Corona Crisis: ಪರಿಸ್ಥಿತಿ ಬದಲಾಗಬಹುದು, ಆಸ್ಪತ್ರೆ ದಾಖಲು ದರ ಏರಿಕೆ?: ಕೇಂದ್ರ

By Kannadaprabha News  |  First Published Jan 11, 2022, 6:14 AM IST

* ಸೋಂಕಿತರ ಆಸ್ಪತ್ರೆ ದಾಖಲೀಕರಣ ಏರಬಹುದು: ಕೇಂದ್ರ

* ಸದ್ಯ ಸೋಂಕಿತರ ಆಸ್ಪತ್ರೆ ದಾಖಲಾತಿ ಪ್ರಮಾಣ ಶೇ.5-10

* ಮುಂದೆ ಪರಿಸ್ಥಿತಿ ಬದಲಾಗಬಹುದು: ರಾಜ್ಯಗಳಿಗೆ ಎಚ್ಚರಿಕೆ

* ಪ್ರತಿ 100 ಡೆಲ್ಟಾಕೇಸ್‌ಗೆ 400-500 ಒಮಿಕ್ರೋನ್‌ ಕೇಸು ಬರಬಹುದು

* ಹೋಂ ಐಸೋಲೇಶನ್‌, ಆಸ್ಪತ್ರೆಯ ರೋಗಿಗಳ ಮೇಲೆ ನಿಗಾ ಇಡಿ


ನವದೆಹಲಿ(ಜ.11): ಕೊರೋನಾ 3ನೇ ಅಲೆ ವೇಳೆ ದಾಖಲಾಗುತ್ತಿರುವ ಪ್ರಕರಣಗಳ ಪೈಕಿ ಶೇ.5ರಿಂದ 10ರಷ್ಟುಮಾತ್ರ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹಾಗಂತ ಈ ಸಲದ ಸೋಂಕು ತುಂಬಾ ಸೌಮ್ಯ ಲಕ್ಷಣಗಳನ್ನು ಹೊಂದಿದೆ ಎಂದರ್ಥವಲ್ಲ. ಮುಂದೆ ಪರಿಸ್ಥಿತಿ ಬದಲಾಗಲೂಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಹಿನ್ನೆಲೆಯಲ್ಲಿ ಸೌಮ್ಯ ರೋಗಲಕ್ಷಣ ಹೊಂದಿದ್ದೇವೆ ಎಂಬ ಕಾರಣ ನೀಡಿ ಹೋಂ ಐಸೋಲೇಷನ್‌ನಲ್ಲಿ ಇರುವವರ ಮೇಲೆ ನಿಗಾ ಇರಿಸಬೇಕು. ಜತೆಗೆ ಆಸ್ಪತ್ರೆಯಲ್ಲಿ ಇರುವವರ ಮೇಲೂ ನಿಗಾ ಇಡಬೇಕು ಎಂದು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೋಮವಾರ ಸೂಚನೆ ನೀಡಿದೆ.

Tap to resize

Latest Videos

undefined

ಮೊದಲ ಅಲೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಶೇ.20ರಿಂದ 23ರಷ್ಟಿತ್ತು. ಆದರೆ, ಮುಂದಿನ ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಆಸ್ಪತ್ರೆ ದಾಖಲೀಕರಣ ಹೆಚ್ಚಬಹುದು ಎಂದು ಎಚ್ಚರಿಸಿದೆ.

ಡೆಲ್ಟಾ, ಒಮಿಕ್ರೋನ್‌ ಜಂಟಿ ಅಬ್ಬರ:

ದೇಶದಲ್ಲಿ ಈಗ ಒಮಿಕ್ರೋನ್‌ ರೂಪಾಂತರಿ ಸದ್ದು ಆರಂಭಿಸಿದೆ. ಇದರ ಜತೆ ಡೆಲ್ಟಾರೂಪಾಂತರಿ ಕೂಡ ಇನ್ನೂ ಪ್ರಸ್ತುತವಿದೆ. ಹೀಗಾಗಿ ಆರೋಗ್ಯ ಮೂಲಸೌಕರ್ಯ ಹೆಚ್ಚಳದತ್ತ ಹಾಗೂ ಕೋವಿಡ್‌ ನಿರ್ವಹಣೆಯತ್ತ ಗಮನ ನೀಡಬೇಕು ಎಂದು ರಾಜ್ಯಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಸೂಚಿಸಿದ್ದಾರೆ.

‘ಈಗಿನ ಒಟ್ಟು ಪ್ರಕರಣಗಳಲ್ಲಿ ಶೇ.5ರಿಂದ 10ರಷ್ಟುಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೆ ಇದಿನ್ನೂ ಸೋಂಕಿನ 3ನೇ ಅಲೆಯ ಆರಂಭಿಕ ಹಂತ. ಪರಿಸ್ಥಿತಿ ಈಗ ಉಗಮವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಸ್ಪತ್ರೆಯ ದಾಖಲೀಕರಣ ಹೆಚ್ಚಲೂಬಹುದು. ಆದ್ದರಿಂದ ರಾಜ್ಯಗಳು ಪರಿಸ್ಥಿತಿ, ಸಕ್ರಿಯ ಪ್ರಕರಣಗಳು, ಹೋಮ್‌ ಐಸೋಲೇಶನ್‌ನಲ್ಲಿ ಇರುವವರು, ಆಸ್ಪತ್ರೆಗೆ ದಾಖಲಾದವರು, ಐಸಿಯ ಬೆಡ್‌, ಆಕ್ಸಿಜನ್‌ ಬೆಡ್‌, ವೆಂಟಿಲೇಟರ್‌ ವ್ಯವಸ್ಥೆ ಮೇಲೆ ದೈನಂದಿನ ನಿಗಾ ಇಡಬೇಕು. ಮುಂದೆ ಪರಿಸ್ಥಿತಿ ಹೆಚ್ಚೂ ಕಡಿಮೆಯಾದರೆ ಅಗತ್ಯಕ್ಕೆ ತಕ್ಕಂತೆ ಆರೋಗ್ಯ ಮೂಲಸೌಕರ್ಯ ಮಾರ್ಪಡಿಸಲು ಇದು ಸಹಾಯ ಮಾಡಲಿದೆ’ ಎಂದು ಅವರು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಕೋವಿಡ್‌ ಬೆಡ್‌ಗಳನ್ನು ಮೀಸಲಿರಿಸಲು ರಾಜ್ಯ ಸರ್ಕಾರಗಳು ಕ್ರಮ ಜರುಗಿಸಬೇಕು. ಚಿಕಿತ್ಸಾ ಶುಲ್ಕ ಕೈಗೆಟಕುವ ದರಗಳಲ್ಲಿ ಇರಬೇಕು. ಹೆಚ್ಚು ಶುಲ್ಕ ವಿಧಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಅಗತ್ಯ ಬಿದ್ದರೆ ನಿವೃತ್ತ ವೈದ್ಯರು ಹಾಗೂ ಎಂಬಿಬಿಎಸ್‌ ವಿದ್ಯಾರ್ಥಿಗಳನ್ನೂ ಕೋವಿಡ್‌ ಕರ್ತವ್ಯಕ್ಕೆ ಬಳಸಿಕೊಳ್ಳಬೇಕು. ಜಿಲ್ಲಾಸ್ಪತ್ರೆಗಳಲ್ಲಿ ಇ-ಸಂಜೀವಿನಿ ಟೆಲಿಕನ್ಸಲ್ಟೇಶನ್‌ ವ್ಯವಸ್ಥೆ ಇರಬೇಕು ಎಂದು ಭೂಷಣ್‌ ತಾಕೀತು ಮಾಡಿದ್ದಾರೆ.

click me!