
ಗ್ವಾಲಿಯರ್(ಡಿ.24): ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿದ ಕೃಷಿ ಕಾಯ್ದೆಗಳು ರೈತರ ಪರವಾಗಿಲ್ಲ, ಅವು ಉದ್ಯಮಿಗಳ ಪರವಾಗಿವೆ ಎಂಬ ರೈತ ಸಂಘಟನೆಗಳ ಆರೋಪದ ಬೆನ್ನಲ್ಲೇ, ಇದೇ ಕೃಷಿ ಕಾಯ್ದೆಯಡಿ ವಂಚಕ ವ್ಯಾಪಾರಿಯೊಬ್ಬರ ಆಸ್ತಿ ಹರಾಜು ಹಾಕಿ ರೈತರಿಗೆ ನೆರವು ಅವರ ಆತಂಕ ನಿವಾರಿಸಿದ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ನಡೆದ ಈ ಬೆಳವಣಿಗೆ ಕಾಯ್ದೆ ಕುರಿತ ರೈತರ ಆತಂಕ ನಿವಾರಿಸುವಲ್ಲಿ ಪ್ರಮುಖವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಏನಿದು ಪ್ರಕರಣ?:
ಗ್ವಾಲಿಯರ್ ಸಮೀಪದ ಬಂಜಾ ಎಂಬ ಗ್ರಾಮದ ಬಲರಾಮ್‌ಸಿಂಗ್ ಎಂಬ ವ್ಯಾಪಾರಿ 42 ರೈತರಿಂದ ಸುಮಾರು 40 ಲಕ್ಷ ರು.ಮೌಲ್ಯದ ಭತ್ತ ಖರೀದಿಸಿದ್ದ. ಆದರೆ ಹಣ ಪಾವತಿಗೂ ಮುನ್ನವೇ ಡಿ.3ರಂದು ಊರು ಬಿಟ್ಟು ಪರಾರಿಯಾಗಿದ್ದ. ಈ ಕುರಿತು ಉಪವಿಭಾಗೀಯ ಜಿಲ್ಲಾಧಿಕಾರಿಗಳಿಗೆ 23 ರೈತರು ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಅಂಗೀಕರಿಸಿದ್ದ ನೂತನ ಕೃಷಿ ಕಾಯ್ದೆ ಅನ್ವಯ ವಿವಾದ ಇತ್ಯರ್ಥಕ್ಕೆ ಸಂಧಾನ ಸಮಿತಿ ರಚಿಸಲಾಗಿತ್ತು. ಆದರೆ ಸಂಧಾನ ಸಮಿತಿಯಿಂದ ಪ್ರಕರಣ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಉಪ ವಿಭಾಗೀಯ ಅಧಿಕಾರಿಗಳು ಇತ್ತೀಚೆಗೆ ವ್ಯಾಪಾರಿ ಬಲರಾಮ್‌ಸಿಂಗ್‌ನ ಮನೆ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಜಾಗವನ್ನು ಇತ್ತೀಚೆಗೆ ಜಪ್ತಿ ಮಾಡಿದ್ದರು.
ಇದೀಗ ಜಪ್ತಿ ಮಾಡಿಕೊಂಡ ಪೈಕಿ ಮನೆಯನ್ನು ಗ್ವಾಲಿಯರ್‌ನ ಜಿಲ್ಲಾಡಳಿತ 1.45 ಲಕ್ಷ ರು.ಗಳಿಗೆ ಹರಾಜು ಹಾಕಿ, ಬಂದ ಹಣವನ್ನು ಸಂತ್ರಸ್ತ ರೈತರಿಗೆ ವಿತರಿಸಿದೆ. ಮನೆ ಪಕ್ಕದ ಜಾಗವನ್ನೂ ಹರಾಜು ಹಾಕಿ ಬಂದ ಹಣವನ್ನು ರೈತರಿಗೆ ಹಂಚುವ ಪ್ರಕ್ರಿಯೆಗೆ ಗುರುವಾರ ಚಾಲನೆ ನೀಡಲಾಗುವುದು. ಜೊತೆಗೆ ಪರಾರಿಯಾದ ವ್ಯಾಪಾರಿ ವಿರುದ್ಧ ಸೂಕ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಗ್ವಾಲಿಯರ್‌ನ ಜಿಲ್ಲಾಧಿಕಾರಿ ಕೌಶಲೇಂದ್ರ ವಿಕ್ರಮ್ ಸಿಂಗ್ ತಿಳಿಸಿದ್ದಾರೆ.
ಆಗಿದ್ದೇನು?
- 42 ರೈತರಿಂದ ಸುಮಾರು 40 ಲಕ್ಷ ಮೌಲ್ಯದ ಭತ್ತ ಖರೀದಿಸಿದ್ದ ವ್ಯಾಪಾರಿ
- ರೈತರಿಗೆ ಹಣ ಪಾವತಿಸದೆ ಡಿ.3ರಂದು ಊರನ್ನೇ ಬಿಟ್ಟು ಪರಾರಿ ಆಗಿದ್ದ
- ಈ ಬಗ್ಗೆ ಉಪವಿಭಾಗೀಯ ಅಧಿಕಾರಿಗಳಿಗೆ ದೂರು ನೀಡಿದ್ದ ರೈತರು
- ನೂತನ ಕೃಷಿ ಕಾಯ್ದೆ ಅನ್ವಯ ಮನೆ, ಭೂಮಿ ಜಪ್ತಿ ಮಾಡಿ ಹರಾಜು
- ಬಂದ ಹಣವನ್ನು ಸಂತ್ರಸ್ತ ರೈತರಿಗೆ ವಿತರಿಸಿದ ಮ.ಪ್ರ. ಅಧಿಕಾರಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ