* ಮೂಕ ಪಕ್ಷಿಗಳಿಗಾಗಿ ದೇಣಿಗೆ ಸಂಗ್ರಹ
* ಪಾರಿವಾಳಗಳೂ ಇಲ್ಲಿ ಕೋಟ್ಯಧಿಪತಿಗಳು!
* ಪಾರಿವಾಳ ಹೆಸರಲ್ಲಿ ಅಂಗಡಿ, ಲಕ್ಷ ಲಕ್ಷ ಹಣ ಠೇವಣಿ!
ನವದೆಹಲಿ(ಜ.11): ಮನುಷ್ಯರಲ್ಲಿ ಕೋಟ್ಯಧಿಪತಿಗಳು, ಲಕ್ಷಾಧಿಪತಿಗಳನ್ನೂ ನೋಡಿರುತ್ತೇವೆ. ಆದರೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಸಣ್ಣ ನಗರ ಜಸ್ನಾಗರ್‌ನಲ್ಲಿ ಕೋಟ್ಯಧಿಪತಿ ಪಾರಿವಾಳಗಳೂ ಇವೆ. ಹೌದು ಇಲ್ಲಿ ಪಾರಿವಾಳಗಳು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಹೊಂದಿವೆ. ಪಾರಿವಾಳಗಳ ಒಡೆತನದಲ್ಲಿ 27 ಅಂಗಡಿ, 126 ಬಿಘಾ ಭೂಮಿ ಇದೆ. 30 ಲಕ್ಷ ನಗದು ಠೇವಣಿ ಕೂಡ ಇದೆ. ಅಷ್ಟೇ ಅಲ್ಲದೆ ಈ ಪಾರಿವಾಳಗಳ ಹೆಸರಲ್ಲಿ 400 ಗೋಶಾಲೆಗಳನ್ನು ನಡೆಸಲಾಗುತ್ತಿದೆ.
ಈ ಬಗ್ಗೆ ಪ್ರಭುಸಿಂಗ್ ರಾಜಪುರೋಹಿತ್ ಎಂಬವರು ಪ್ರತಿಕ್ರಿಯಿಸಿದ್ದು, 4 ದಶಕಗಳ ಹಿಂದೆ ಕೈಗಾರಿಕೋದ್ಯಮಿಯೊಬ್ಬರು ಕಬೂತರನ್(ಪಾರಿವಾಳ) ಟ್ರಸ್ಟ್ ಅನ್ನು ಸ್ಥಾಪಿಸಿದರು. ಮೂಕ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದರು. ಇಂಥದ್ದೊಂದು ಯೋಚನೆ ಅನುಷ್ಠಾನಕ್ಕೆ ಬರುತ್ತಿದ್ದಂತೆಯೇ ಜನರು ದೇಣಿಗೆ ನೀಡಲು ಆರಂಭಿಸಿದರು.
ಬೃಹತ್ ದೇಣಿಗೆಯಿಂದ ಪಕ್ಷಿಗಳಿಗೆ ನಿಯಮಿತವಾಗಿ ಧಾನ್ಯ ಮತ್ತು ನೀರು ಸಿಗುವಂತೆ ನೋಡಿಕೊಳ್ಳಲು ಸುಮಾರು 27 ಅಂಗಡಿಗಳನ್ನು ನಿರ್ಮಿಸಲಾಗಿದೆ. ಈ ಅಂಗಡಿಗಳು ತಿಂಗಳಿಗೆ 80,000 ರು. ಬಾಡಿಗೆ ಪಡೆಯುತ್ತಿವೆ. ಅಲ್ಲದೆ, ಭೂಮಿಯನ್ನು ಬಾಡಿಗೆಗೆ ನೀಡಲಾಗುತ್ತಿದೆ. ಇದರಿಂದ ಟ್ರಸ್ಟ್‌ಗೆ ಸಾಕಷ್ಟುಆದಾಯ ಹರಿದುಬರುತ್ತಿದೆ. ಜೊತೆಗೆ ಪಾರಿವಾಳಗಳ ಒಡೆತನದ ಈ ಜಮೀನಿನಲ್ಲಿ 500 ಹಸುಗಳ ಗೋಶಾಲೆ ನಡೆಸಲಾಗುತ್ತಿದೆ. ಇಲ್ಲಿ ಗೋವುಗಳಿಗೆ ಎಲ್ಲಾ ರೀತಿಯ ವೈದ್ಯಕೀಯ ವ್ಯವಸ್ಥೆಯನ್ನೂ ಮಾಡಲಾಗಿದೆ.