ನಮೀಬಿಯಾದಿಂದ ತಂದಿದ್ದ ಚೀತಾ ‘ಆಶಾ’ಗೆ ಗರ್ಭಪಾತ

By Kannadaprabha NewsFirst Published Nov 7, 2022, 7:45 AM IST
Highlights

ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಅಭಯಾರಣ್ಯಕ್ಕೆ ಇತ್ತೀಚೆಗೆ ತರಲಾಗಿದ್ದ ಚೀತಾಗಳ ಪೈಕಿ ಆಶಾ ಎಂಬ ಚೀತಾ ಗರ್ಭ ಧರಿಸಿತ್ತು ಎಂಬ ವರದಿಗಳ ಕುರಿತು ಇದೀಗ ಸ್ವತಃ ಸಿಸಿಎಫ್‌ (ಚೀನಾ ಕನ್ಸ್‌ರ್ವೇಷನ್‌ ಫಂಡ್‌) ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕಿ ಡಾ.ಲೌರಿ ಮಾರ್ಕರ್‌ ಸ್ಪಷ್ಟನೆ ನೀಡಿದ್ದಾರೆ.

ಭೋಪಾಲ್‌: ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಅಭಯಾರಣ್ಯಕ್ಕೆ ಇತ್ತೀಚೆಗೆ ತರಲಾಗಿದ್ದ ಚೀತಾಗಳ ಪೈಕಿ ಆಶಾ ಎಂಬ ಚೀತಾ ಗರ್ಭ ಧರಿಸಿತ್ತು ಎಂಬ ವರದಿಗಳ ಕುರಿತು ಇದೀಗ ಸ್ವತಃ ಸಿಸಿಎಫ್‌ (ಚೀನಾ ಕನ್ಸ್‌ರ್ವೇಷನ್‌ ಫಂಡ್‌) ಸ್ವಯಂಸೇವಾ ಸಂಸ್ಥೆ ಸಂಸ್ಥಾಪಕಿ ಡಾ.ಲೌರಿ ಮಾರ್ಕರ್‌ ಸ್ಪಷ್ಟನೆ ನೀಡಿದ್ದಾರೆ. ‘ಗರ್ಭ ಧರಿಸಿದ್ದು ಹೌದು. ಆದರೆ ಗರ್ಭಪಾತವಾಗಿದೆ’ ಎಂದಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿದ ಡಾ. ಲೌರಿ (Laurie Marker), ‘ನಮೀಬಿಯಾದ ಅರಣ್ಯದಲ್ಲಿ (Namibian forest) ಸೆರೆಹಿಡಿಯುವಾಗಲೇ ಒಂದು ಚೀತಾ ಗರ್ಭ ಧರಿಸಿತ್ತು. ಆದರೆ ನಂತರ, ಚೀತಾಗಳಲ್ಲಿ ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಕಾಡುವ ಒತ್ತಡಕ್ಕೆ ಒಳಗಾಗಿ ಗರ್ಭಪಾತಕ್ಕೆ (miscarriages) ತುತ್ತಾಗಿದೆ’ ಎಂದು ಹೇಳಿದ್ದಾರೆ.

‘ಚೀತಾಗಳ ಗರ್ಭಾವಸ್ಥೆಯ (gestation) ಅವಧಿ 93 ದಿನ. ಆದರೆ ಗರ್ಭಧರಿಸಿದ್ದ ಚೀತಾ ಈಗಾಗಲೇ ಭಾರತಕ್ಕೆ ಬಂದು 100 ದಿನಗಳಾಗಿವೆ. ಹೀಗಾಗಿ ಇನ್ನು ಅದು ಮರಿ ಹೆರುವ ಸಾಧ್ಯತೆ ಇಲ್ಲ. ಒಂದು ವೇಳೆ ಕ್ವಾರಂಟೈನ್‌ ಅವಧಿಯಲ್ಲೇ ಆಶಾ ಮರಿಯನ್ನು (Cheetah Asha) ಹೆತ್ತಿದ್ದರೆ, ಮರಿಗಳ ಜೊತೆ ತಾಯಿ ಹೊಂದಾಣಿಕೆಗಾಗಿ ಅವುಗಳನ್ನು ಇನ್ನಷ್ಟು ದಿನ ಮೊದಲಿಗೆ ಇಡಲಾಗಿದ್ದ ಸೀಮಿತ ಪ್ರದೇಶದಲ್ಲೇ ಇಡಬೇಕಾಗಿತ್ತು’ ಎಂದು ಡಾ.ಲೌರಿ ಹೇಳಿದ್ದಾರೆ. ಚೀತಾ ಗರ್ಭ ಧರಿಸಿದೆ ಎಂದು ಲೌರಿ ಕೆಲವು ದಿನಗಳ ಹಿಂದೆ ಹೇಳಿದ್ದರು. ಆದರೆ ಕುನೋ ಪಾರ್ಕ್ ಅಧಿಕಾರಿಗಳು ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದರು.

ಕುನೋ ಉದ್ಯಾನಕ್ಕೆ ಹೊಂದಿಕೊಂಡ ಚೀತಾಗಳು: ವಿಡಿಯೋ ಟ್ವಿಟ್ ಮಾಡಿದ ಮೋದಿ

ಈ ಮಧ್ಯೆ ನಮೀಬಿಯಾದಿಂದ ಭಾರತಕ್ಕೆ ತರಲಾದ 8 ಚೀತಾಗಳ ಪೈಕಿ 2ನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದ (Kuno National Park)ಸೀಮಿತ ಅರಣ್ಯ ಪ್ರದೇಶಕ್ಕೆ ಶನಿವಾರ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)  ‘ಗ್ರೇಟ್‌ ನ್ಯೂಸ್‌’ ಎಂದು ಟ್ವೀಟ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ಬಿಡುಗಡೆಗೊಳಿಸಲಾದ 2 ಚೀತಾಗಳ ವೀಡಿಯೊ ತುಣುಕಿನೊಂದಿಗೆ ಸಂದೇಶ ಹಂಚಿಕೊಂಡ ಪ್ರಧಾನಿ, ಅಗತ್ಯ ಕ್ವಾರಂಟೈನ್‌ ಬಳಿಕ 2 ಚೀತಾಗಳನ್ನು ಕಾಡಿಗೆ ಬಿಟ್ಟಿದ್ದು, ಉಳಿದವುಗಳನ್ನು ಶೀಘ್ರ ಬಿಡಲಾಗುವುದು. ಎಲ್ಲ ಚೀತಾಗಳು ಆರೋಗ್ಯವಾಗಿವೆ. ಕ್ರಿಯಾಶೀಲವಾಗಿವೆ ಹಾಗೂ ಹೊಂದಿಕೊಳ್ಳುತ್ತಿವೆ ಎಂದು ತಿಳಿಸಲು ಸಂತೋಷವೆನಿಸುತ್ತದೆ’ ಎಂದು ತಿಳಿಸಿದ್ದಾರೆ.

ನಮೀಬಿಯಾದಿಂದ ಭಾರತಕ್ಕೆ ಬಂದ ಚೀತಾ ‘ಆಶಾ’ ಗರ್ಭಿಣಿ

ಕ್ವಾರಂಟೈನ್‌ ನಲ್ಲಿ ಇರಿಸಲಾಗಿದ್ದ ಈ ಚೀತಾಗಳಲ್ಲಿ ಎರಡನ್ನು 5 ಚ.ಕಿ.ಮೀ.ನಷ್ಟು ವ್ಯಾಪ್ತಿಯ ಬೇಲಿ ಹಾಕಿದ ಕಿರು ಅರಣ್ಯಕ್ಕೆ ಬಿಡಲಾಗಿದೆ. ಉಳಿದಿರುವ 6 ಚೀತಾಗಳನ್ನೂ ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ವಲಯ ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

click me!