ಮೈಸೂರು ವ್ಯಕ್ತಿಯಿಂದ ಛತ್ತೀಸ್‌ಗಢ ಪೊಲೀಸರಿಗೆ ಕೊರೋನಾ ವೈರಸ್‌ ಭೀತಿ!

By Suvarna NewsFirst Published Jul 7, 2020, 3:47 PM IST
Highlights

ಮೈಸೂರು ವ್ಯಕ್ತಿಯಿಂದ ಛತ್ತೀಸ್‌ಗಢ ಪೊಲೀಸರಿಗೆ ಕೊರೋನಾ ವೈರಸ್‌ ಭೀತಿ| ಬಿಲಾಸ್‌ಪುರದ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆ ಸೀಲ್‌ಡೌನ್| ಪೊಲೀಸ್‌ ಸಿಬ್ಬಂದಿಯಿಂದ ಗಂಟಲು ದ್ರವದ ಮಾದರಿಯನ್ನು ಸಂಗ್ರಹ

ಬಿಲಾಸ್‌ಪುರ(ಜು.07): ಕರ್ನಾಟಕದ ಮೈಸೂರಿನಿಂದ ಬಂಧಿಸಿ ಕರೆದೊಯ್ಯಲಾಗಿದ್ದ ಅತ್ಯಾಚಾರ ಆರೋಪಿಯೊಬ್ಬನಿಗೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಹಿನ್ನೆಲೆಯಲ್ಲಿ ಛತ್ತೀಸ್‌ಗಢದ ಬಿಲಾಸ್‌ಪುರ ಪೊಲೀಸ್‌ ಠಾಣೆಯೊಂದರ 60 ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಬಿಲಾಸ್‌ಪುರದ ಸಿವಿಲ್‌ ಲೈನ್ಸ್‌ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಅದನ್ನು ಕಂಟೇನ್ಮೆಂಟ್‌ ವಲಯ ಎಂದು ಘೋಷಿಸಲಾಗಿದೆ. ಪೊಲೀಸ್‌ ಸಿಬ್ಬಂದಿಯಿಂದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಪ್ರಶಾಂತ್‌ ಅಗರ್ವಾಲ್‌ ತಿಳಿಸಿದ್ದಾರೆ.

ಕೇರಳದಿಂದ ವಿಮಾನದಲ್ಲಿ ನರ್ಸ್‌ಗಳ ಕರೆಸಿಕೊಂಡ ತೆಲಂಗಾಣ ಆಸ್ಪತ್ರೆಗಳು!

ಬಂಧಿತ ವ್ಯಕ್ತಿ 28 ವರ್ಷದವನಾಗಿದ್ದು, ಮೈಸೂರಿನ ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ. ಈತನ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಸಂಬಂಧ ಕಳೆದ ತಿಂಗಳು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಲಾಸ್‌ಪುರದ ನಾಲ್ವರು ಪೊಲೀಸರ ತಂಡ ಮೈಸೂರಿಗೆ ತೆರಳಿ ಆರೋಪಿಯನ್ನು ಬಂಧಿಸಿ ಜು.4ರಂದು ಕರೆತಂದಿತ್ತು. ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಪರೀಕ್ಷೆಗೆ ಒಳಪಡಿಸಿದಾಗ ಆತನಲ್ಲಿ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ.

click me!