E-Rickshaw: ಚೀನಿ ಆ್ಯಪ್‌ ಬಳಸಿ ದೇಶದ ಎಲೆಕ್ಟ್ರಿಕ್‌ ರಿಕ್ಷಾಗಳು ಹ್ಯಾಕ್‌! ನಡುರಸ್ತೆಯಲ್ಲೇ ನಿಲ್ಲುತ್ತಿವೆ ಇ-ರಿಕ್ಷಾ, 7 ಬ್ಯಾಟರಿ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಕೊಕ್‌

Kannadaprabha News   | Kannada Prabha
Published : Jul 04, 2026, 05:40 AM IST
Centre order removal of 7 Chini apps in play store used to e rikshaw in delh

ಸಾರಾಂಶ

ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಚೀನಾ ಮೂಲದ ಮೊಬೈಲ್ ಆ್ಯಪ್‌ಗಳಿಂದಾಗಿ ಇ-ರಿಕ್ಷಾಗಳು ಹಠಾತ್ತನೆ ನಿಲ್ಲುತ್ತಿವೆ. ಬ್ಲೂಟೂತ್ ಮೂಲಕ ಬ್ಯಾಟರಿಗಳನ್ನು ಹ್ಯಾಕ್ ಮಾಡಲಾಗುತ್ತಿದ್ದು, ಈ ಸೈಬರ್ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 7 ಚೀನೀ ಬ್ಯಾಟರಿ ನಿರ್ವಹಣಾ ಆ್ಯಪ್ಸ್ ನಿಷೇಧಿಸಿದೆ.

ನವದೆಹಲಿ (ಜು.3): ಚೀನಾ ಮೂಲದ ಮೊಬೈಲ್‌ ಆ್ಯಪ್‌ನೊಂದಿಗೆ ಸಂಪರ್ಕಿತ ಎಲೆಕ್ಟ್ರಿಕ್‌ ರಿಕ್ಷಾಗಳು ಮಾರ್ಗ ಮಧ್ಯದಲ್ಲೇ ದಿಢೀರ್‌ ಬಂದ್‌ ಆಗುತ್ತಿರುವ ಪ್ರಕರಣಗಳು ದೆಹಲಿ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆದಿವೆ. ಇದನ್ನು ಹ್ಯಾಕಿಂಗ್‌ ರೀತಿಯ ದಾಳಿ ಎಂದು ಹೇಳಲಾಗಿದ್ದು, ಕೇಂದ್ರ ಸರ್ಕಾರವು 7 ಚೀನಾ ಮೂಲದ ಬ್ಯಾಟರಿ ಮ್ಯಾನೇಜ್‌ಮೆಂಟ್‌ ಆ್ಯಪ್‌ಗಳನ್ನು ಗೂಗಲ್‌ ಹಾಗೂ ಆ್ಯಪಲ್‌ ಪ್ಲೇಸ್ಟೋರ್‌ಗಳಿಂದ ತೆಗೆದುಹಾಕಲು ನಿರ್ದೇಶನ ನೀಡಿದೆ.

ಬ್ಯಾಟರಿ ಮ್ಯಾನೇಜ್‌ಮೆಂಟ್‌ ವ್ಯವಸ್ಥೆ (ಬಿಎಂಎಸ್) ಆ್ಯಪ್‌ ಬಳಸಿ ಇ-ರಿಕ್ಷಾಗಳ ಬ್ಯಾಟರಿ ಬಂದ್‌ ಮಾಡುವ ಕೃತ್ಯಗಳು ಇವಾಗಿವೆ. ಇದರ ಬೆನ್ನಲ್ಲೇ ರಿಕ್ಷಾ ಚಾಲಕರಲ್ಲಿ ಸೈಬರ್‌ ದಾಳಿಯ ಆತಂಕ ಮನೆ ಮಾಡಿದೆ. ಹೀಗಾಗಿ ಕೇಂದ್ರದ ಐಟಿ ಸಚಿವಾಲಯವು ಬಿಎಟಿ-ಬಿಎಂಎಸ್‌, ಲೂಸಿಗಿ, ಇಪೋಚ್‌-ಐ-ಅಯಾನ್‌ ಸೇರಿದಂತೆ 7 ಚೀನಾ ನಿರ್ಮಿತ ಬ್ಯಾಟರಿ ನಿರ್ವಹಣಾ ಆ್ಯಪ್‌ಗಳ ಮೇಲೆ ನಿರ್ಬಂಧ ಹೇರಿದೆ.

ಇ-ರಿಕ್ಷಾ ಹ್ಯಾಕ್ ಮಾಡ್ತಿದೆಯಾ ಚೀನಾ?

ಇ-ರಿಕ್ಷಾಗಳ ಬ್ಯಾಟರಿಯನ್ನು ಬ್ಲೂಟೂತ್‌ ಆಧರಿತ ಮೊಬೈಲ್‌ಗಳ ಮೂಲಕ ನಿರ್ವಹಣೆ ಮಾಡಲು ಅವಕಾಶವಿದೆ. ಆದರೆ ಸೂಕ್ತ ಸುರಕ್ಷತಾ ಸೌಲಭ್ಯಗಳ ಕೊರತೆಯಿಂದಾಗಿ ಅದೀಗ ದುರ್ಬಳಕೆ ಆಗುತ್ತಿದೆ. ಬ್ಲೂಟೂತ್‌ ವ್ಯಾಪ್ತಿಯಲ್ಲಿರುವ ಯಾರು ಬೇಕಿದ್ದರೂ ಈ ಆ್ಯಪ್‌ಗಳನ್ನು ದುರ್ಬಳಕೆ ಮಾಡಿಕೊಂಡು ನಿರ್ದಿಷ್ಟ ಇ-ರಿಕ್ಷಾ ವೇಗವಾಗಿ ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಸ್ಥಗಿತಗೊಳ್ಳುವಂತೆ ಮಾಡಬಹುದಾಗಿದೆ.

ಇ-ರಿಕ್ಷಾ ದಿಢೀರ್ ನಡುರಸ್ತೆಯಲ್ಲಿ ನಿಲ್ಲಲು ಕಾರಣವೇನು?

ಬ್ಯುಸಿ ರಸ್ತೆಗಳಲ್ಲಿ ಸಾಗುತ್ತಿರುವ ಹೊತ್ತಿನಲ್ಲೇ ಇ-ರಿಕ್ಷಾಗಳು ದಿಢೀರ್‌ ಆಗಿ ಬಂದ್‌ ಆಗುತ್ತಿವೆ. ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯೊಂದರಲ್ಲೇ ಕಳೆದೆರಡು ದಿನಗಳಲ್ಲಿ ಇಂಥ 30ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ದಿಲ್ಲಿಯಲ್ಲೂ ಇಂಥ ಘಟನೆಗಳು ನಡೆದಿವೆ. ಉಜ್ಜಯಿನಿಯಲ್ಲಂತೂ ಕೆಲವು ಕಿಡಿಗೇಡಿಗಳು ಬ್ಯಾಟರಿಯನ್ನು ಆ್ಯಪ್‌ ಬಳಸಿ ಹ್ಯಾಕ್‌ ಮಾಡಿದ್ದಾರೆ. ಬಳಿಕ ಅವರೇ ಇ-ರಿಕ್ಷಾ ಚಾಲಕರ ಬಳಿ ಹೋಗಿ, ‘ರಿಪೇರಿ ಮಾಡಿಕೊಡುತ್ತೇವೆ’ ಎಂದು ಸುಳ್ಳು ಹೇಳಿ 200-300 ರು. ಪೀಕಿದ ಘಟನೆಗಳು ನಡೆದಿವೆ.

ಇದೀಗ ಸುರಕ್ಷತಾ ಕ್ರಮಗಳ ಕೊರತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 7 ಚೀನಾದ ಆ್ಯಪ್‌ಗಳನ್ನು ನಿರ್ಬಂಧಿಸಿದೆ.

ಇಂಥ ಘಟನೆಗಳ ಹಿನ್ನೆಲೆಯಲ್ಲಿ ಬಡ ಇ-ರಿಕ್ಷಾ ಚಾಲಕರಲ್ಲಿ ಆತಂಕ ಮನೆ ಮಾಡಿದೆ. ದೆಹಲಿ ಸರ್ಕಾರ ಕೂಡ ಸಾರಿಗೆ ಇಲಾಖೆಗೆ ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದೆ.

ಇ-ರಿಕ್ಷಾ ಸಮಸ್ಯೆ ಏನು?

ವರದಿಗಳ ಪ್ರಕಾರ ಲಿಥಿಯಂ-ಇಯಾನ್‌ ಬ್ಯಾಟರಿಗಳು ಇ-ರಿಕ್ಷಾಗಳಿಗೆ ಬಳಕೆಯಾಗುತ್ತಿದ್ದು, ಇವುಗಳನ್ನು ಬ್ಲೂಟೂತ್‌ ಆಧರಿತ ಬ್ಯಾಟರಿ ಮ್ಯಾನೇಜ್‌ಮೆಂಟ್‌ ಸಿಸ್ಟಂ (ಬಿಎಂಎಸ್‌) ಆ್ಯಪ್‌ ಜತೆಗೆ ಸಂಪರ್ಕಿಸಲಾಗುತ್ತದೆ. ಈ ಮೂಲಕ ಎಷ್ಟು ಬ್ಯಾಟರಿ ಖಾಲಿಯಾಗಿದೆ, ಅದರ ಸ್ಥಿತಿಗತಿ ಏನು ಎಂಬುದನ್ನು ಮೊಬೈಲ್‌ ಮೂಲಕವೇ ಪರಿಶೀಲಿಸಲು ಚಾಲಕರಿಗೆ ಅವಕಾಶ ಸಿಗುತ್ತದೆ. ಆದರೆ, ಕೆಲ ಬ್ಯಾಟರಿ ಸಿಸ್ಟಂಗಳು ಪಾಸ್‌ವರ್ಡ್‌ ಪ್ರೊಟೆಕ್ಷನ್ ಹೊಂದಿರುವುದಿಲ್ಲ. ಅಲ್ಲದೆ, ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಹೊಂದಿಲ್ಲ. ಡೀಲರ್‌ಗಳು ಕೂಡ ಈ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸಿರುವುದಿಲ್ಲ. ಈ ಕಾರಣ ಬ್ಲೂಟೂತ್‌ ರೇಂಜ್‌ ವ್ಯಾಪ್ತಿಯಲ್ಲಿರುವ ಯಾರು ಬೇಕಾದರೂ ಆ ಆ್ಯಪ್‌ ಅನ್ನು ದುರ್ಬಳಕೆ ಮಾಡಿಕೊಂಡು ಬ್ಯಾಟರಿಯನ್ನು ಬಂದ್‌ ಮಾಡಬಹುದಾಗಿದೆ. ಇದರಿಂದ ಮಾರ್ಗ ಮಧ್ಯೆಯೇ ಇ-ರಿಕ್ಷಾ ಸ್ಥಗಿತಗೊಳ್ಳುವ ಆತಂಕ ಇರುತ್ತದೆ. ಆದರೆ ಹಳೆಯ ಲೆಡ್‌ ಆ್ಯಸಿಡ್‌ ಬ್ಯಾಟರಿ ಚಾಲಿತ ಇ-ರಿಕ್ಷಾಗಳಿಗೆ ಈ ಸಮಸ್ಯೆ ಇಲ್ಲ ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Tirupathi Laddu: ತಿರುಪತಿ ಲಡ್ಡು ಮಾರಾಟದಲ್ಲಿ ವಿಶ್ವದಾಖಲೆ: ಒಂದೇ ತಿಂಗಳಲ್ಲಿ 1.26 ಕೋಟಿ ಲಡ್ಡು ಸೇಲ್!
ದಾಳಿ ವೇಳೆ ಸೀಜ್ ಮಾಡಿದ ಖಾಸಗಿ ಜೆಟ್ ಹರಾಜು ಹಾಕಿದ ಇಡಿ, ಕೈಗೆಟುಕವ ದರದಲ್ಲಿ ವಿಮಾನ ಖರೀದಿಗೆ ಅವಕಾಶ