ವಿಮಾನದಲ್ಲಿ ನೋ ಇಂಟರ್‌ನೆಟ್‌ ಟೆನ್ಷನ್; ಸಿಗಲಿದೆ ವೈಫೈ!

By Kannadaprabha NewsFirst Published Mar 3, 2020, 10:37 AM IST
Highlights

ವಿಮಾನದಲ್ಲೇ ಇನ್ನು ವೈಫೈ!  ಕೇಂದ್ರ ಸರ್ಕಾರದ ಅನುಮೋದನೆ | ಇದರ ಬೆನ್ನಲ್ಲೇ ವಿಸ್ತಾರಾ ಏರ್‌ಲೈನ್ಸ್‌ನಲ್ಲಿ ವೈಫೈ

ನವದೆಹಲಿ (ಮಾ. 03): ವಿಮಾನ ಏರಿದಾಗ ‘ಮೊಬೈಲ್‌ ಸ್ವಿಚ್‌ಆಫ್‌ ಮಾಡಿ’ ಅಥವಾ ‘ಫ್ಲೈಟ್‌ ಮೋಡ್‌ನಲ್ಲಿಡಿ’ ಎಂಬ ಸಂದೇಶ ಬರುವುದು ಮಾಮೂಲು. ಆದರೆ ಇನ್ನು ವಿಮಾನ ಏರಿದಾಗಲೂ ಇಂಟರ್ನೆಟ್‌ ಲಭ್ಯವಾಗಲಿದ್ದು, ಪ್ರಯಾಣಿಕರು ತಮ್ಮ ಮೊಬೈಲ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ವಾಚ್‌ ಹಾಗೂ ಲ್ಯಾಪ್‌ಟಾಪ್‌ನಲ್ಲಿ ತಮಗಿಷ್ಟವಾದ ಜಾಲತಾಣಗಳನ್ನು ನೋಡಬಹುದು.

ಮಾರ್ಚ್ 2 ರಂದು ಕೇಂದ್ರ ಸರ್ಕಾರ ಭಾರತದಲ್ಲಿ ಹಾರಾಡುವ ವಿಮಾನಗಳಲ್ಲಿ ವೈಫೈ ಸೇವೆ ನೀಡಬಹುದು ಎಂದು ಅನುಮತಿ ಕೊಟ್ಟಿದೆ. ‘ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಸ್ಮಾರ್ಟ್‌ವಾಚ್‌, ಇ-ರೀಡರ್‌ ಅಥವಾ ಪಾಯಿಂಟ್‌ ಆಫ್‌ ಸೇಲ್‌ ಯಂತ್ರಗಳು ಫ್ಲೈಟ್‌ ಮೋಡ್‌ ಅಥವಾ ಏರ್‌ಪ್ಲೇನ್‌ ಮೋಡ್‌ನಲ್ಲಿದ್ದಾಗಲೂ ಪ್ರಯಾಣಿಕರು ಅಂತರ್ಜಾಲ ಸೇವೆ ಪಡೆಯಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದರ ಬೆನ್ನಲ್ಲೇ ಟಾಟಾ ಸಹಭಾಗಿತ್ವದ ವಿಸ್ತಾರಾ ಏರ್‌ಲೈನ್ಸ್‌, ವಿಮಾನದಲ್ಲಿ ವೈಫೈ ಸೇವೆ ಒದಗಿಸಲು ಮುಂದಾಗಿದೆ. ಈ ಮೂಲಕ ವಿಮಾನದಲ್ಲಿ ವೈಫೈ ಒದಗಿಸುವ ಮೊದಲ ಕಂಪನಿ ಇದಾಗಲಿದೆ.

ವಿದೇಶಿ ವಿಮಾನಗಳಲ್ಲಿ ವೈಫೈ ಸೌಲಭ್ಯವಿದೆ. ಆದರೆ ಅವು ಭಾರತದ ವಾಯುವಲಯ ಪ್ರವೇಶಿಸಿದರೆ ವೈಫೈ ಕಡಿತ ಮಾಡಬೇಕು ಎಂಬ ನಿಯಮ ಈವರೆಗೂ ಜಾರಿಯಲ್ಲಿತ್ತು.

click me!