Corbevax Vaccine: 5 ಕೋಟಿ ಡೋಸ್‌ ಕೋರ್ಬೆವ್ಯಾಕ್ಸ್‌ ಲಸಿಕೆ ಕೇಂದ್ರದಿಂದ ಖರೀದಿ

By Kannadaprabha News  |  First Published Feb 6, 2022, 11:05 AM IST

ಹೈದ್ರಾಬಾದ್‌ ಮೂಲದ ಬಯೋಲಾಜಿಕಲ್‌ ಇ ಕಂಪನಿ ಅಭಿವೃದ್ಧಿಪಡಿಸಿರುವ ಕೋರ್ಬೆವ್ಯಾಕ್ಸ್‌ ಕೋವಿಡ್‌ ಲಸಿಕೆಯ 5 ಕೋಟಿ ಡೋಸ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


ನವದೆಹಲಿ (ಫೆ.06): ಹೈದ್ರಾಬಾದ್‌ ಮೂಲದ ಬಯೋಲಾಜಿಕಲ್‌ ಇ (Bio E) ಕಂಪನಿ ಅಭಿವೃದ್ಧಿಪಡಿಸಿರುವ ಕೋರ್ಬೆವ್ಯಾಕ್ಸ್‌ ಕೋವಿಡ್‌ ಲಸಿಕೆಯ (Corbevax Vaccine) 5 ಕೋಟಿ ಡೋಸ್‌ಗಳನ್ನು ಖರೀದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ತೆರಿಗೆ ಹೊರತುಪಡಿಸಿ ಪ್ರತಿ ಡೋಸ್‌ಗೆ ತಲಾ 145 ರು. ನಂತೆ 5 ಕೋಟಿ ಡೋಸ್‌ ಲಸಿಕೆ ಪೂರೈಸಲು ಕಳೆದ ತಿಂಗಳ ಅಂತ್ಯದಲ್ಲಿ ಬೇಡಿಕೆ ಸಲ್ಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದು 2 ಡೋಸ್‌ನ ಮಾದರಿಯ ಲಸಿಕೆಯಾಗಿದ್ದು, 28 ದಿನಗಳ ಅಂತರದಲ್ಲಿ ಎರಡು ಡೋಸ್‌ ನೀಡಲಾಗುವುದು. ಇದನ್ನು 2ರಿಂದ 8 ಡಿ.ಸೆ.ಉಷ್ಣಾಂಶದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ಇದನ್ನು ಹಿರಿಯರಿಗೆ ನೀಡಬೇಕೋ? ಅಥವಾ ಮಕ್ಕಳಿಗೆ ನೀಡಬೇಕೋ ಎಂಬುದನ್ನು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಫೆಬ್ರುವರಿ ತಿಂಗಳಲ್ಲೇ ಲಸಿಕೆ ಸರ್ಕಾರಕ್ಕೆ ಲಭ್ಯವಾಗಲಿದ್ದು, ಇದನ್ನು ಯಾರಿಗೆ ನೀಡಲಾಗುವುದು ಎಂಬುದರ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

Tap to resize

Latest Videos

undefined

ಸದ್ಯ ದೇಶದಲ್ಲಿ 60 ವರ್ಷದ ದಾಟಿದ ಎಲ್ಲಾ ವ್ಯಕ್ತಿಗಳಿಗೆ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಮುಂಜಾಗ್ರತಾ ಡೋಸ್‌ ನೀಡಲಾಗುತ್ತಿದ್ದು, ಇದನ್ನು ಇತರೆ ವಯೋವರ್ಗಕ್ಕೂ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಆ ವೇಳೆ ಕೋರ್ಬೆವ್ಯಾಕ್ಸ್‌ ಲಸಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

Covid Crisis: ರಾಜ್ಯದಲ್ಲಿ 15,000ಕ್ಕಿಂತ ಕೆಳಗಿಳಿದ ಕೋವಿಡ್‌ ಕೇಸ್‌..!

ಕೋರ್ಬಿವ್ಯಾಕ್ಸ್‌ ಶೇ.90 ಪರಿಣಾಮಕಾರಿ: ಹೈದ್ರಾಬಾದ್ ಮೂಲದ ಬಯೋಲಾಜಿಕಲ್‌ ಇ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ‘ಕೋರ್ಬಿವ್ಯಾಕ್ಸ್‌’ ಶೇ.90ರಷ್ಟು ಪರಿಣಾಮಕಾರಿಯಾಗಿರುವ ನಿರೀಕ್ಷೆ ಇದ್ದು, ಕೋವಿಡ್‌ ವಿರುದ್ಧದ ಭಾರತದ ಹೋರಾಟದಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವ ಭರವಸೆ ಇದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ಕುರಿತು ಮಹಿತಿ ನೀಡಿರುವ ಕೋವಿಡ್‌ ಕುರಿತ ಕೇಂದ್ರ ಸರ್ಕಾರದ ಕಾರ್ಯಪಡೆ ಅಧ್ಯಕ್ಷ ಎನ್‌.ಕೆ.ಅರೋರಾ, ‘ಅಮೆರಿಕದ ನೋವಾವ್ಯಾಕ್ಸ್‌ ಅಭಿವೃದ್ಧಿಪಡಿಸಿರುವ ಲಸಿಕೆ ಶೇ.90ರಷ್ಟುಪರಿಣಾಮಕಾರಿ ಎಂದು ಇತ್ತೀಚೆಗೆ ಸಾಬೀತಾಗಿದೆ. ಕೋರ್ಬಿವ್ಯಾಕ್ಸ್‌ ಕೂಡಾ ಅದೇ ರೀತಿಯಲ್ಲಿ ಅಭಿವೃದ್ಧಿಗೊಂಡ ಲಸಿಕೆಯಾಗಿದ್ದು, ಶೀಘ್ರವೇ 3ನೇ ಹಂತದ ಪ್ರಯೋಗಕ್ಕೆ ಒಳಪಡಲಿದೆ. 

ದೇಶದ ಅತೀ ಅಗ್ಗದ ಲಸಿಕೆ ಹೆಗ್ಗಳಿಕೆ ಸಾಧ್ಯತೆ: ಸ್ಥಳೀಯ ‘ಬಯೋಲಾಜಿಕಲ್‌ ಇ’ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ಕೋರ್ಬಿವ್ಯಾಕ್ಸ್‌, ದೇಶದಲ್ಲೇ ಅತ್ಯಂತ ಅಗ್ಗದ ದರದ ಲಸಿಕೆ ಎಂಬ ಹಿರಿಮೆಗೆ ಪಾತ್ರವಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ಸಂಸ್ಥೆ ಒಂದು ಡೋಸ್‌ಗೆ 250 ರು. ದರ ನಿಗದಿಪಡಿಸುವ ಸಾಧ್ಯತೆ ಇದೆ. ಇದು 2 ಡೋಸ್‌ ಪಡೆಯಬೇಕಾದ ಲಸಿಕೆ ಆಗಿರುವ ಕಾರಣ, 2 ಡೋಸ್‌ಗೆ ಗರಿಷ್ಠ 500 ರು. ದರ ಆಗಲಿದೆ. ಹೀಗಾಗಿ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ಗೆ ಹೋಲಿಸಿದರೆ ಕೋರ್ಬಿವ್ಯಾಕ್ಸ್‌ ದೇಶದಲ್ಲೇ ಅತಿ ಅಗ್ಗದ ಲಸಿಕೆ ಆಗಿರುವ ಸಾಧ್ಯತೆ ಇದೆ.

Covid Vaccination: ಮಕ್ಕಳ ಲಸಿಕೆಯಲ್ಲಿ ಗದಗ 100% ಸಾಧನೆ: ಡಾ.ಸುಧಾಕರ್‌ ಮೆಚ್ಚುಗೆ

ಸದ್ಯ ಸೀರಂ ಸಂಸ್ಥೆ ಕೋವಿಶೀಲ್ಡ್‌ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 300 ರು. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರು.ನಂತೆ ಮಾರಾಟ ಮಾಡುತ್ತಿದೆ. ಇನ್ನು ಭಾರತ್‌ ಬಯೋಟೆಕ್‌ ಸಂಸ್ಥೆ ತನ್ನ ಕೋವ್ಯಾಕ್ಸಿನ್‌ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 400 ರು. ಮತ್ತು ಖಾಸಗಿ ಆಸ್ಪತ್ರೆಗಳಿಗೆ 1200 ರು.ನಂತೆ ಮಾರಾಟ ಮಾಡುತ್ತಿದೆ. ಇನ್ನು ರಷ್ಯಾದ ಸ್ಪುಟ್ನಿಕ್‌ ಲಸಿಕೆಗೆ ಡಾ. ರೆಡ್ಡೀಸ್‌ ಸಂಸ್ಥೆ 995 ರು. ದರ ನಿಗದಿಪಡಿಸಿದೆ.

ಕೋರ್ಬಿವ್ಯಾಕ್ಸ್‌ ಸಂಸ್ಥೆಯ ಲಸಿಕೆ ಈಗಾಗಲೇ 2 ಸುತ್ತಿನ ಕ್ಲಿನಿಕಲ್‌ ಟ್ರಯಲ್‌ ನಡೆಸಿದ್ದು, ಅದರಲ್ಲಿ ಉತ್ತಮ ಫಲಿತಾಂಶ ಬಂದಿದೆ. ಮೂರನೇ ಹಂತದ ಪ್ರಯೋಗ ನಡೆಯುತ್ತಿದ್ದು, ಶೀಘ್ರವೇ ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸುವ ಇರಾದೆಯಲ್ಲಿದೆ. ಸಂಸ್ಥೆ ಮಾಸಿಕ 8 ಕೋಟಿ ಡೋಸ್‌ ಉತ್ಪಾದನೆಯ ಸಾಮರ್ಥ್ಯ ಹೊಂದಿದ್ದು, ಕೇಂದ್ರ ಸರ್ಕಾರ ಈಗಾಗಲೇ 30 ಕೋಟಿ ಡೋಸ್‌ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ 1500 ಕೋಟಿ ರು. ಮುಂಗಡ ಪಾವತಿಸಲು ನಿರ್ಧರಿಸಿದೆ.

click me!