5 ರಾಜ್ಯಗಳ ಚುನಾವಣೆಯ ಮೊದಲ ಭಾಗವಾಗಿ 2 ರಾಜ್ಯಗಳಲ್ಲಿ ಇಂದು ಚುನಾವಣೆ ನಡೆಯಲಿದ್ದು, 2024ರ ಲೋಕಸಭೆ ಚುನಾವಣೆಯ ಮುಂಚಿನ 'ಮಿನಿ ಮಹಾ ಸಮರ'ಕ್ಕೆ ಚಾಲನೆ ಸಿಗಲಿದೆ.
ರಾಯಪುರ/ಐಜ್ವಾಲ್: 5 ರಾಜ್ಯಗಳ ಚುನಾವಣೆಯ ಮೊದಲ ಭಾಗವಾಗಿ 2 ರಾಜ್ಯಗಳಲ್ಲಿ ಇಂದು ಚುನಾವಣೆ ನಡೆಯಲಿದ್ದು, 2024ರ ಲೋಕಸಭೆ ಚುನಾವಣೆಯ ಮುಂಚಿನ 'ಮಿನಿ ಮಹಾ ಸಮರ'ಕ್ಕೆ ಚಾಲನೆ ಸಿಗಲಿದೆ. ಛತ್ತೀಸ್ ಗಢ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಛತ್ತೀಸ್‌ಗಢದಲ್ಲಿ 90 ವಿಧಾನಸಭಾ ಸೀಟುಗಳಿದ್ದು, 20 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದರಲ್ಲಿ ನಕ್ಸಲ್ ಪೀಡಿತ ಬಸ ಜಿಲ್ಲೆಯ 12 ಕ್ಷೇತ್ರಗಳೂ ಸೇರಿವೆ. ಹೀಗಾಗಿ ಬಿಗಿಭದ್ರತೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಬಿಜೆಪಿ ಪುನಃ ಅಧಿಕಾರಕ್ಕೆ ಬರಲು ಶತಾಯ ಗತಾಯ ಯತ್ನ ನಡೆಸುತ್ತಿದೆ.
ಇನ್ನು 40 ಸ್ಥಾನಗಳ ಮಿಜೋರಂನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರೆಂಟ್, ವಿರೋಧ ಪಕ್ಷವಾದ ಜೋರಾಮ್ ಪೀಪಲ್ ಮೂವ್ ಮೆಂಟ್, ಕಾಂಗ್ರೆಸ್, ಆಪ್, ಬಿಜೆಪಿ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ಮಿಜೋ ಫ್ರೆಂಟ್ ಕೇಂದ್ರದಲ್ಲಿ ಎನ್‌ಡಿಎ ಕೂಟದಲ್ಲಿದ್ದರೂ ರಾಜ್ಯದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿದೆ. ಎರಡೂ ರಾಜ್ಯಗಳಲ್ಲಿ ಡಿ.3ರಂದು ಮತ ಎಣಿಕೆ ನಡೆಯಲಿದೆ.
ಬಿಜೆಪಿ, ಇ.ಡಿ. ವಿರುದ್ಧ ಚುನಾವಣಾ ಆಯೋಗಕ್ಕೆ ದೂರುವೆ: ಬಘೇಲ್
ರಾಯ್ಪುರ: 'ಮಹಾದೇವ' ಅಕ್ರಮ ಬೆಟ್ಟಿಂಗ್ ಆ್ಯಪ್ ದಂಧೆಕೋರನಿಂದ ತಮಗೆ 508 ಕೋಟಿ ರು. ಲಂಚ ಸಂದಾಯವಾಗಿದೆ ಎಂಬ ಆರೋಪಕ್ಕೆ ತೀಕ್ಷ್ಯವಾಗಿ ಪ್ರತಿಕ್ರಿಯಿಸಿರುವ ಛತ್ತೀಸ್ ಗಡದ ಕಾಂಗ್ರೆಸ್ ಮುಖ್ಯಮಂತ್ರಿ ಭೂಪೇಶ್ ಬಘೇಲ್, ನ.17ರವರೆಗೆ ಎಂಜಾಯ್ ಮಾಡಿ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಅಲ್ಲದೆ, ಬಿಜೆಪಿ ಮತ್ತು ಇಡಿ, ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿಯೂ ತಿಳಿಸಿದ್ದಾರೆ.
'ಚುನಾವಣೆಗೂ ಮುನ್ನ ನಮ್ಮ ರಾಜ್ಯದ ಮತದಾರರಿಗೆ ಕಳಂಕ ತರಲು ಬಿಜೆಪಿ ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ.) ಯತ್ನಿಸುತ್ತಿವೆ. ಇದರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು. ಬಿಜೆಪಿಯವರು ಇ.ಡಿ.ಯನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿಗೆ ಇ.ಡಿ.ಯೇ ಮೈತ್ರಿ ಪಕ್ಷವಾಗಿದೆ ಎಂದೂ ಅವರು ಆರೋಪಿಸಿದ್ದಾರೆ. 'ಬಿಜೆಪಿಯವರು ಚುನಾವಣೆ ನಡೆವ ನ.17ರವರೆಗೆ ಎಂಜಾಯ್ ಮಾಡಬಹುದು, ಇದರಿಂದ ಚುನಾವಣೆ ಮೇಲೆ ಯಾವ ಪರಿಣಾಮವೂ ಉಂಟಾಗುವುದಿಲ್ಲ. ವಾಸ್ತವವಾಗಿ ಬಿಜೆಪಿಯವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಲೇ ಇಲ್ಲ. ಅವರ ಪರವಾಗಿ ಇ.ಡಿ., ಆದಾಯ ತೆರಿಗೆ ಇಲಾಖೆ ಸ್ಪರ್ಧಿಸುತ್ತಿದೆ' ಎಂದು ಕುಟುಕಿದರು.
ಮಹಾದೇವ ಆ್ಯಪ್ ವಿರುದ್ಧದ ತನಿಖೆಗೆ ಬಘೇಲ್ ಅಡ್ಡಿ: ಆರ್ ಸಿ
ಅಕ್ರಮ ಮಹಾದೇವ ಬೆಟ್ಟಿಂಗ್ ಆ್ಯಪ್‌ನಿಂದ ಛತ್ತೀಸ್‌ಗಢದ ಮುಖ್ಯಮಂತ್ರಿ, ಭೂಪೇಶ್ ಬಘೇಲ್ ಅವರಿಗೆ 508 ಕೋಟಿ ರು. ಕಿಕ್‌ಬ್ಯಾಕ್ ಸಂದಾಯವಾಗಿದೆ ಎಂಬ ಆರೋಪದ ಬೆನ್ನಲ್ಲೇ ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ನಡುವೆ ತೀವ್ರ ವಾಕ್ಸಮರ ಆರಂಭವಾಗಿದೆ. ಮಹಾದೇವ ವಿರುದ್ಧದ ತನಿಖೆಯನ್ನು ಸುದೀರ್ಘ ಒಂದೂವರೆ ವರ್ಷಗಳ ಕಾಲ ಬಘೇಲ್ ವಿಳಂಬ ಮಾಡಿದರು. ಆ್ಯಪ್ ನಿಷೇಧ ಕೋರಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಲಿಲ್ಲ. ಅದಕ್ಕಾಗಿ 508 ಕೋಟಿ ರು. ಕಿಕ್ ಬ್ಯಾಕ್ ಪಡೆದರು. ಚುನಾವಣಾ ಪ್ರಚಾರಕ್ಕೆ ಹಣ ಸಂಗ್ರಹಿಸುವುದಕ್ಕೆಂದೇ ಅವರು ವಿಳಂಬ ಮಾಡಿದರು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.
ದೇವಸ್ಥಾನದೊಳಗೆ ನುಗ್ಗಿ ಶಿವಲಿಂಗದ ಎದುರೇ ಮೂತ್ರ ವಿಸರ್ಜನೆ : ಮುಸ್ಲಿಂ ಯುವಕನ ಬಂಧನ
ಈ ಆರೋಪವನ್ನು ನಿರಾಕರಿಸಿರುವ ಕಾಂಗ್ರೆಸ್ ಪಕ್ಷ, ಕೇಂದ್ರ ಸರ್ಕಾರವೇ ಆ್ಯಪ್ ನಿಷೇಧಿಸಲು ವಿಳಂಬ ಮಾಡಿದೆ. ಆಗಸ್ಟ್ ತಿಂಗಳಲ್ಲೇ ಮುಖ್ಯಮಂತ್ರಿ ಬಾಘೇಲ್ ಅವರು ಆ್ಯಪ್ ನಿಷೇಧಕ್ಕೆ ಆಗ್ರಹಿಸಿದ್ದರು. ಆ್ಯಪ್ ನಡೆಸುತ್ತಿರುವ ಬೆಟ್ಟಿಂಗ್ ದಂಧೆಯ ಬಗ್ಗೆ ಮೊದಲು ಧ್ವನಿ ಎತ್ತಿದವರೇ ಬಘೇಲ್, ಅವರನ್ನು ಹೊಗಳುವುದು ಬಿಟ್ಟು ಕೇಂದ್ರ ಸರ್ಕಾರ ಅವರ ವಿರುದ್ಧವೇ ಆರೋಪ ಮಾಡುತ್ತಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ.