ಹಣಕ್ಕಾಗಿ ದೇಶದ ಸಬ್‌ಮರೀನ್‌ ಡೇಟಾ ಲೀಕ್ ಮಾಡಿದ ಕಮಾಂಡರ್‌ ಸೇರಿ ಐವರ ಬಂಧನ

By Kannadaprabha NewsFirst Published Oct 27, 2021, 2:01 AM IST
Highlights

* ಸಬ್‌ಮರೀನ್‌ ಮಾಹಿತಿ ಸೋರಿಕೆ ಆರೋಪ

* ಕಮಾಂಡರ್‌ ಸೇರಿ ಐವರ ಅರೆಸ್ಟ್‌

* ಐವರಿಂದ ಹಣಕ್ಕಾಗಿ ಮಹತ್ವದ ಮಾಹಿತಿಗಳು ಸೋರಿಕೆ
* ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಡದ ಸಿಬಿಐ

ನವದೆಹಲಿ(ಅ. 27) ಭಾರತದ ಭವಿಷ್ಯದ ಜಲಾಂತರ್ಗಾಮಿ ಆಧುನೀಕರಣದ ಯೋಜನೆಗಳ ಕುರಿತ ಮಹತ್ವದ (data leak)ಮಾಹಿತಿಗಳನ್ನು ಅಕ್ರಮ ಹಣಕ್ಕಾಗಿ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ನೌಕಾಪಡೆಯ (Navy) ಕಮಾಂಡರ್‌ ರಾರ‍ಯಂಕ್‌ ಅಧಿಕಾರಿ ಸೇರಿದಂತೆ ಐವರು ಆರೋಪಿಗಳನ್ನು ಸಿಬಿಐ (CBI) ಮಂಗಳವಾರ ಬಂಧಿಸಿದೆ. 

ಮುಂಬೈನಲ್ಲಿರುವ (Mumbai) ಪಶ್ಚಿಮ ನೌಕಾ ಕಮಾಂಡ್‌ನಲ್ಲಿ ಕಮಾಂಡರ್‌ ಆಗಿರುವ ಬಂಧಿತ ಪ್ರಮುಖ ಆರೋಪಿಯು, ಕಿಲೋ ಕ್ಲಾಸ್‌ ಜಲಾಂತರ್ಗಾಮಿ ನೌಕೆಗಳ ಆಧುನಿಕರಣ ಕುರಿತಾದ ಮಹತ್ವದ ಮಾಹಿತಿಗಳನ್ನು ಹಣಕ್ಕಾಗಿ ಮಾರಿಕೊಳ್ಳುವ ಬಗ್ಗೆ ಇಬ್ಬರು ನಿವೃತ್ತ ಅಧಿಕಾರಿಗಳ ಬಳಿ ಚರ್ಚಿಸಿದ್ದಾನೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ, ತ್ವರಿತ ಕಾರ್ಯಾಚರಣೆ ಕೈಗೊಂಡು ಈ ಕೃತ್ಯದಲ್ಲಿ ಭಾಗಿಯಾದ ಇಬ್ಬರು ನಿವೃತ್ತ ನೌಕಾ ಸಿಬ್ಬಂದಿ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಮಾಯಾಂಗನೆ ಮೋಹಕ್ಕೆ ಸಿಲುಕಿ ಮಿಲಿಟರಿ ಮಾಹಿತಿ ಸೋರಿಕೆ ಮಾಡಿದ್ದ

ಕಳೆದ ತಿಂಗಳು ಈ ಬಗ್ಗೆ ತನಿಖೆ ಕೈಗೊಂಡ ಸಿಬಿಐ ಅಧಿಕಾರಿಗಳು ಈವರೆಗೆ ದೆಹಲಿ, ಮುಂಬೈ, ಹೈದರಾಬಾದ್‌ ಮತ್ತು ವಿಶಾಖಪಟ್ಟಣಂ ಸೇರಿದಂತೆ ಇನ್ನಿತರ 19 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ, ಈ ಪ್ರಕರಣ ಸಂಬಂಧ ಮುಖ್ಯವಾದ ದಾಖಲೆಗಳು ಮತ್ತು ಡಿಜಿಟಲ್‌ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದಿದೆ. ಹಣಕ್ಕಾಗಿ ಭಾರತೀಯ ನೌಕಾಪಡೆ ಕುರಿತಾದ ಸೂಕ್ಷ್ಮ ವಿಚಾರಗಳು ಪಟ್ಟಭದ್ರ ಹಿತಾಸಕ್ತಿಯ ವ್ಯಕ್ತಿಗಳಿಗೆ ಹಸ್ತಾಂತರವಾಗಿದೆಯೇ ಎಂಬ ಬಗ್ಗೆ ವಿಧಿ-ವಿಜ್ಞಾನಗಳ ಮುಖಾಂತರ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಬಂಧಿತರ ಜತೆ ನಿರಂತರ ಸಂಪರ್ಕ ಹೊಂದಿರುವ ಹಲವು ಅಧಿಕಾರಿಗಳು ಮತ್ತು ನಿವೃತ್ತ ಅಧಿಕಾರಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಮತ್ತೊಂದೆಡೆ ಈ ಆರೋಪದ ಸಂಬಂಧ ನೌಕಾಪಡೆಯು ನೌಕಾ ಸೇನಾಧಿಪತಿ ನೇತೃತ್ವದಲ್ಲಿ ಉನ್ನತ ಹಂತದ ತನಿಖಾ ಸಮಿತಿಯನ್ನು ರಚನೆ ಮಾಡಿದ್ದು, ಮಾಹಿತಿಗಳು ಹೇಗೆ ಸೋರಿಕೆಯಾಗಿದೆ ಮತ್ತು ಆರೋಪಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸೂಚಿಸಲಾಗಿದೆ.

 

click me!