ಬರ ಪರಿಹಾರ ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ: ಸುಪ್ರೀಂ

Published : Dec 11, 2024, 04:55 AM IST
ಬರ ಪರಿಹಾರ ನೀವೇ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ: ಸುಪ್ರೀಂ

ಸಾರಾಂಶ

2023ರ ಬರ ಪರಿಹಾರಕ್ಕಾಗಿ ಕರ್ನಾಟಕ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಸಲಹೆ ನೀಡಿದೆ. ₹18,171 ಕೋಟಿ ಪರಿಹಾರ ಕೋರಿದ ರಾಜ್ಯಕ್ಕೆ ಕೇಂದ್ರ ₹3,819 ಕೋಟಿ ನೀಡಿದೆ.

ನವದೆಹಲಿ (ಡಿ.11): ಬರದಿಂದ ಆಗಿರುವ ನಷ್ಟ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ಕೋರಿ ಕರ್ನಾಟಕ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌, ಸಮಸ್ಯೆಯನ್ನು ನೀವೇ ಮಾತುಕತೆ ನಡೆಸಿ ಪರಿಹರಿಸಿಕೊಳ್ಳಿ ಎಂದು ಮೌಖಿಕವಾಗಿ ಸಲಹೆ ನೀಡಿದೆ.

2023ರಲ್ಲಿ ಬರದಿಂದ ತತ್ತರಿಸಿದ್ದ ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಮಂಗಳವಾರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಬಿ.ಅರ್‌. ಗವಾಯಿ, ಕೆ.ವಿ.ವಿಶ್ವನಾಥನ್‌ ಪೀಠದ ಮುಂದೆ ಈ ಅರ್ಜಿ ವಿಚಾರಣೆ ನಡೆಯಿತು.

ಈ ವೇಳೆ ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಹಾಜರಾಗಿ, ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಮತ್ತಷ್ಟು ಸಮಯಾವಕಾಶ ಬೇಕೆಂದು ಮನವಿ ಮಾಡಿದರು. ಈ ವೇಳೆ ನ್ಯಾಯಪೀಠವು, ‘ನೀವೇ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವುದು ಉತ್ತಮ’ ಎಂದು ಸಲಹೆ ನೀಡಿತು. ಅಲ್ಲದೆ ‘ಎಷ್ಟು ಹಣ ಬಿಡುಗಡೆ ಮಾಡಲಾಗಿದೆ’ ಎಂದು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಕರ್ನಾಟಕ ಪರ ವಕೀಲರು, ‘ ₹18,171 ಕೋಟಿ ಕೇಳಲಾಗಿತ್ತು. ಕೇಂದ್ರ ₹3,819 ಕೋಟಿ ನೀಡಿದೆ’ ಎಂದರು. ಬಳಿಕ ನ್ಯಾಯಪೀಠ ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡಿತು.

ಉಪರಾಷ್ಟ್ರಪತಿ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ಅವಿಶ್ವಾಸ ನಿರ್ಣಯ;ದೇಶದ ಇತಿಹಾಸದಲ್ಲೇ ಮೊದಲು!

2023ರಲ್ಲಿ ಕರ್ನಾಟಕದಲ್ಲಿ ಬರಗಾಲ ತೀವ್ರವಾಗಿತ್ತು. ಇದರಿಂದಾಗಿ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರದಿಂದ ತತ್ತರಿಸಿದ್ದವು. ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿದ್ದವು. ಒಟ್ಟು 48 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ನಾಶವಾಗಿದ್ದವು. ಇದರಿಂದ ಅಂದಾಜು ₹35,162 ಕೋಟಿ ಮೌಲ್ಯದ ಬೆಳೆಗಳು ಹಾಳಾಗಿದ್ದವು ಎಂದು ವಕೀಲ ಡಿ.ಎಲ್‌. ಚಿದಾನಂದ ಮೂಲಕ ನ್ಯಾಯಪೀಠಕ್ಕೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್‌ ಮೂಲಕ ₹18,171 ಕೋಟಿ ಅನುದಾನ ನೀಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಆದರೆ ಕೇಂದ್ರ ಅಲ್ಪ ಹಣ ನೀಡಿ ಸುಮ್ಮನಾಗಿತ್ತು. ಹಲವಾರು ಬಾರಿ ಮನವಿ ಮಾಡಿದರೂ ಕೇಂದ್ರ ಸ್ಪಂದಿಸಿರಲಿಲ್ಲ. ಕೊನೆಗೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟಿತ್ತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ