
ಸಣ್ಣದೊಂದು ನಿರ್ಲಕ್ಷ್ಯ ಪುಟ್ಟ ಮಗುವಿನ ಜೀವ ಬಲಿ ಪಡೆದಿದೆ. ತಾಯಿಯೊಬ್ಬಳು ತನ್ನ ಪುಟ್ಟ ಮಗುವನ್ನು ಕಿಟಕಿ ಪಕ್ಕವಿದ್ದ ಶೂ ರ್ಯಾಕ್(Shoe Rack) ಮೇಲೆ ಕೂರಿಸಿದ್ದಾಳೆ. ಈ ವೇಳೆ ತಾಯಿ ಅತ್ತಿತ್ತ ನೋಡುವಷ್ಟರಲ್ಲಿ ಮಗು ಪಕ್ಕದ ಕಿಟಕಿ ಏರಿದ್ದು, ಅಲ್ಲಿಂದ ಬ್ಯಾಲೆನ್ಸ್ ತಪ್ಪಿ 12ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ. ಘಟನೆಯಲ್ಲಿ 4 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಘಟನೆಯ ಸಂಪೂರ್ಣ ದೃಶ್ಯ ಮನೆ ಮುಂದಿನ ಸಿಸಿ ಕ್ಯಾಮರಾದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಮುಂಬೈನ ನಯಿಗಾಂವ್ ಬಳಿಯ ನವಕರ್ ಸಿಟಿಯ ಅಪಾರ್ಟ್‌ಮೆಂಟೊಂದರಲ್ಲಿ ನಿನ್ನೆ ರಾತ್ರಿ 8 ಗಂಟೆಗೆ ಈ ದುರಂತ ನಡೆದಿದೆ. 4 ವರ್ಷದ ಅನ್ವಿಕಾ ಪ್ರಜಾಪತಿ ಮೃತಪಟ್ಟ ಬಾಲಕಿ. ಅನ್ವಿಕಾ ಪ್ರಜಾಪತಿ ತಾಯಿ ರಾತ್ರಿ 8 ಗಂಟೆಗೆ ಊಟವಾದ ನಂತರ ಸಣ್ಣ ವಾಕ್‌ಗಾಗಿ ಹೊರಟಿದ್ದಾರೆ. ಈ ವೇಳೆ ಮಗುವು ಅವರಿಗಿಂತ ಮುಂದೆ ಹೋಗಿದೆ. ಈ ವೇಳೆ ಮನೆಯ ಬಾಗಿಲು ಹಾಕಿದ ತಾಯಿ ಮಗುವನ್ನು ಒಂದು ಕಡೆ ಕೂರಿಸುವುದಕ್ಕಾಗಿ ಎತ್ತಿ ಕಿಟಕಿ ಪಕ್ಕದಲ್ಲೇ ಇದ್ದ ಶೂ ರ್ಯಾಕ್ ಮೇಲೆ ಮಗುವನ್ನು ಕೂರಿಸಿದ್ದಾರೆ. ಬಳಿಕ ತಾಯಿ ಪಕ್ಕದಲ್ಲೇ ಮಗುವಿನ ಚಪ್ಪಲು ತೆಗೆದುಕೊಳ್ಳುತ್ತಿರುವಾಗ ಮಗು ಪಕ್ಕದಲ್ಲಿದ್ದ ಕಿಟಿಕಿ ಮೇಲೆ ಹತ್ತಿದ್ದು, ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾಳೆ. ಕೇವಲ ಕೆಲವೇ ನಿಮಿಷಗಳಲ್ಲಿ ಈ ದುರಂತ ಸಂಭವಿಸಿದೆ.
ಮಗು ಕಣ್ಣೆದುರೇ ಕೆಳಗೆ ಬಿದ್ದಿದ್ದನ್ನು ನೋಡಿ ಅಕ್ಕಪಕ್ಕದವರೆಲ್ಲಾ ಮನೆಯಿಂದ ಹೊರಗೆ ಬಂದು ಮಗುವಿನ ರಕ್ಷಣೆಗಾಗಿ ಕೆಳಗೆ ಓಡಿದ್ದಾರೆ. ಕೂಡಲೇ ಮಗುವನ್ನು ಎತ್ತಿಕೊಂಡು ಸಮೀಪದ ಸರ್ ಡಿಎಂ ಪೆಟಿಟ್ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ವೈದ್ಯರು ಮಗು ಸಾವನ್ನಪ್ಪಿದೆ ಎಂದು ಘೋಷಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗು ಅನ್ವಿಕಾಳ ಹಠಾತ್ ಸಾವಿನಿಂದ ಪೋಷಕರು ಆಘಾತಕ್ಕೊಳಗಾಗಿದ್ದಾರೆ.
ವಾಟರ್‌ಪಾರ್ಕ್‌ನಲ್ಲಿ ಅಪ್ಪನ ತೋಳಿನಿಂದ ಬಿದ್ದು ಮಗು ಸಾವು
ಹಾಗೆಯೇ ಮತ್ತೊಂದು ಪ್ರಕರಣದಲ್ಲಿ ವಾಟರ್‌ಪಾರ್ಕ್‌ವೊಂದರಲ್ಲಿ ಅಪ್ಪನ ತೋಳಿನಿಂದ ಬಿದ್ದು ಮಗು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಒಂದೂವರೆ ವರ್ಷದ ಮಗುವಿನ ಜೊತೆ ದಂಪತಿ ವಾಟರ್‌ಪಾರ್ಕ್‌ಗೆ ಹೋಗಿದ್ದು, ಈ ವೇಳೆ ವಾಟರ್‌ಪಾರ್ಕ್‌ನ ಜಾರುಬಂಡಿಯಲ್ಲಿ ಕೆಳಗೆ ಹೋಗುತ್ತಿದ್ದ ವೇಳೆ ಅಪ್ಪನ ಕೈನಿಂದ ಬಿದ್ದು ಮಗು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಕ್ರೊಯೇಷಿಯಾದ ಲೋಪರ್‌ನಲ್ಲಿರುವ ಅಕ್ವಾಗನ್ ವಾಟರ್‌ಪಾರ್ಕ್‌ನಲ್ಲಿ ಈ ದುರಂತ ಸಂಭವಿಸಿದೆ. 21 ತಿಂಗಳ ಜರ್ಮನ್ ಮೂಲದ ಬಾಲಕಿಯೊಬ್ಬಳು ಕೃತಕ ಜಲಪಾತದಿಂದ ಜಾರುಬಂಡಿಯಲ್ಲಿ ಕೆಳಗೆ ಹೋಗುತ್ತಿದ್ದಾಗ ತನ್ನ ತಂದೆಯ ತೋಳುಗಳಿಂದ ಜಾರಿಬಿದ್ದು ಸಾವನ್ನಪ್ಪಿದ್ದಾಳೆ.
ಮಗು ಸುಮಾರು ನಾಲ್ಕು ಮೀಟರ್ ಎತ್ತರದಿಂದ ಕಾಂಕ್ರೀಟ್ ಮೇಲ್ಮೈ ಮೇಲೆ ಬಿದ್ದಿದ್ದು, ಕೂಡಲೇ ಆಕೆಯನ್ನು ವಿಮಾನದ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೆದುಳಿನ ತೀವ್ರ ಗಾಯಗಳಿಂದ ಮಗು ಸಾವನ್ನಪ್ಪಿದೆ.
ಒಟ್ಟಿನಲ್ಲಿ ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಎಷ್ಟು ಜಾಗರೂಕವಾಗಿದ್ದರೂ ಸಾಲದು, ನಡೆಯಲು ಶುರು ಮಾಡಿದ ಮಕ್ಕಳು ಕುಳಿತಲ್ಲಿ ಕುಳಿತುಕೊಳ್ಳುವುದೇ ಇಲ್ಲ, ಒಬ್ಬರು ಸದಾಕಾಲ ಆ ಮಗುವಿನ ಮೇಲೆ ಕಣ್ಣಿಡಬೇಕಾಗುತ್ತದೆ. ಇಲ್ಲದೇ ಹೋದಲ್ಲಿ ಏನಾದರೊಂದು ಅನಾಹುತ ಕಾದಿರುತ್ತದೆ. ಹೀಗಾಗಿ ಪುಟ್ಟ ಮಕ್ಕಳಿರುವ ಪೋಷಕರು ಮಕ್ಕಳ ಬಗ್ಗೆ ಸದಾ ಜಾಗರೂಕರಾಗಿರಬೇಕಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ