಿತು. ಆದಾಗ್ಯೂ, ಅದು ಕೆಲವು ನ್ಯೂನತೆ ಹೊಂದಿದೆ.
ಈ ಲೋಪ ಪರಿಹರಿಸಲು 'ಸಮುದಾಯ-ಚಾಲಿತ ವಿಧಾನ' ಅಗತ್ಯ. ಅಂದರೆ, ಬಾಲ್ಯ ವಿವಾಹದ ಮೂಲ ಕಾರಣಗಳಾದ ಬಡತನ, ಲಿಂಗ, ಅಸಮಾನತೆ, ಶಿಕ್ಷಣದ ಕೊರತೆಯನ್ನು ಪರಿಹರಿಸುವತ್ತ ಗಮನಹರಿಸಬೇಕು. ಜತೆಗೆ ವಿವಿಧ ಸಮುದಾಯಗಳ ವಿಶಿಷ್ಟ ಅಗತ್ಯಗಳಿಗೆ ಅನುಗುಣ ವಾಗಿ ತಡೆಗಟ್ಟುವ ತಂತ್ರಗಳನ್ನು ರೂಪಿಸಬೇಕು' ಎಂದಿತು. 'ಬಾಲ್ಯವಿವಾಹಗಳನ್ನು ತಡೆಗಟ್ಟುವುದು ಮತ್ತು ದುರ್ಬಲ ಅಪ್ರಾಪ್ತರನ್ನು ರಕ್ಷಿಸುವುದು ಅಧಿಕಾರಿಗಳ ಮೊದಲ ಆದ್ಯತೆ ಆಗಬೇಕು. ಅಪರಾಧಿಗಳಿಗೆ ದಂಡ ವಿಧಿಸುವುದಕ್ಕೆ ಕೊನೆಯ ಆದ್ಯತೆ ನೀಡಬೇಕು. ಮೊದಲ ಆದ್ಯತೆ ಏನಿದ್ದರೂ ಅಪ್ರಾಪ್ತರ ರಕ್ಷಣೆ' ಎಂದೂ ಕಿವಿಮಾತು ಹೇಳಿತು.
ವಾಲ್ಮೀಕಿ ಕೇಸ್‌ನಲ್ಲಿ ನಾಗೇಂದ್ರಗೆ ದೊಡ್ಡ ಶಿಕ್ಷೆಯಾಗಲಿದೆ: ಜನಾರ್ದನ ರೆಡ್ಡಿ
ಪ್ರತ್ಯೇಕ ಪೊಲೀಸ್ ಘಟಕ ಆರಂಭಿಸಿ ಸುಪ್ರೀಂ ಮಾರ್ಗಸೂಚಿ
1. ಬಾಲ್ಯವಿವಾಹ ತಡೆಗೆ ಪ್ರತಿ ಜಿಲ್ಲೆಯಲ್ಲೂ ಸಿಎಂಪಿಒ (ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು) ನೇಮಿಸಿ
2. ನಿರ್ವಹಣೆಗೆ ಅಡ್ಡಿಯಾಗುವ ಬೇರೆ ಕೆಲಸದ ಹೊಣೆ ಬೇಡ
3. ಬಾಲ್ಯ ವಿವಾಹ ತಡೆವ ಹೊಣೆಯನ್ನು ಡಿ.ಸಿ.ಗಳು, ಎಸ್‌ಪಿಗಳು ಕೂಡಾ ಹೊರಬೇಕು
4. ಬಾಲ್ಯ ವಿವಾಹ ತಡೆಗೆ ಪ್ರತ್ಯೇಕ ನುರಿತ ಪೊಲೀಸ್ ಘಟಕ ಬೇಕು
5. ಬಾಲ್ಯ ವಿವಾಹ ತಡೆಯಲು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
6. ಬಾಲ್ಯ ವಿವಾಹ ದುಷ್ಪರಿಣಾಮ ಕುರಿತು ಜನರಿಗೆ ತಿಳಿಸಬೇಕು