
ನವದೆಹಲಿ(ಸೆ.20): ದೇಶದಲ್ಲಿ ಹೆಚ್ಚು ಅಪಾಯಕಾರಿ ಮಾದರಿಯ ಡೆಂಘೀ ಜ್ವರ ಪತ್ತೆಯಾಗಿರುವ ಹಿನ್ನೆಲೆ ಜ್ವರ ಪತ್ತೆಗೆ ಒತ್ತು ನೀಡಿ ಸಹಾಯವಾಣಿ ಆರಂಭಿಸಿ, ಅಗತ್ಯ ಪ್ರಮಾಣದ ಔಷಧ, ಟೆಸ್ಟ್ ಕಿಟ್ ಸಂಗ್ರಹಿಸಿ ಎಂದು ಕರ್ನಾಟಕ ಸೇರಿದಂತೆ ಹನ್ನೊಂದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಅಲ್ಲದೇ ಕೋವಿಡ್ ಪಾಸಿಟಿವಿಟಿ ದರ ಕೂಡಾ ಹೆಚ್ಚಾಗುತ್ತಿರುವದ ಗಮನಕ್ಕೆ ಬರುತ್ತಿರುವ ಹಿನ್ನೆಲೆ ಮುಂಬರುವ ಹಬ್ಬದ ದಿನಗಳಲ್ಲಿ ಜನರು ಗುಂಪುಗೂಡದಂತೆ ಎಚ್ಚರಿಕೆ ವಹಿಸಬೇಕು ಎಂದೂ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ.
"
ಡೆಂಘೀ-2 ಬಗ್ಗೆ ಎಚ್ಚರ:
ಕೋವಿಡ್ ಕುರಿತ ಉನ್ನತ ಮಟ್ಟದ ಸಮಿತಿಯು ದೇಶದಲ್ಲಿನ ಡೆಂಘೀ ಪರಿಸ್ಥಿತಿಯ ಬಗ್ಗೆಯೂ ಪರಾಮರ್ಶೆ ನಡೆಸಿದೆ.
ಈ ವೇಳೆ ಸೆರೋಟೈಪ್-2 ಡೆಂಘೀಯಿಂದ ಎದುರಾಗಬಹುದಾದ ಹೊಸ ಸವಾಲು ಎದುರಿಸಲು ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ರಚಿಸಬೇಕು. ಕಾರಣ, ಇದು ಇತರೆ ಕಾಯಿಲೆಗಳಿಗೆ ಹೋಲಿಸಿದರೆ ಹೆಚ್ಚು ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳು ಸಹಾಯವಾಣಿ, ಮನೆಯಲ್ಲಿ ರೋಗ ನಿಯಂತ್ರಣ, ಕಾಯಿಲೆ ಮೂಲ ನಿರ್ವಹಣೆ ಮತ್ತು ಡೆಂಘೀ ಲಕ್ಷಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಅಭಿಯಾನ ಆರಂಭಿಸಬೇಕು ಎಂದು ಸೂಚಿಸಿದೆ.
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕೇರಳ, ಉತ್ತರಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಹೊಸ ಮಾದರಿಯ ಡೆಂಘೀ ಪತ್ತೆಯಾಗಿದೆ.
ಜನರ ನಿಯಂತ್ರಿಸಿ:
ಇದೇ ವೇಳೆ ದೇಶದ 15 ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿರುವುದು ಕಳವಳಕಾರಿ ವಿಷಯ. ಈ ಪೈಕಿ 34 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ.10ಕ್ಕಿಂತ ಹೆಚ್ಚಿದೆ. ಈ ರಾಜ್ಯಗಳು ಸೋಂಕು ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಮುಂದಿನ ದಿನಗಳಲ್ಲಿ ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜನರ ಗುಂಪುಗೂಡುವಿಕೆ ನಿಯಂತ್ರಿಸಬೇಕು. ಇಕ್ಕಟ್ಟಾದ ಜಾಗಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು.
ಹಲವು ವಿದೇಶಗಳಲ್ಲಿ ನಾವು ಈಗಾಗಲೇ ಹಲವು ಬಾರಿ ಕೋವಿಡ್ ಗರಿಷ್ಠ ಮುಟ್ಟಿರುವ ಉದಾಹರಣೆ ನೋಡಿದ್ದೇವೆ. ಹೀಗಾಗಿ ಹೊಸ ಪ್ರಕರಣಗಳ ದಿಢೀರ್ ಏರಿಕೆಯನ್ನು ಸೂಕ್ತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಮೂಲಸೌಕರ್ಯ ಹೆಚ್ಚಿಸಿಕೊಳ್ಳಬೇಕು ಮತ್ತು ಅಗತ್ಯ ಪ್ರಮಾಣದ ಔಷಧಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಸೂಚಿಸಿದೆ.
ಮಾಲ್, ಸ್ಥಳೀಯ ಮಾರುಕಟ್ಟೆ, ಪ್ರಾರ್ಥನಾ ಮಂದಿರಗಳಲ್ಲಿ ಹಾಲಿ ಜಾರಿಯಲ್ಲಿರುವ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ದೈನಂದಿನ ಆಧಾರದಲ್ಲಿ ನಗರಗಳು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಕರಣಗಳ ಏರಿಳಿಕೆಯ ಮಟ್ಟದ ಮೇಲೆ ಗಮನ ಇಡಬೇಕು. ಏರಿಕೆಯ ಯಾವುದೇ ಮುನ್ಸೂಚನೆ ಸಿಗುತ್ತಲೇ ಎಚ್ಚೆತ್ತು ಅಗತ್ಯ ನಿಯಂತ್ರಣಾ ಕ್ರಮ ಜಾರಿಗೊಳಿಸಬೇಕು ಎಂದು ಸೂಚಿಸಲಾಗಿದೆ.
ಏನಿದು ಸೆರೋಟೈಪ್-2?
ಡೆಂಘೀ ಎಂಬುದು ಸೊಳ್ಳೆಗಳಿಂದ ಹರಡುವ ವ್ಯಾಧಿ. ಇದರಲ್ಲಿ ಸೆರೋಟೈಪ್ 2 ಡೆಂಘೀ ಎಂಬುದು ವೈರಾಣುವಿನ ರೂಪಾಂತರಿ. ಇದಕ್ಕೆ ಡಿಇಎನ್ವಿ-2 ಅಥವಾ ಡಿ-2 ಡೆಂಘೀ ಎಂದೂ ಕರೆಯುತ್ತಾರೆ.
ಅಪಾಯ ಏನು?
ಸೆರೋಟೈಪ್-2 ಡೆಂಘೀ ತಗುಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸದಿದ್ದರೆ ಅತಿಯಾದ ತಲೆನೋವು, ಜ್ವರ, ವಾಂತಿ, ಆಯಾಸ, ಆಂತರಿಕ ರಕ್ತಸ್ರಾವ ಆಗುವ ಭೀತಿ ಇರುತ್ತದೆ. ಆಂತರಿಕ ರಕ್ತಸ್ರಾವದಿಂದ ರಕ್ತದೊತ್ತಡ ಕುಸಿದು ರೋಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ.
ಚಿಕಿತ್ಸೆ ಏನು?
ಡೆಂಘೀಗೆ ನಿರ್ದಿಷ್ಟಚಿಕಿತ್ಸೆ ಇಲ್ಲ ಹಾಗೂ ಲಸಿಕೆ ಕೂಡ ಇಲ್ಲ. ಡೆಂಘೀ-2 ತಗುಲಿದರೆ ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಸೊಳ್ಳೆ ನಿರ್ಮೂಲನೆ, ಸೊಳ್ಳೆ ಪರದೆ ಬಳಕೆಯಿಂದ ಸೋಂಕು ನಿಯಂತ್ರಿಸಬಹುದು.
ಎಲ್ಲೆಲ್ಲಿ ಪತ್ತೆ?
ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಕೇರಳ, ಉತ್ತರಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ಹೊಸ ಮಾದರಿಯ ಡೆಂಘೀ ಪತ್ತೆಯಾಗಿದೆ.
ನವದೆಹಲಿ: ದೇಶದಲ್ಲಿ ಹೆಚ್ಚು ಅಪಾಯಕಾರಿ ಮಾದರಿಯ ಡೆಂಘೀ ಜ್ವರ (ಸೆರೋಟೈಪ್-2 ಡೆಂಘೀ) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜ್ವರ ಪತ್ತೆಗೆ ಒತ್ತು ನೀಡಿ, ಸಹಾಯವಾಣಿ ಆರಂಭಿಸಿ, ಅಗತ್ಯ ಪ್ರಮಾಣದ ಔಷಧ, ಟೆಸ್ಟ್ ಕಿಟ್ ಸಂಗ್ರಹಿಸಿ ಎಂದು ಕರ್ನಾಟಕ ಸೇರಿದಂತೆ 11 ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಅಲ್ಲದೆ ಕೋವಿಡ್ ಪಾಸಿಟಿವಿಟಿ ದರ ಕೂಡ ಹೆಚ್ಚಾಗುತ್ತಿರುವುದು ಗಮನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬರುವ ಹಬ್ಬದ ದಿನಗಳಲ್ಲಿ ಜನರು ಗುಂಪುಗೂಡದಂತೆ ಎಚ್ಚರಿಕೆ ವಹಿಸಬೇಕು ಎಂದೂ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ