
ನವದೆಹಲಿ/ಭಿಲಾಯಿ : 2,160 ಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ಬಂಧಿಸಿದೆ ಹಾಗೂ 5 ದಿನ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.
ಶುಕ್ರವಾರ ಚೈತನ್ಯ ಅವರ ಜನ್ಮದಿನವಾಗಿತ್ತು. ಆ ದಿನವೇ ಅವರನ್ನು ಇ.ಡಿ. ಬಂಧಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೈತನ್ಯ, ‘ಬರ್ತ್ ಡೇ ಗಿಫ್ಟ್ ನಿಡಿದ್ದಕ್ಕೆ ಧನ್ಯವಾದ’ ಎಂದು ವ್ಯಂಗ್ಯವಾಡಿದ್ದಾರೆ. ಮಾಜಿ ಸಿಎಂ ಬಘೇಲ್, ‘ತಮ್ಮ ರಾಜಕೀಯ ಬಾಸ್‌ಗಳನ್ನು ತೃಪ್ತಿಪಡಿಸಲು ಇ.ಡಿ. ಹೆಣೆದ ಕುತಂತ್ರವಿದು. ಇದಕ್ಕೆ ಕಾನೂನು ಮೂಲಕವೇ ಉತ್ತರ ನೀಡುತ್ತೇವೆ’ ಎಂದು ಕಿಡಿಕಾರಿದ್ದಾರೆ.
ಮನೆಯಿಂದಲೇ ಚೈತನ್ಯ ಬಂಧನ:ಕಳೆದ ಮಾ.10ರಂದು ಬಘೇಲ್ ಹಾಗೂ ಚೈತನ್ಯ ಆಸ್ತಿಪಾಸ್ತಿಗಳ ಮೇಲೆ ಇ.ಡಿ. ದಾಳಿ ಮಾಡಿತ್ತು. ಈಗ ಹೊಸ ಪುರಾವೆಗಳ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 19ರ ಅಡಿಯಲ್ಲಿ ಭಿಲಾಯಿಯಲ್ಲಿರುವ ಕುಟುಂಬದ ನಿವಾಸದಿಂದ ಚೈತನ್ಯರನ್ನು ಬಂಧಿಸಲಾಗಿದೆ.
ಶೋಧದ ಸಮಯದಲ್ಲಿ ಚೈತನ್ಯ ಬಾಘೇಲ್ ಅಸಹಕಾರ ತೋರಿದ್ದಾರೆ. ಇದು ಅವರನ್ನು ತಕ್ಷಣ ಬಂಧಿಸಲು ಕಾರಣವಾಯಿತು ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.
ಏನಿದು ಹಗರಣ?:
‘ಕಾಂಗ್ರೆಸ್ ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿದ್ದಾಗ 2019 ಮತ್ತು 2022 ರ ನಡುವೆ ಮದ್ಯ ಹಗರಣ ನಡೆಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 2160 ಕೋಟಿ ರು. ಹಾನಿಯಾಗಿದೆ’ ಎಂದು ಇ.ಡಿ. ಆರೋಪಿಸಿದೆ.
ಡಿಸ್ಟಿಲರಿಗಳಲ್ಲಿ ತಯಾರಿಸಿದ ಲೆಕ್ಕಪತ್ರವಿಲ್ಲದ ಮದ್ಯವನ್ನು ಅಗತ್ಯ ಸುಂಕ ಮತ್ತು ಶುಲ್ಕವನ್ನು ಪಾವತಿಸದೆ ನೇರವಾಗಿ ಸರ್ಕಾರಿ ಮದ್ಯದಂಗಡಿಗಳಿಗೆ ಸರಬರಾಜು ಮಾಡಲಾಗಿದೆ. ಇದರಿಂದಾಗಿ ರಾಜ್ಯ ಖಜಾನೆಗೆ ಗಣನೀಯ ನಷ್ಟವಾಗಿದೆ. ಇದಕ್ಕಾಗಿ ಡಿಸ್ಟಿಲರಿಗಳಿಂದ ರಾಜಕೀಯ ನಾಯಕರಿಗೆ ಲಂಚದ ಹಣ ಸಂದಾಯವಾಗಿದ್ದು, ಇದರಲ್ಲಿ ಬಘೇಲ್ ಪುತ್ರ ಕೂಡ ಒಬ್ಬರು ಎಂಬುದು ಆರೋಪ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ