ಚಂದ್ರಯಾನ-3 ನೌಕೆ ಶನಿವಾರ ಸಂಜೆ 7ಕ್ಕೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಲಿದೆ. ಜು.14ರಂದು ಉಡಾವಣೆಯಾಗಿದ್ದ ಈ ನೌಕೆ ಈಗಾಗಲೇ ತನ್ನ ಪ್ರಯಾಣದ 3ನೇ 2ರಷ್ಟುಹಾದಿ ಕ್ರಿಮಿಸಿದ್ದು, ಆ.23ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇದೆ.
ಬೆಂಗಳೂರು (ಆ.5): ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಈಗಾಗಲೇ ತನ್ನ ನಿಗದಿತ ಪ್ರಯಾಣದಲ್ಲಿ ಮೂರನೇ ಎರಡಷ್ಟು ಹಾದಿ ಕ್ರಮಿಸಿದ್ದು, ಶನಿವಾರ ಸಂಜೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಲಿದೆ. ಆ.1ರಂದು ಭೂಮಿಯ ಕಕ್ಷೆಯಿಂದ ಹೊರಕ್ಕೆ ಜಿಗಿದು ಚಂದ್ರನತ್ತ ಪ್ರಯಾಣ ಆರಂಭಿಸಿದ್ದ ಚಂದ್ರಯಾನ ನೌಕೆ, ಇದೀಗ ಚಂದ್ರನ ಕಕ್ಷೆಯನ್ನು ಸೇರಲು ಕ್ಷಣಗಣನೆ ಆರಂಭವಾಗಿದೆ.
ಜು.14ರಂದು ಶ್ರೀಹರಿಕೋಟಾದಿಂದ ನಭಕ್ಕೆ ನೆಗೆದಿದ್ದ ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ‘ಲೂನಾರ್ ಆರ್ಬಿಟ್ ಇಂಜೆಕ್ಷನ್ (ಎಲ್‌ಒಐ)’ ಪ್ರಕ್ರಿಯೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಆ.5ರ ಸಂಜೆ 7 ಗಂಟೆಯ ಮುಹೂರ್ತ ನಿಗದಿಪಡಿಸಿದೆ. ‘ಚಂದ್ರನ ಕಕ್ಷೆಗೆ ಅತ್ಯಂತ ಸನಿಹದಲ್ಲಿ ನೌಕೆ ಇರುವ ಕ್ಷಣ ನೋಡಿಕೊಂಡು ಲೂನಾರ್ ಆರ್ಬಿಟ್ ಇಂಜೆಕ್ಷನ್ (ಚಂದ್ರನ ಕಕ್ಷೆ ಸೇರುವ ಪ್ರಕ್ರಿಯೆ) ಕೈಗೊಳ್ಳಲಾಗುತ್ತದೆ’ ಎಂದು ಇಸ್ರೋ ತಿಳಿಸಿದೆ.
undefined
ಬಳಿಕ ಆ.23ರಂದು ಚಂದ್ರನ ಮೇಲೆ ಲ್ಯಾಂಡರ್ ಇಳಿಸಲು ಪ್ರಯತ್ನಿಸಲಾಗುತ್ತದೆ. ಚಂದ್ರನ ನೆಲದ ಮೇಲೆ ಲ್ಯಾಂಡರ್ ಇಳಿದ ಮೇಲೆ ಅದರಿಂದ ಹೊರಬರುವ ರೋವರ್ ಉಪಕರಣವು ಚಂದ್ರನ ಮೇಲೆ ಅಧ್ಯಯನ ನಡೆಸಲಿದೆ.
Chandrayaan 3: ಬಾಹ್ಯಾಕಾಶ ನೌಕೆಗೆ ನಾಳೆ ಬಹುದೊಡ್ಡ ಅಗ್ನಿಪರೀಕ್ಷೆ!
ಜು.14ರಂದು ಶ್ರೀಹರಿಕೋಟದಿಂದ ಉಡ್ಡಯನಗೊಂಡು 17 ದಿನಗಳಿಂದ ಭೂಮಿಯ ವಿವಿಧ ಕಕ್ಷೆಯಲ್ಲಿ ಸುತ್ತುತ್ತಿದ್ದ ಚಂದ್ರಯಾನ -3 ನೌಕೆ, ಜುಲೈ 31ರ ತಡರಾತ್ರಿ ಭೂಮಿಯ ಕಕ್ಷೆಯನ್ನು ಬಿಟ್ಟು ಚಂದ್ರನತ್ತ ತನ್ನ ಪ್ರಯಾಣ ಬೆಳೆಸಿತು. ಇದರೊಂದಿಗೆ ಚಂದ್ರಯಾನ-3 ಮತ್ತೊಂದು ಮಹತ್ವದ ಘಟ್ಟ ತಲುಪಿತು.
ಜುಲೈ 31ರ ತಡರಾತ್ರಿ 12ರಿಂದ 1 ಗಂಟೆಯ ವೇಳೆಗೆ ಚಂದ್ರಯಾನ ನೌಕೆಯನ್ನು ಚಿಮ್ಮಿಸುವ ಮೂಲಕ ಚಂದ್ರನತ್ತ ತೂರಿ ಬಿಡಲಾಯ್ತು. ನೌಕೆಯಲ್ಲಿನ ಇಂಧನವನ್ನು ಬಳಸಿಕೊಂಡು ಅದರ ವೇಗೋತ್ಕರ್ಷವನ್ನು ಹೆಚ್ಚಿಸಿ ಟ್ರಾನ್ಸ್ ಲೂನಾರ್ ಇಂಜೆಕ್ಷನ್ (ಟಿಎಲ್‌ಐ) ಎಂಬ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ನಡೆಸಿತ್ತು.
ಆ.5ಕ್ಕೆ ಚಂದ್ರನ ಕಕ್ಷೆಗೆ ಸೇರ್ಪಡೆಗೊಂಡು, ಚಂದ್ರನ ಸುತ್ತ ಸುತ್ತಲು ಆರಂಭಿಸಲಿದೆ. ನಂತರ ಆ.23ರಂದು ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಪ್ರಯತ್ನವನ್ನು ಇಸ್ರೋ ಮಾಡಲಿದೆ.
Explainer: ಬಾಹ್ಯಾಕಾಶದಲ್ಲಿಯೇ ಗಗನಯಾತ್ರಿಗಳು ಸಾವು ಕಂಡರೆ ಏನಾಗುತ್ತದೆ?
ಏನಿದು ಟ್ರಾನ್ಸ್ ಲೂನಾರ್ ಇಂಜೆಕ್ಷನ್:
ಇದು ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವುದಕ್ಕೂ ಮುನ್ನ ಕೈಗೊಳ್ಳುವ ಅತ್ಯಂತ ಮಹತ್ವದ ಪ್ರಯೋಗ. ನಿರ್ದಿಷ್ಟವೇಗದಲ್ಲಿ ಭೂಮಿಯ ಕಕ್ಷೆಯಿಂದ ನಿರ್ವಾತದಲ್ಲಿ ಹೊರಗೆ ಹೋಗುತ್ತಿರುವ ನೌಕೆಯನ್ನು ಕೆಮಿಕಲ್ ರಾಕೆಟ್ ಎಂಜಿನ್ ಬಳಸಿ ಏಕಾಏಕಿ ವೇಗ ಹೆಚ್ಚಿಸಿ ಚಂದ್ರನ ಕಕ್ಷೆಯತ್ತ ನುಗ್ಗುವಂತೆ ಮಾಡಲಾಗುತ್ತದೆ. ಚಂದ್ರನ ಕಕ್ಷೆಯ ಅತ್ಯಂತ ಹತ್ತಿರದ ಬಿಂದುವಿಗೆ ನೌಕೆಯು ಬಂದಾಗ ಇದನ್ನು ಮಾಡಲಾಗುತ್ತದೆ. ಆ ಸಮಯ ಆ.1ರ ಬೆಳಗಿನ ಜಾವದಲ್ಲಿ ಬಂದಿತ್ತು. ಆಗ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಮಾಡಿದ ಮೇಲೆ ಚಂದ್ರಯಾನ-3 ನೌಕೆಯು ತನ್ನ ಈಗಿನ ದಾರಿ ಬದಲಿಸಿ ಚಂದ್ರನ ದಾರಿಯನ್ನು ಹಿಡಿಯುತ್ತದೆ. ನಂತರ ಚಂದ್ರನ ಕಕ್ಷೆಯನ್ನು ಸೇರಿ ಚಂದ್ರನ ಸುತ್ತ ಸುತ್ತಲು ಆರಂಭಿಸುತ್ತದೆ.
ಒಟ್ಟು 40 ದಿನಗಳ ಪ್ರಯಾಣ:
ಭಾರತದ ಬಳಿ ನೇರವಾಗಿ ಚಂದ್ರನ ಕಕ್ಷೆಗೇ ಹಾರುವ ರಾಕೆಟ್ ಇಲ್ಲದಿರುವುದರಿಂದ ಮೊದಲಿಗೆ ನೌಕೆಯನ್ನು ಭೂಮಿಯ ಸುತ್ತ ಸುತ್ತಿಸಿ, ಬಳಿಕ ನಿರ್ವಾತಕ್ಕೆ ಕಳುಹಿಸಿ, ಅಲ್ಲಿಂದ ಚಂದ್ರನ ಕಕ್ಷೆಗೆ ಜಿಗಿಸಬೇಕಾಗುತ್ತದೆ.
ಅಮೆರಿಕದ ನಾಸಾ ತನ್ನ ಅಪೋಲೋ ನೌಕೆಯನ್ನು ನೇರವಾಗಿ ಚಂದ್ರನ ಕಕ್ಷೆಗೇ ಹಾರಿಸಿತ್ತು. ಭೂಮಿಯಿಂದ ಕೇವಲ 3 ದಿನದಲ್ಲಿ ಅಪೋಲೋ ನೌಕೆ ಚಂದ್ರನ ಕಕ್ಷೆ ಸೇರಿತ್ತು. ಆದರೆ ಭಾರತದ ನೌಕೆ ಈ ಪ್ರಯಾಣಕ್ಕೆ 40 ದಿನಗಳನ್ನು ತೆಗೆದುಕೊಳ್ಳುತ್ತಿದೆ.
ಜು.14ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ. ಅದರಲ್ಲಿ ಚಂದ್ರನ ಅಧ್ಯಯನ ನಡೆಸಲು ಬೇಕಾದ ವಿವಿಧ ಉಪಕರಣಗಳನ್ನು ಕಳುಹಿಸಲಾಗಿದೆ. 978 ಕೋಟಿ ರು. ವೆಚ್ಚದ ಚಂದ್ರಯಾನ-2 ಯೋಜನೆಗಿಂತ ಕಡಿಮೆ, ಅಂದರೆ 615 ಕೋಟಿ ರು. ವೆಚ್ಚದಲ್ಲಿ ಇಸ್ರೋ ಚಂದ್ರಯಾನ-3 ಯೋಜನೆ ಕೈಗೊಂಡಿದೆ. ಚಂದ್ರನ ಮೇಲೆ ಲ್ಯಾಂಡರ್ ಇಳಿದ ಬಳಿಕ ಅದರೊಳಗಿನ ರೋವರ್ ಉಪಕರಣವು ಹೊರಗೆ ಬಂದು ನೆಲದ ಮೇಲೆ ಒಂದು ಚಂದ್ರನ ದಿನದ ಅವಧಿಯವರೆಗೆ, ಅಂದರೆ 14 ಭೂಮಿಯ ದಿನಗಳವರೆಗೆ ಕೆಲಸ ಮಾಡಲಿದ್ದು, ಇಸ್ರೋಗೆ ನಿರಂತರವಾಗಿ ಚಂದ್ರನ ಬಗ್ಗೆ ಮಾಹಿತಿ ಕಳುಹಿಸಲಿದೆ.