
ವೆಲ್ಲಿಂಗ್ಟನ್(ಡಿ.08): ತಮಿಳುನಾಡಿನ ಕೂನೂರಿನಲ್ಲಿ ಸೇನೆಯ Mi-17V5 ಹೆಲಿಕಾಪ್ಟರ್ ಪತನಗೊಂಡಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 14 ಮಂದಿ ವಿಮಾನದಲ್ಲಿದ್ದರು. ಸದ್ಯ ಬಂದ ಮಾಹಿತಿ ಅನ್ವಯ ವಿಮಾನದಲ್ಲಿದ್ದ 14 ಮಂದಿಯಲ್ಲಿ ಸಿಡಿಎಸ್ ಬಿಪಿನ್ ರಾವತ್ ಪತ್ನಿ ಮಧುಲಿಕಾ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆನ್ನಲಾಗಿದೆ. ಸೇನಾ ಮಹಾದಂಡನಾಯಕ ಬಿಪಿನ್ ರಾವತ್ ಚಿಂತಾಜನಕವಾಗಿದ್ದು, ಅವರಿಗೆ ಕೂನೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.
ಹೌದು ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ, ಮಧ್ಯಾಹ್ನ 12.20ಕ್ಕೆ ಪತನಗೊಂಡಿದೆ. ಲ್ಯಾಂಡಿಂಗ್ ಸ್ಥಳದಿಂದ ಕೇವಲ 10 ಕಿಮೀ ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಹದಿಮೂರು ಮಂದಿ ಸಾವನ್ನಪ್ಪಿದ್ದು, ಮೃತರ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿದೆ.
ಹವಾಮಾನ ವೈಪರೀತ್ಯ ಹಿನ್ನೆಲೆ ಇಂಜಿನ್ ನಿಷ್ಕ್ರಿಯಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆಯಾದರೂ, ಭಾರತೀಯ ವಾಯುಸೇನೆ ದುರ್ಘಟನೆಯ ತನಿಖೆಗೆ ಆದೇಶಿಸಿದೆ.
ಎಂಐ-17 ಹೆಲಿಕಾಪ್ಟರ್ ಅನ್ನು ವಿವಿಐಪಿ ಚಲನೆಯಲ್ಲಿ ಬಳಸಲಾಗುತ್ತದೆ
ಸೇನಾ ಅಧಿಕಾರಿಗಳು ಹೋಗುವ ಹೆಲಿಕಾಪ್ಟರ್ ಟ್ವಿನ್ ಇಂಜಿನ್ ಹೊಂದಿದೆ. ಅಪಘಾತ ನಡೆದ ಎಂಐ 17ರಲ್ಲಿ ಪ್ರಧಾನಿ, ರಕ್ಷಣಾ ಸಚಿವರಂತಹ ವಿವಿಐಪಿಗಳೂ ಸವಾರಿ ಮಾಡುತ್ತಾರೆ. ಸೇನೆ ಮತ್ತು ವಾಯುಪಡೆ ಈ ಹೆಲಿಕಾಪ್ಟರ್ ಅನ್ನು ವಿವಿಐಪಿಗಾಗಿ ಬಳಸುತ್ತವೆ. ಇದರಲ್ಲಿ ಎರಡು ಎಂಜಿನ್ ಗಳಿದ್ದು, ಯಾವುದೇ ಸಂದರ್ಭದಲ್ಲೂ ಮತ್ತೊಂದು ಎಂಜಿನ್ ಬಳಸಿ ಸರಿಯಾದ ಜಾಗಕ್ಕೆ ತರಬಹುದು ಎನ್ನಲಾಗಿದೆ.
ಹೆಲಿಕಾಪ್ಟರ್‌ನಲ್ಲಿ ಯಾರೆಲ್ಲಾ ಇದ್ದರು?
ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ಎಸ್ ಲಿಡರ್, ಲೆಫ್ಟಿನೆಂಟ್. ಎ. ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್. ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ. ಸಾಯಿ ತೇಜ, ಹವಾಲ್ದಾರ್ ಸತ್ಪಾಲ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ