ಕಾಶ್ಮೀರ ಚುನಾವಣೆ, ಕಮಲ ಕಮಾಲ್: ಗುಪ್ಕಾರ್ ಗೆದ್ದರೂ ಬಿಜೆಪಿ ದೊಡ್ಡ ಪಕ್ಷ!

By Kannadaprabha NewsFirst Published Dec 24, 2020, 8:09 AM IST
Highlights

ಗುಪ್ಕಾರ್‌ ‘ದೊಡ್ಡ ಕೂಟ’, ಬಿಜೆಪಿ ‘ದೊಡ್ಡ ಪಕ್ಷ’| ಜಮ್ಮು-ಕಾಶ್ಮೀರ ಜಿಲ್ಲಾ ಪರಿಷತ್‌ ಚುನಾವಣೆ| ಗುಪ್ಕಾರ್‌ಗೆ 110, ಬಿಜೆಪಿಗೆ 74 ಸ್ಥಾನ| ಪಿಡಿಪಿಗೆ ಕೇವಲ 27, ಕಾಂಗ್ರೆಸ್‌ಗೆ 26 ಸೀಟು| ಜಯ ನಮ್ಮದೇ: ಬಿಜೆಪಿ, ಗುಪ್ಕಾರ್‌ ವಾದ

ಶ್ರೀನಗರ/ಜಮ್ಮು(ಡಿ.24): ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಮೊತ್ತಮೊದಲ ಬಾರಿ ನಡೆದ ಜಿಲ್ಲಾ ಅಭಿವೃದ್ಧಿ ಪರಿಷತ್‌ ಚುನಾವಣೆಯಲ್ಲಿ ಫಾರೂಖ್‌ ಅಬ್ದುಲ್ಲಾ ನೇತೃತ್ವದ ಗುಪ್ಕಾರ್‌ ಕೂಟ 110 ಸ್ಥಾನ ಜಯಿಸಿ ಅತಿದೊಡ್ಡ ಕೂಟವಾಗಿ ಹೊರಹೊಮ್ಮಿದೆ. ಆದರೆ 75 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಗುಪ್ಕಾರ್‌ ಕೂಟದಿಂದ ಹೊರಗಿದ್ದ ಪಿಡಿಪಿಗೆ 27 ಹಾಗೂ ಕಾಂಗ್ರೆಸ್‌ಗೆ 26 ಸ್ಥಾನ ಬಂದಿವೆ. ಪಕ್ಷೇತರರು 49 ಸ್ಥಾನಗಳಲ್ಲಿ ಜಯಿಸಿದ್ದಾರೆ. 280 ಸ್ಥಾನಗಳಲ್ಲಿ ಬುಧವಾರ ಸಂಜೆಯವರೆಗೆ 276 ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದವು. 4 ಸ್ಥಾನಗಳ ಎಣಿಕೆ ಇನ್ನೂ ಮುಗಿದಿರಲಿಲ್ಲ.

ಈ ಫಲಿತಾಂಶದ ಬೆನ್ನಲ್ಲೇ ಬಿಜೆಪಿ ಹಾಗೂ ಗುಪ್ಕಾರ್‌ ಕೂಟವು ಜಯ ತಮ್ಮದೇ ಎಂದು ಹೇಳಿಕೊಂಡಿವೆ. ‘ಇದು ಕಾಶ್ಮೀರದ ಜನ ಮೋದಿ ಪರ ನೀಡಿದ ಮತ. ನಮ್ಮದು ಅತಿದೊಡ್ಡ ಹಾಗೂ ಅತಿ ಹೆಚ್ಚು ಮತ ಪಡೆದ ಪಕ್ಷ. ತ್ರಿವರ್ಣ ಧ್ವಜ ವಿರೋಧಿ ಹೇಳಿಕೆ ನೀಡಿದ್ದ ಪಿಡಿಪಿಯ ಮೆಹಬೂಬಾ ಮುಫ್ತಿಗೆ ತಕ್ಕ ಪಾಠ. ಕಾಂಗ್ರೆಸ್‌ ಹಾಗೂ ಪಿಡಿಪಿಗಳು ಪಕ್ಷೇತರರಷ್ಟೂಮತ ಪಡೆದಿಲ್ಲ’ ಎಂದು ಬಿಜೆಪಿ ಚುನಾವಣಾ ಉಸ್ತುವಾರಿಯಾಗಿದ್ದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

‘ಆದರೆ ಬಿಜೆಪಿ ಪ್ರಬಲ ಇರುವ ಜಮ್ಮುನಲ್ಲೂ ನಮ್ಮ ಕೂಟ 35 ಸ್ಥಾನ ಪಡೆದಿದೆ. ಇದರಿಂದಾಗಿ ಜಮ್ಮುನಲ್ಲೂ ನಮ್ಮ ಪ್ರಾಬಲ್ಯ ಸಾಬೀತಾಗಿದೆ. ಅಲ್ಲದೆ, ಅತಿದೊಡ್ಡ ಕೂಟವಾಗಿ ಹೊರಹೊಮ್ಮಿದೆ. ಹೀಗಿದ್ದಾಗ ಕೇಂದ್ರ ಸರ್ಕಾರ ಈಗಲಾದರೂ ವಿಧಾನಸಭೆ ಚುನಾವಣೆ ಘೋಷಿಸುತ್ತಾ?’ ಎಂದು ಗುಪ್ಕಾರ್‌ ಕೂಟದ ಒಮರ್‌ ಅಬ್ದುಲ್ಲಾ ಕೇಳಿದ್ದಾರೆ.

click me!